ಅನುದಿನ ಕವನ-೯೨೯, ಕವಿ:ದಯಾನಂದ, ಬೆಂಗಳೂರು, ಕವನದ ಶೀರ್ಷಿಕೆ: ಕುಸುಮ ಕವಿಗಳಿಗೆ….

ಕುಸುಮ ಕವಿಗಳಿಗೆ….

ಪರಾಕೊತ್ತೊತ್ತಿ ಪದ, ಲಯ,
ಲಾಸ್ಯ, ವಾಚ್ಯ, ಸೂಚ್ಯ, ವಿದ್ವತ್ತಿನ ಅರ್ಥ
ಸೋರಿಸಿಕೊಂಡಿದ್ದು
ಸಾಕು

ಕವಿತೆ ಕಟ್ಟಿ‌
ಕೋಟೆ ಕೊತ್ತಲ ಮೇಲೇರೇರಿ ನಿಂತು
ಝಂಡಾ ಹಾರಿಸಿ
ಪುಷ್ಪವೃಷ್ಟಿ ಸುರಿಸಿಕೊಂಡಿದ್ದು
ಸಾಕು.

ಪ್ರೇಮ, ವಿರಹ, ಮದಿರೆ ಅಮಲಿನ
ಪದ್ಯ ಹೊಸೆದು,
ಪದ ಚಮತ್ಕಾರ ಹೂಂಕಾರ ಮಾಡಿ,
ಹೂಂ ಹೂಂ ಕರಿಸಿಕೊಂಡಿದ್ದು
ಸಾಕು.

ಪದವವೆ
ಮಲ ಬಳಿದು ಊರ
ಕೊಳೆತೊಳೆದವರ ಕೈಗಳಲ್ಲಿ,
ಬೆವರ ಹರಿಸಿ ಸವೆಯುವವರ
ಜೋಪಡಿಗಳಲ್ಲಿ,
ಬೆತ್ತ, ದೊಣ್ಣೆ, ಕೋಲುಗಳ ಏಟು ತಿಂದು
ಬಾಸುಂಡೆಯಾಗುತ್ತಿರುವವರ
ಹೆಪ್ಪುಗಟ್ಟಿದ ರಕ್ತದಲ್ಲಿ,
ತುಳಿದವರ ಕಾಲ ಕೆಳಗೆ ಮಣ್ಣಾಗಿ
ಮಣ್ಣು ಸೇರಿಯೂ
ನಿತ್ಯ ನೋಯುತ್ತಿರುವವರ
ಎದೆಗಳಲ್ಲಿ.

ಪದವವೆ
ಬೊಗಸೆಯೊಡ್ಡಿ ನೀರು ಕುಡಿದ
ಆರದ ಬಿಕ್ಕಳಿಕೆಗಳಲ್ಲಿ,
ಮುಟ್ಟಿಸಿಕೊಳ್ಳದೆ ಜೀತಗೇದ ರಟ್ಟೆಗಳಲ್ಲಿ,
ಊರೊಳಗಿದ್ದೂ ಊರವರಾಗದ ಕೇರಿಗಳ‌ ಕಂಗಳಲ್ಲಿ,
ನೀಲಿಯಾಗದ ನೀಲಿಗಳಲ್ಲಿ.
ಪದವವೆ
ಸತ್ತ ಮೇಲೂ ಸಮಾದಿ ಕಾಣದ ಆತ್ಮಗಳಲ್ಲಿ.


-ದಯಾನಂದ, ಬೆಂಗಳೂರು
*****