ಅನುದಿನ‌ ಕವನ-೯೪೩, ಕವಿ: ಮಧುಸೂಧನ್ ಬೆಳಗುಲಿ, ಮಡಿಕೇರಿ, ಕವನದ ಶೀರ್ಷಿಕೆ: ಮರಕ್ಕೆ ಸಿಕ್ಕ ಪಟ

ಮರಕ್ಕೆ ಸಿಕ್ಕ ಪಟ

ಆ ರಸ್ತೆ ಬದಿಯ ಮರದ ಕೊಂಬೆಯಲ್ಲಿ
ಸಿಕ್ಕಿ ನೇತಾಡುತ್ತಿದ್ದ ಗಾಳಿಪಟ
ಪುಟ್ಟ ಕಂದನ ಕೈಬಿಟ್ಟು
ತನ್ನ ಸೂತ್ರದೊಂದಿಗೇ ಪತರುಗುಟ್ಟಿತ್ತಿದೆ

ಪಟ ಹಸಿರು ಬಣ್ಣದ್ದೇ ಆದರೂ
ಹೊಂದಲೊಲ್ಲದು ಹಸಿಗೂ ಹಸಿವಿಗೂ
ನಲಿವ ಮಾತೆಲ್ಲಿಯದು ಸೂತ್ರ ಹರಿದ ಮೇಲೆ
ಗಾಳಿ ಬಂದೆಡೆ ತೂರಿಕೊಂಡವರು
ತಗುಲಿಹಾಕಿಕೊಳ್ಳುವುದು ಖಾತರಿ

ಪಾಪ, ಪುಟ್ಟ ಹೆಜ್ಜೆಯ ಪುಟ್ಟ
ಹೆಜ್ಜೆಗೊಮ್ಮೆ ತಿರುಗಿನೋಡುತ್ತಿದ್ದಾನೆ
ಎಂದು ಉದುರುವುದೋ ನೆಲಕ್ಕೆ
ಪಟ ಹರಿದರೂ ಬಿಲ್ಲಿಗಾದರೂ
ಬಳಸಬಹುದಲ್ಲವೇ ಬಿದಿರನ್ನು

ಮುಂದೊಮ್ಮೆ
ಬೋರ್ಗಾಳಿಗೆ ಹಸುರೆಲೆ ತೊರೆವ ಪಟ
ಮತ್ಯಾರದೋ ತೆಕ್ಕೆಗೆ ಸಿಕ್ಕಿ ನಿಟ್ಟುಸಿರಾಗಲಿದೆ
ಮತ್ತೆ ಹಾರಾಟದ ಕನಸು ಕಾಣುತ್ತಾ ….


-ಮಧುಸೂಧನ್ ಬೆಳಗುಲಿ, ಮಡಿಕೇರಿ
*****