ಬಳ್ಳಾರಿ,ಆ.2: ಗೃಹಲಕ್ಷ್ಮಿ ಯೋಜನೆಯ ನೋಂದಣಿಗೆ ಫಲಾನುಭವಿಗಳಿಂದ ಹಣ ವಸೂಲಿ ಮಾಡಿರುವ ಗ್ರಾಮ ಒನ್ ಸೇವಾ ಕೇಂದ್ರದ ಕಂಪ್ಯೂಟರ್ ಆಪರೇಟರ್ ವಿರುದ್ಧ ಪ್ರಕರಣ ಜಿಲ್ಲೆಯಲ್ಲಿ ದಾಖಲಾಗಿದೆ.
ಸಂಡೂರು ತಾಲೂಕಿನ ಅಂಕಮನಾಳು ಗ್ರಾಮದ ಗ್ರಾಮಒನ್ ಸೇವಾ ಕೇಂದ್ರದ ಕಂಪ್ಯೂಟರ್ ಆಪರೇಟರ್ ದೇವರಾಜ್ ಎಂಬುವರು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಪ್ರತಿ ಅರ್ಜಿದಾರರಿಂದ ರೂ.50 ಹಣ ಪಡೆಯುತ್ತಿರುವುದು ಕಂಡುಬಂದಿದೆ. ಸಂಡೂರು ತಾಲೂಕಿನ ಚೋರನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಂಕಮನಾಳು ಗ್ರಾಮದ ಮಾರೆಮ್ಮ ಗುಡಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕುಳಿತು, ಉದ್ದೇಶ ಪೂರ್ವಕವಾಗಿ ಗೃಹಲಕ್ಷ್ಮಿ ಫಲಾನುಭವಿಗಳಿಂದ ಪ್ರತಿ ಅರ್ಜಿಗೆ ರೂ.50 ಹಣ ಸ್ವೀಕರಿಸಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಮಂಗಳವಾರ ಮಧ್ಯಾಹ್ನ 2 ಗಂಟೆ ಸುಮಾರಿನಲ್ಲಿ ಅಧಿಕಾರಿಗಳ ತಂಡವು ದಾಳಿ ನಡೆಸಿತ್ತು.
ಸಂಡೂರು ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಳನಾಗಪ್ಪ, ಅಂಕಮನಾಳು ಗ್ರಾಮದ ಗ್ರಾಮ ಆಡಳಿತಾಧಿಕಾರಿ ಬಿ.ಕೊಟ್ರಪ್ಪ, ಚೋರನೂರು ಪಟ್ಟಣದ ಕಂದಾಯ ನಿರೀಕ್ಷಕ ಬಿ.ವೀರೇಂದ್ರ ಕುಮಾರ ಅವರು ದಾಳಿ ನಡೆಸಿ ಅಕ್ರಮವನ್ನು ಪತ್ತೆ ಹಚ್ಚಿದ್ದಾರೆ.
——-