ರಾಜ್ಯ ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿ: ಆರೋಗ್ಯ ಮತ್ತು ಆನಂದಕ್ಕೆ ಕ್ರೀಡೆಗಳು ಪೂರಕ -ಎಸ್.ಪಿ ರಂಜಿತ್ ಕುಮಾರ್ ಬಂಡಾರು

ಬಳ್ಳಾರಿ, ಜು.21:ರಾಜ್ಯಮಟ್ಟದ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ಪಂದ್ಯಾವಳಿಗೆ ನಗರದ ಜಿಲ್ಲಾ ಕ್ರೀಡಾಂಗಣ ಬಳಿಯ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ಶುಕ್ರವಾರ ಚಾಲನೆ ದೊರೆಯಿತು.
ಪಂದ್ಯಾವಳಿಯ ಉದ್ಘಾಟಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಅವರು ಮಾತನಾಡಿ, ಆರೋಗ್ಯಕ್ಕಾಗಿ ಕ್ರೀಡೆ, ಆನಂದಕ್ಕಾಗಿ ಕ್ರೀಡೆ ಎಂಬ ಭಾವನೆ ಎಲ್ಲರಲ್ಲೂ ಮೂಡಬೇಕು. ಕ್ರೀಡೆಯ ಸಂತಸ ಪಾಲ್ಗೊಳ್ಳುವಿಕೆಯಲ್ಲಿ ಅಡಗಿದೆ ಎಂದರು.
ರಾಜ್ಯದ ನಾನಾ ಜಿಲ್ಲೆಗಳಿಂದ ಆಗಮಿಸಿರುವ ಕ್ರೀಡಾಪಟುಗಳು ಬಳ್ಳಾರಿಯಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿದ ಸ್ಮರಣೀಯ ಕ್ಷಣಗಳು ನಿಮ್ಮದಾಗಲಿ ಮತ್ತು ರಾಷ್ಟ್ರೀಯ ಮಟ್ಟದ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಹೆಸರು ಮಾಡುವಂತಾಗಲಿ ಎಂದು ಹಾರೈಸಿದರು.


ಪಂದ್ಯಾವಳಿ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಮಾಜಿ ಶಾಸಕ ನಾರಾ ಸೂರ್ಯನಾರಾಯಣ ರೆಡ್ಡಿ, ‘ ನಾನು ಬಾಲ್ಯದಲ್ಲಿ ಬ್ಯಾಡ್ಮಿಂಟನ್ ಹೆಚ್ಚು ಆಡುತ್ತಿದ್ದೆ. ದೈಹಿಕ ದಣಿಕೆಗೆ ಬ್ಯಾಡ್ಮಿಂಟನ್ ಅತ್ಯುತ್ತಮ ಆಟ. ಬಳ್ಳಾರಿಯಲ್ಲಿ ರಾಜ್ಯಮಟ್ಟದ ಚಾಂಪಿಯನ್ ಶಿಪ್ ಪಂದ್ಯಾವಳಿ ನಡೆಯುತ್ತಿರುವುದು ವೈಯುಕ್ತಿಕವಾಗಿ ನನಗೆ ಅತ್ಯಂತ ಸಂತಸ ತಂದಿದೆ. ರಾಜ್ಯದ ನಾನಾ ಜಿಲ್ಲೆಗಳಿಂದ ಆಗಮಿಸಿರುವ ಕ್ರೀಡಾಪಟುಗಳು ಅತ್ಯುತ್ತಮ ‌ಕ್ರೀಡಾ ಪ್ರದರ್ಶನ ನೀಡಿ, ಕ್ರೀಡಾಸ್ಫೂರ್ತಿ ಮೆರೆಯಬೇಕು ಎಂದರು.‌
ಪ್ರಾಸ್ತಾವಿಕ ಮಾತನಾಡಿದ ಬಳ್ಳಾರಿ ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಧ್ಯಕ್ಷ ಮತ್ತಿಹಳ್ಳಿ ಅಹಿರಾಜ್, ಅಸೋಸಿಯೇಷನ್ ವತಿಯಿಂದ ಈವರೆಗೆ ಹಮ್ಮಿಕೊಂಡಿರುವ ಕ್ರೀಡಾ ಚಟುವಟಿಕೆಗಳ ಕುರಿತು ವಿವರಿಸಿದರು. ಅಸೋಯೇಷನ್ ಮಾಜಿ ಅಧ್ಯಕ್ಷ ಜೆ.ಎಸ್.
ಬಸವರಾಜ್ ಮಾತನಾಡಿದರು. ‌ಡಾ.ರಾಧಿಕಾ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.
ಬಳಿಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಸೇರಿದಂತೆ ಕಾರ್ಯಕ್ರಮದ ಅತಿಥಿಗಳು ಬ್ಯಾಡ್ಮಿಂಟನ್ ಆಡುವ ಮೂಲಕ ಪಂದ್ಯಾವಳಿಗೆ ಚಾಲನೆ ನೀಡಿದರು.
ಆರು ದಿನಗಳ ಚಾಂಪಿಯನ್ ಶಿಪ್ ಪಂದ್ಯಾವಳಿಗೆ ರಾಜ್ಯದ ವಿವಿಧ ಜಿಲ್ಲೆಗಳ 600 ಕ್ಕೂ ಹೆಚ್ಚು ಬಾಲಕ, ಬಾಲಕಿಯರು ಭಾಗವಹಿಸಿದ್ದಾರೆ.
ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್,
ಬಳ್ಳಾರಿ ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಷನ್ ಹಾಗೂ ಜಿಲ್ಲಾಡಳಿತ ಸಹಯೋಗದಲ್ಲಿ ಯೋನೆಕ್ಸ್ ಸನ್ ರೈಸ್ ರಾಜ್ಯಮಟ್ಟದ ಸಬ್ ಜೂನಿಯರ್ ಚಾಂಪಿಯನ್ ಶಿಪ್ ಆಯೋಜಿಸಿದ್ದಾರೆ.