ಅನುದಿನ ಕವನ-೯೪೭, ಕವಿ:ಎಂ.ಡಿ.ಬಾವಾಖಾನ ಸುತಗಟ್ಟಿ, ಮಲ್ಲಮ್ಮನ ಬೆಳವಡಿ, ಕವನದ ಶೀರ್ಷಿಕೆ: ಉಸಿರು(ಹೈಕುಗಳು)

ಉಸಿರು
(ಹೈಕುಗಳು)

ಬಂಧ ಬಿರಿದು
ಕಣ್ಣೀರಿನಿಂದ ಕೆನ್ನೆ
ಹಸಿಯಾಯಿತು||

ಮನಸ್ಸು ತುಂಬಿ
ತುಳುಕಿದ್ದ ಖುಷಿಯು
ಹುಸಿಯಾಯಿತು||

ನಾನು ನೀನಾಗಿ
ನೀನು ನಾನಾದ ದಿನ
ನೆನಪಿಲ್ಲವೆ|

ಒಲವಿನಿಂದ
ಒಲಿಯದ ನಲಿವು
ಮಾಸಿಹೋಯಿತು||

ಕಣ್ಣೋಟ ಭಾಷೆ
ಬರೆದ ನೂರು ಕಥೆ
ನೆನಪಿಲ್ಲವೆ|

ಕನಸು ಕಂಡು
ಕುಣಿದಿದ್ದ ಹೃದಯ
ಘಾಸಿಯಾಯಿತು||

ಊರ ಬೀದಿಯ
ಬಾಯಿ ತುಂಬ ಹಬ್ಬಿದ್ದು
ನೆನಪಿಲ್ಲವೆ|

ಪಿಸು ಮಾತಿನ
ಉಸಿರೂ ಕ್ಷಣ ಕ್ಷಣ
ಬಿಸಿಯಾಯಿತು||

‘ಗಟ್ಟಿಸುತ’ನ
ಬಿಟ್ಟು ಬಿಡದ ನಂಟು
ನೆನಪಿಲ್ಲವೆ|

ಪುಟ್ಟ ಜೀವದ
ಆಸೆಯು ಬೆಟ್ಟದಷ್ಟು
ಉಸಿರಾಯಿತು||

-ಎಂ.ಡಿ.ಬಾವಾಖಾನ ಸುತಗಟ್ಟಿ, ಮಲ್ಲಮ್ಮನ ಬೆಳವಡಿ
*****