ಬಳ್ಳಾರಿ, ಆ.3: ಬಳ್ಳಾರಿ ರಾಘವರು ಅಭಿನಯದಲ್ಲಿ ಅಧಿಪತಿ ಎಂದು ರಾಘವ ಸ್ಮಾರಕ ಸಂಸ್ಥೆಯ ಅಧ್ಯಕ್ಷ ಕೆ. ಕೋಟೇಶ್ವರ ರಾವ್ ಅವರು ಹೇಳಿದರು.
ಸಂಸ್ಥೆಯ ಅಮೃತ ಮಹೋತ್ಸವ ಮತ್ತು ನಾಟ್ಯ ಕಲಾ ಪ್ರಪೂರ್ಣ ಬಳ್ಳಾರಿ ರಾಘವ 143ನೇ ಜಯಂತಿ, ರಾಘವ ಪ್ರಶಸ್ತಿ ಪ್ರದಾನ ಮತ್ತು ನಾಟಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತೀಯ ರಂಗಭೂಮಿಯ ಇತಿಹಾಸದಲ್ಲಿ ರಾಘವರಿಗೆ ಪ್ರತ್ಯೇಕ ಸ್ಥಾನವಿದೆ ಬಳ್ಳಾರಿ ಗಡಿ ಭಾಗ ಆಗಿರುವುದರಿಂದ ಕನ್ನಡ ಮತ್ತು ತೆಲುಗು ರಂಗಭೂಮಿಗೆ ಸಮಾನವಾದ ಪ್ರಶಸ್ತಿಯನ್ನು ನೀಡುತ್ತಿದ್ದೇವೆ ಎಂದರು.
ಕಲಾವಿದರಿಗೆ ಪ್ರೋತ್ಸಾಹ ಮುಖ್ಯವಾಗಿ ಬೇಕು ಮುಂದಿನ ದಿನಗಳಲ್ಲಿ ಯುವಕರಿಗಾಗಿಯೇ ಪ್ರತ್ಯೇಕ ನಾಟಕ ತರಬೇತಿಯನ್ನು ಪ್ರಾರಂಭಿಸಲು ಉದ್ದೇಶಿಸಿದ್ದೇವೆ ಭಾವಿಸಿದ್ದೇವೆ ಎಂದು ತಿಳಿಸಿದರು.
ಬಳ್ಳಾರಿ ರಾಘವ ರಾಜ್ಯ ಪ್ರಶಸ್ತಿಯನ್ನು ರಂಗ ಕಲಾವಿದೆ ಇಳಕಲ್ಲಿನ ಉಮಾರಾಣಿ ಬಾರಿಗಿಡದ ಅವರಿಗೆ,
ಬಳ್ಳಾರಿ ರಾಘವ ಜಿಲ್ಲಾ ಪ್ರಶಸ್ತಿಯನ್ನು ನಗರದ ಪಿ ಎಂ ನಟರಾಜ್ ಮತ್ತು ಕೆ ಓಂಕಾರಮ್ಮ ಅವರಿಗೆ ನೀಡಿ ಗೌರವಿಸಲಾಯಿತು.
ಸಮಾರಂಭ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಗೌರವಾಧ್ಯಕ್ಷ ಕೆ ಚನ್ನಪ್ಪಾವರು, ನಾಟಕದಲ್ಲಿ ಪಾತ್ರದ ಸಂಭಾಷಣೆ ಬಹಳ ಮುಖ್ಯವಾಗಿರಬೇಕು ಕಲಾವಿದರಿಗೆ ನಾಟಕದ ಶಿಕ್ಷಣ ನೀಡಬೇಕು ಎಂಬುದು ರಾಘವರ ಕನಸಾಗಿತ್ತು. ರಾಘವ ಅವರು ತಮ್ಮ ನಟನೆಯ ಮುಖಾಂತರ ಪ್ರೇಕ್ಷಕರನ್ನ ಮಂತ್ರಮುಗ್ಧರನ್ನಾಗಿರಿಸುತ್ತಿದ್ದರು. ಇಂಥಹ ಮಹನೀಯರ ಹೆಸರಿನಲ್ಲಿ ಪ್ರತಿ ವರ್ಷ ರಾಜ್ಯ ಮತ್ತು ಜಿಲ್ಲಾಮಟ್ಟದ ಪ್ರಶಸ್ತಿಗಳನ್ನು ನೀಡುತ್ತಿರುವುದು ನಮ್ಮ ಸಂಸ್ಥೆಯ ಗೌರವವನ್ನು ಹೆಚ್ಚಿಸಿದೆ ಎಂದು ಹೇಳಿದರು.
