ಕಾವಳದ ರಾತ್ರಿಯ ಒಂದು ದಿನ
ಮೂರು ಕಲ್ಲಿನ ಒಲೆಯ
ಮುಂದೆ ಊದಗೊಳವೆ ಹಿಡಿದು
‘ಫೂ’ ಎನ್ನುವ ಅವ್ವ
ಗಾಳಿಯೂದಿದಂತೆಲ್ಲಾ ಏರಿಳಿವ ಪುಪ್ಪುಸ
ಅರೆ ತೆರೆದ ಕುಪ್ಪುಸದ ಕುಣಿಯೊಳಗೆ
ಎದ್ದು ಕಾಣುವ ಪಕ್ಕೆಲುಬು
ಹೊಗೆಯೊಳಗೆ ಅವಳೊ
ಅವಳೊಳಗೆ ಹೊಗೆಯೊ
ಹೊಗೆಯಡರಿದ ಕನಸುಗಳು ಒಳಗೊಳಗೆ
ಸುತ್ತಿರಲು
ಹೆಪ್ಪಿಟ್ಟ ಮೌನ ಕಪ್ಪಿಟ್ಟ ಸೂರು ಸೆಕೆ
ಮೇಲೆ ಕಬ್ಬಿನ ಸೋಗೆ
ದೇವರ ಪಟ ಪುಟ ತಿರುವದ ದಿನದರ್ಶಿಕೆ
ಆಗೊಮ್ಮೆ ಈಗೊಮ್ಮೆ ಮಾತ್ರ
ಸಮಯದ ಸಂಖ್ಯೆಗಳ ಮೇಲೆ
ಮುಳ್ಳಾಡಿಸುವ ಗಡಿಯಾರ
ಮುರುಕು ಮಂಚದ ಮೇಲೆ ಮಲಗಿದ
ಅಪ್ಪ ನ
ಎದಿರು ಆಗಾಗ ಹೊಳೆಯುವ
ಕಪ್ಪು ಬಿಳುಪಿನ ಟೀವಿಯೊಳಗೆ
ಎಲ್ಲೋ ಬೀಳುವ ಮಳೆಯ ಚಿತ್ರ
ಬೀಳುವ ಸರಕಾರ
ಏಳುವ ಸರಕಾರ ಬಂಡಾಯದ ಮಂತ್ರಿ
ಮಂತ್ರ ಮಾಂಗಲ್ಯ ಧಾರಾವಾಹಿ
ಜಾಹಿರಾತಿನ ನಡು ನಡುವೆ ಬೀಡಿ ಅಂಟಿಸಿ
ಸಣ್ಣಗೆ ಕೆಮ್ಮುವ ಅಪ್ಪ
ಸಣ್ಣ ದೀಪದ ಕೆಳಗೆ
ಓದುವ ಮಗ – ಹಿಸ್ಟರಿ ಸಿಲೆಬಸಿನ ಯುದ್ಧ
ಸೇತುವೆ ದಾಟಿದ ಸೇನಾ ತುಕುಡಿ
ಇಸವಿ
ಪಾಣಿಪತ್ ಕದನ ಮೊಘಲರ ಪತನ
ಹೊರಗೆ ಸಣ್ಣ ಮಳೆಗೆ ತೋಯುತ
ಸಿಡಿಲಿಗೆ ಕಾತರಿಸಿ ನಿಂತ ಹಳೆಯ ಬೋಳು ಮರ
ಭಗ್ಗನೇ ಹೊತ್ತಿಕೊಂಡ ಒಲೆಯ
ಬೆಂಕಿ
ಉದರ ಕಿಚ್ಚಿಗೆ ಬೆಂದ ಅವ್ವ
ಈಗ ಪುಟವಿಟ್ಟ ಚಿನ್ನದ ಹಾಗೆ ಫಳ ಫಳ
ಹೊಳೆವ ಮುಖ
ಎಲ್ಲಿ ಹೊಗೆ? ಕಪ್ಪಿಟ್ಟ ಸೋಗೆ ?
ಕಪ್ಪನೆಯ ಆಗಸದ ತವೆಯೊಳಗೆ ಇನ್ನಷ್ಟೇ ಮೂಡುವ
ಬೆಳ್ಳನೆಯ ಚಂದಿರನಂತೆ ಅರಳಿ ಉಬ್ಬುವ
ಬಿಳಿ ಜೋಳದ ರೊಟ್ಟಿ
ಹಿಸ್ಟರೀ ಮುಗಿಸಿದ
ಮಗನ ಮುಖದ ಮೇಲೊಂದು
ಈಗ ಖಡ್ಗದ ಮಿಂಚಿನ ಹಾಗೆ
ಮೂಡಿದ ಬೆಳ್ಳನೆಯ ನಗೆ
– ಡಾ. ಲಕ್ಷ್ಮಣ ವಿ ಎ, ಬೆಂಗಳೂರು
*****