ಕೂದಲು ಗುಂಗುರಿದೆಯೆಂದು
ಬುದ್ಧನಾಗಲು ಹೊರಟೆ…ಸುರುಳಿ
ಉರುಳಾಯಿತು
ಬುದ್ದನಷ್ಟೆ ಮಂದಹಾಸಬೀರ-
ಬೇಕೆಂದುಕೊಂಡರೂ ತುಸು
ಹೆಚ್ಚಾಯಿತು ನಕ್ಕಿದ್ದು
ಕಣ್ಣತೆರೆಯಬೇಕೆಂದುಕೊಂಡರೂ
ಅರೆಬಿರಿಯಲೂ ಇಲ್ಲ
ಕನಸಲ್ಲೂ ಭೋಧಿವೃಕ್ಷದ ಸುಳಿವಿಲ್ಲ
ಮಲಗಿರುವ ಮಗಳನ್ನು ಮನದಿನಿಯನನ್ನು
ತೊರೆಯದೇ ತೆರೆದುಕೊಳ್ಳಲಾರೆ …
ಅಶರೀರವಾಣಿಗೆ ಬೆಚ್ಚಿಬಿದ್ದು
ಮುಸುಕೆಳೆದೆ
ಸಿದ್ಧಾರ್ಥನೂ ಹೆಣ್ಣಾಗಿದ್ದರೆ ಬುದ್ದ
-ನಾಗಲು ಹೊರಡುತ್ತಿರಲಿಲ್ಲ
ನಿಟ್ಟುಸಿರು ಪಿಸುನುಡಿಯಿತು
-ಸಿಂಧು ಚಂದ್ರ, ಶಿರಸಿ, ಕಾರವಾರ ಜಿ.
*****