ಡಾ. ಬಿ. ಆರ್ ಅಂಬೇಡ್ಕರ್ ಸಾಹಿತ್ಯ ಅಕಾಡೆಮಿ ಸ್ಥಾಪಿಸಬೇಕು -10ನೇ ಅಖಿಲಭಾರತ ದಲಿತ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಡಾ. ‌ಎಚ್ ಟಿ ಪೋತೆ ಒತ್ತಾಯ

ವಿಜಯಪುರ, ಜು.29:ರಾಜ್ಯದಲ್ಲಿ ಡಾ. ಬಿ. ಆರ್ ಅಂಬೇಡ್ಕರ್ ಸಾಹಿತ್ಯ ಅಕಾಡೆಮಿ ಸ್ಥಾಪಿಸಬೇಕು ಎಂದು ಸಾಹಿತಿ , ಸಂಶೋದಕ, ಜಾನಪದ ವಿದ್ವಾಂಸ ಡಾ. ಎಚ್.ಟಿ. ಪೋತೆ ಅವರು ರಾಜ್ಯ ಸರಕಾರವನ್ನು ಒತ್ತಾಯಿಸಿದರು.
ಗದಗಿನ ದಲಿತ ಸಾಹಿತ್ಯ ಪರಿಷತ್ ರಾಜ್ಯ ಘಟಕ ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರ ದಲ್ಲಿ ಆಯೋಜಿಸಿರುವ ಬೆಳ್ಳಿ ಹಬ್ಬದ ಸಂಭ್ರಮ ಹಾಗೂ 10 ನೆಯ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನವ ಬೌದ್ಧರಿಗಾಗಿ ಪ್ರತ್ಯೇಕ ನಿಗಮ ಸ್ಥಾಪಿಸಬೇಕು, ದಲಿತ ಚಳವಳಿ ಹೋರಾಟಗಾರರ ಹಾಗೂ ಚಿಂತಕರ ಜೀವನ ಕಥನ ಗ್ರಂಥಗಳ ಪ್ರಕಟಣೆಗೆ ಅನುದಾನ ನೀಡಬೇಕು ಹಾಗೂ ಸಫಾಯಿ ಕರ್ಮಚಾರಿ ಕೆಲಸದಲ್ಲಿ ಮಾನಬ ಬಳಕೆ ಬದಲು ಯಂತ್ರೋಪಕರಣಗಳನ್ನು ಬಳಸುವುದಾಗ ಬೇಕು ಹಾಗೂ ಸಫಾಯಿ ಕರ್ಮಚಾರಿ ಉದ್ಯೋಗದಲ್ಲಿದ್ದಾರೋ ಅವರಿಗೆ ಪರ್ಯಾಯ ಉದ್ಯೋಗಗಳನ್ನು ನೀಡಬೇಕು ಎಂದು ರಾಜ್ಯ ಸರಕಾರಕ್ಕೆ ತಮ್ಮ ಹಕ್ಕೋತ್ತಾಯವನ್ನು ಅಧ್ಯಕ್ಷೀಯ ಭಾಷಣದಲ್ಲಿ ಪ್ರಬಲವಾಗಿ ಮಂಡಿಸಿದರು.
ಕನ್ನಡದ ದಲಿತ ಸಾಹಿತ್ಯವು ರೂಪು ಪಡೆದಿರುವುದು ಸಾಹಿತ್ಯಿಕ ಭಾಷೆಯ ಆವರಣದಲ್ಲಿ ಎಂದು ಹೇಳಿದರು.
ಕನ್ನಡದ ದಲಿತ ಸಾಹಿತ್ಯವು ಭಾರತೀಯ ಸಂದರ್ಭದಲ್ಲಿ ಸಮೃದ್ಧ ನೆಲೆಯನ್ನು ಪಡೆದಿದೆ. ಕಾವ್ಯ, ಕಥೆ, ಕಾದಂಬರಿ, ಆತ್ಮಕಥೆ, ನಾಟಕ ಪ್ರಕಾರಗಳು ಸೃಜನಶೀಲತೆಯ ಉತ್ಕೃಷ್ಟತೆಯನ್ನು ಪಡೆದಿವೆ ಎಂದು ತಿಳಿಸಿದರು.
ಬಿ.ಶಾಮಸುಂದರ್, ಕುಮಾರ ಕಕ್ಕಯ್ಯ ಪೋಳ,
ಜಿ. ವೆಂಕಟಯ್ಯ, ಸೋಸಲೆ ಸಿದ್ದಪ್ಪ, ಬೀದರಿನ ಗವಾಯಿಗಳು, ಎನ್.‌ನರಸಿಂಹಯ್ಯ ಅವರು ಮೊದಲ‌ ತಲೆಮಾರಿನ ದಲಿತ ಲೇಖಕರಾಗಿ ಕನ್ನಡ ದಲಿತ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅಪಾರವಾದುದು ಎಂದು ಡಾ.ಪೋತೆ ಹೇಳಿದರು.


