ಅನುದಿನ‌ ಕವನ-೯೫೦, ಕವಿ: ಅರುಣಕುಮಾರ ಹಬ್ಬು, ಹುಬ್ಬಳ್ಳಿ

ಇಂದು ಏಕೋ ನೆನಪಾಗುತಿದೆ
ಹಳೆಯ ನೋವಿನ ಅನುಭವ
ಮರೆಯಲಾರೆನು ಎಂದೂ
ನಾನು ಪಟ್ಟ ಕಷ್ಟನಷ್ಟವ

ಮಾಯಲಾರದು ಅಷ್ಟು ಕ್ಷಿಪ್ರದಿ
ಹೃದಯದಲಿ ಆದ ಗಾಯವು
ನಲಿವೇ ಇಲ್ಲ ನೋವೇ ಎಲ್ಲ
ನಿತ್ಯ ಕಂಬನಿ ಧಾರೆಯು

ವಿಧಿಯು ಎನ್ನಲೇ, ಸೃಷ್ಟಿ ಎನ್ನಲೇ
ತಿಳಿಯಲಾಗದು ಪಡೆದ ನೆಲೆಯ
ತೇಲುತಿರುವೆನು ಮುಳುಗುತಿರುವೆನು
ದಡವ ಕಾಣಲು ತವಕದಿ

ಭರದಿ ಸಾಗಿದೆ ಕಾಲ ಹರಿವು
ಹಿಡಿಯಲಾರೆನು ಕಾಲನ
ಬಿಗಿದು ಕಟ್ಟಿದೆ ಕಟ್ಟಿ ಬಿಡುತಿದೆ
ಭವ ಬಂಧನದ ಪಾಶವ

ನೋವೇ ನನ್ನ ನಲಿವೇ,
ನಲಿವೇ ನನ್ನ ನೋವೇ
ಬರಿದೆ ಕಾಡುವುದೇ
ಒಂದೂ ಅರಿಯದಾಗಿದೆ

ಬರೆಯುತಿರುವೆ, ಕಕ್ಕುತಿರುವೆ
ನನ್ನ ಹೃದಯದ ಭಾವವ
ಬಯಸುತಿರುವೆ ಬೆಳಕ ಕಾಣಲು
ಭರವಸೆಯ ತಾಣವ ತಲುಪಲು

ದೂರ ನಭದಲಿ ಗೋಚರಿಸುತಿದೆ
ರವಿಯ ಹೊಳಪಿನ ಕಿರಣವು
ರಾತ್ರಿ ಚಂದ್ರನ ತಂಪು ಬೆಳ್ನೊರೆ
ತಾರೆ ಮಿಣುಕಿನ ದಾರಿಯು

ಎದುರಿಸುತ್ತಲಿ, ಭೋಗಿಸುತ್ತಲಿ
ಗಟ್ಟಿಯಾಗಿದೆ ಗುಂಡಿಗೆ
ಬೆದರಲಾರೆನು ಬೆಚ್ಚಲಾರೆನು
ಎಸೆವೆ ವಿಧಿಗೆ ಸವಾಲನು

ನಂಬಿರುವೆ ಬೆನ್ನಿಗಿವೆ ನಿಮ್ಮ
ನೈತಿಕ ಸ್ಥೈರ್ಯವು
ಮಾಯವಾಗಲಿ, ಕರಗಿ ಹೋಗಲಿ
ನಾನು ನುಂಗಿದ ಕಷ್ಟವು


-ಅರುಣಕುಮಾರ ಹಬ್ಬು, ಹುಬ್ಬಳ್ಳಿ
—–