ಉಮಾರಾಣಿ ಬಾರಿಗಿಡದ ಮಾತನಾಡಿ, ಸ್ತ್ರೀಯರ ಪಾತ್ರವನ್ನು ಸ್ತ್ರೀಯರೇ ಅಭಿನಯಿಸಬೇಕು ಎಂಬುದು ಬಳ್ಳಾರಿ ರಾಘವರ ಅಪೇಕ್ಷೆ ಯಾಗಿತ್ತು. ಇವರ ಆಶಯದಂತೆ ನಾನು ಚಿಕ್ಕ ವಯಸ್ಸಿನಿಂದ ನಾಟಕಗಳಲ್ಲಿ ಅಭಿನಯಿಸುತ್ತ ಕಲಾಸೇವೆಯನ್ನು ಮುಂದುವರೆಸಿದ್ದೇನೆ. ಈ ಬಾರಿ ನನಗೆ ರಾಜಮಟ್ಟದ ಪ್ರಶಸ್ತಿ ಸಿಕ್ಕಿರುವುದು ನನ್ನ ಅದೃಷ್ಟ ಎಂದು ಭಾವಿಸುವೆ ಎಂದರು.
ರಾಘವ ಮೆಮೋರಿಯಲ್ ಅಸೋಸಿಯೇಷನ್ ನ ಎಲ್ಲಾ ಪದಾಧಿಕಾರಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದರು.
ವೇದಿಕೆಯಲ್ಲಿ ರಾಘವ ಮೆಮೋರಿಯಲ್ ಅಸೋಸಿಯೇಷನ್ ನ ಉಪಾಧ್ಯಕ್ಷರಾದ ರಮೇಶ್ ಗೌಡ ಪಾಟೀಲ್,ವ ಹೆಚ್,ವಿಷ್ಣುವರ್ಧನ ರೆಡ್ಡಿ, ಖಜಾಂಜಿ ಪಿ,ಧನಂಜಯ ಉಪಸ್ಥಿತರಿದ್ದರು.
ಬಳಿಕ ಡಾ. ಗಿರೀಶ್ ಕಾರ್ನಾಡ್ ರಚನೆಯ ಮಹಾದೇವ ಹಡಪದ ನಿರ್ದೇಶನ ಮತ್ತು ವಿನ್ಯಾಸದಲ್ಲಿ ‘ತಲೆದಂಡ’ ಸಾಮಾಜಿಕ ಕನ್ನಡ ನಾಟಕವನ್ನು ಸಮುದಾಯ ಧಾರವಾಡ ಕಲಾತಂಡದವರು ಪ್ರದರ್ಶಿಸಿದರು.
ಸಂಸ್ಥೆಯ ಗೌರವ ಕಾರ್ಯದರ್ಶಿ ಎನ್ ಪ್ರಕಾಶ್ ಸ್ವಾಗತಿಸಿದರು. ಸಂಸ್ಥೆಯ ಮಾಜಿ ಕಾರ್ಯದರ್ಶಿ ಎನ್.ಬಸವರಾಜ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಗಾಯಕ ಜಡೇಶ್ ಎಮ್ಮಿಗನೂರು ಪ್ರಾರ್ಥಿಸಿದರು. ಜಂಟಿ ಕಾರ್ಯದರ್ಶಿ ಎಂ,ರಾಮಾಂಜನೇಯಲು ವಂದಿಸಿದರು. ವಿಷ್ಣು ಹಡಪದ ನಿರೂಪಿಸಿದರು. ವ್ಯವಸ್ಥಾಪಕ ರಮಣಪ್ಪ ಭಜಂತ್ರಿ ನಿರ್ವಹಿಸಿದರು.
*****