ದಲಿತರಲ್ಲಿ ಜಾಗೃತಿಯ ಪ್ರಜ್ಞೆಯನ್ನು ಮೂಡಿಸುವಲ್ಲಿ ನಾಡಿನ ದಲಿತ ಚಳವಳಿಗಳ ಪಾತ್ರ ಅನನ್ಯ. ಆರಂಭದ ದಿನಗಳಲ್ಲಿ ಚಳವಳಿಗಳು ತುಂಬಿದ ಉತ್ಸಾಹವೇ ಪ್ರಸ್ತುತ ದಲಿತ ಪ್ರಜ್ಞೆ ಇಷ್ಟೊಂದು ಪ್ರಮಾಣದಲ್ಲಿ ಬೆಳೆಯಲು ಕಾರಣವಾಗಿದೆ ಎಂದು ಅಭಿಪ್ರಾಯ ಪಟ್ಟರು.
ದೇಶಕ್ಕೆ ಸ್ವಾತಂತ್ರ್ಯ ಬಂದು ಎಪ್ಪತ್ತೈದು ವರ್ಷಗಳಾದರೂ ಬಡತನ ಎಲ್ಲಾ ಸಮುದಾಯಗಳಲ್ಲೂ ಹಾಗೆಯೇ ಇದೆ. ಸಹಸ್ರಾರು ದಲಿತ ಸಮುದಾಯಗಳು ಬಡತನದ ಕೆಳ ರೇಖೆಗಿಂತ ಮೇಲೆಳಲು ಸಾಧ್ಯವಾಗಿಲ್ಲ ಎಂದು ವಿಷಾಧಿಸಿದರು.
ಸಂವಿಧಾನದ ಸೌಲಭ್ಯಗಳು ತಳ ವರ್ಗದವರಿಗೆ ಸಿಗುವುದಕ್ಕಿಂತ ದಲ್ಲಾಳಿಗಳ ಹಾಗೂ ಮಧ್ಯವರ್ತಿ ಗೂಂಡಾಗಳ ಹಾಗೂ ಜಾತಿ ರಾಜಕಾರಣದವರ ಕೈಚಳಕಕ್ಕೆ ಒಳಗಾಗಿ ಸುಳ್ಳು ಜಾತಿ ಪ್ರಮಾಣಪತ್ರ ಪಡೆದವರಿಗೆ ಮೀಸಲಾತಿ ದಕ್ಕುತ್ತಿದೆ ಎಂದು ಡಾ.‌ಪೋತೆ ದೂರಿದರು.
ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹಲವು ಯೋಜನೆಗಳಲ್ಲಿ ಸಾಮಾಜಿಕ ಬಡತನವನ್ನು ಉತ್ತಮೀಕರಿಸಲು ಇನ್ನೂ ಹೆಚ್ಚಿನ ರೀತಿಯಲ್ಲಿ ಪ್ರಯತ್ನಿಸ ಬೇಕು ಆದರೆ ಅಂಥ ಪ್ರಯತ್ನಗಳು ಸಾಕಾಗೋಲ್ಲ ಎನ್ನುವುದಕ್ಕೆ ಮಾದ್ಯಮಗಳಲ್ಲಿ ಹಲವಾರು ಅನ್ವೇಷಿತ ವರದಿಗಳು ಸಾಬೀತು ಪಡಿಸಿವೆ ಎಂದರು.
ದಲಿತ ಸಮುದಾಯದ ಸಾಮಾಜಿಕ ಜೀವನ ಮಟ್ಟ ಸುಧಾರಿಸುವಲ್ಲಿ ಆರ್ಥಿಕ ಸಬಲೀಕರಣ ಮತ್ತು ಇತರೆ ಸಮುದಾಯದವರ ಮಾನವೀಕರಣದ ಪೋಷಣೆ ಮತ್ತು ಆಂತರಿಕ ವಪ್ರೀತಿಯೂ ಅಗತ್ಯವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ದಲಿತ ಶೋಷಿತ, ಮಹಿಳಾ ಸಮುದಾಯದಲ್ಲಿ ಶಕ್ತಿ ತುಂಬಲು ಬುದ್ಧ, ಬಸವ, ಅಂಬೇಡ್ಕರ್ ವಿಚಾರಗಳನ್ನು ಸರಕಾರ, ಸಾರ್ವಜನಿಕರು, ಸಂಘ ಸಂಸ್ಥೆಗಳು ಹೆಚ್ಚೆಚ್ಚು ಪ್ರಚಾರ ಮಾಡಬೇಕು ಎಂದು ಡಾ.‌ಪೋತೆ ಒತ್ತಾಯಿಸಿದರು.


ವಿಜಯಪುರ ಜಿಲ್ಲಾ ಉಸ್ತುವಾರಿ ಹಾಗೂ ಬೃಹತ್ ಕೈಗಾರಿಕಾ ಸಚಿವರಾದ ಎಂ. ಬಿ ಪಾಟೀಲ್ ಸಮ್ಮೇಳನಕ್ಕೆ ಚಾಲನೆ ನೀಡಿದರು. ದಸಾಪ ರಾಜ್ಯಾಧ್ಯಕ್ಷ ಡಾ. ಅರ್ಜುನ ಗೊಳಸಂಗಿ, ವಿಜಯಪುರದ ಬುದ್ಧ ವಿಹಾರದ ಸಂಘಪಾಲ ಭಂತೇಜಿ ಅವರು ನೇತೃತ್ವವಹಿಸಿದ್ದರು. ವಿದ್ವಾಂಸರಾದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಅಲ್ಲಾಗಿರಿರಾಜ, ಹೋರಾಟಗಾರ ಡಾ. ಡಿ ಜಿ ಸಾಗರ್, ವಿಧಾನಪರಿಷತ್ತಿನ ಮಾಜಿ ಸದಸ್ಯ ಡಿ.ಎಸ್. ವೀರಯ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಜು ಆಲಗೂರ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.


—–