ಅನುದಿನ ಕವನ-೯೪೪, ಕವಿಯಿತ್ರಿ:ಶ್ರೀ, ಮಂಗಳೂರು, ಕಾವ್ಯ ಪ್ರಕಾರ: ಗಜಲ್

ಗಜಲ್

ಕಳೆದು ಹೋಗಿರುವ ನಿದ್ದೆಗೂ ಕನಸುಗಳ ಸುಂಕ
ಕಟ್ಟಬೇಕಿದೆ ಇಲ್ಲಿ
ಗೀರುವ ಮುಳ್ಳುಗಳ ನಡುವೆಯೇ ಗುಲಾಬಿಯನ್ನು ಹುಡುಕಬೇಕಿದೆ ಇಲ್ಲಿ

ಕಂಡ ಕಂಡಲೆಲ್ಲಾ ಬಯಲ ಬಿಸಿಲ ಮಾಯಾಜಾಲ ಕಣ್ಮುಂದಿನ ಮರೀಚಿಕೆ
ಕಣ್ಕುಕ್ಕುವ ಬೆಳಕಿನ ನಡುವೆಯೇ ಪ್ರೇಮದ ನಿಜ ಬಣ್ಣವ ಕಾಣಬೇಕಿದೆ ಇಲ್ಲಿ

ಉನ್ಮಾದದ ನಗುವಿನ ಬಯಕೆಯಿಂದಲೇ ತುಂಬಿದೆ ಭ್ರಮಾಲೋಕದ ಜಗತ್ತು
ಕಡು ಬಯಕೆಯ ಜ್ವಾಲೆಗಳ ನಡುವೆ ನಿಷ್ಕಲ್ಮಶ ಪ್ರೀತಿಯ ಹರಡಬೇಕಿದೆ ಇಲ್ಲಿ

ನೆಲೆ ಕಾಣದ ದಿಕ್ಕೆಟ್ಟ ಅಲೆದಾಟಕ್ಕೆ ದಣಿದುಹೋಗಿದೆ ಈ ಮುಗ್ಧ ಜೀವ
ನಿನ್ನ ಸಾನಿಧ್ಯದ ದಿವ್ಯ ಪ್ರೇಮದ ಮೋಹಕ್ಕೆ ಅನವರತ ಮಣಿಯಬೇಕಿದೆ ಇಲ್ಲಿ

ಧಗೆಯುಂಡ ಕಾಯುವಿಕೆಯ ಅನನ್ಯ ತಪನೆಯಿಂದ ಬಿರಿದಿಹುದು ಶ್ರೀ ಹೃದಯ
ನಿನ್ನೊಲುಮೆಯ ತಣ್ಣನೆಯ ಅಮೃತ ಧಾರೆ ಎದೆ ತುಂಬಾ ಹರಿಯಬೇಕಿದೆ ಇಲ್ಲಿ

– ಶ್ರೀ, ಮಂಗಳೂರು
(ಶ್ರೀಲಕ್ಷ್ಮಿ, ಆದ್ಯಪಾಡ)
*****