ಬಳ್ಳಾರಿ, ಆ.12: ಎಷ್ಟೇ ಕಷ್ಟಗಳಿರಲಿ ಶೋಷಿತ ಅಲೆಮಾರಿ ಸಮುದಾಯಗಳು ಶಿಕ್ಷಣಕ್ಕೆ ಮಹತ್ವ ನೀಡಬೇಕು ಎಂದು ಬಳ್ಳಾರಿ ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ದರೂರು ಶಾಂತನಗೌಡ ಅವರು ತಿಳಿಸಿದರು.
ಸಂಡೂರು ತಾಲೂಕಿನ ಹಳೇ ದರೋಜಿ ಗ್ರಾಮದಲ್ಲಿ ಶನಿವಾರ ನಾಡೋಜ ಬುರ್ರಕಥಾ ದರೋಜಿ ಈರಮ್ಮ ಫೌಂಡೇಶನ್ ಹಾಗೂ ಕರ್ನಾಟಕ ಜಾನಪದ ಪರಿಷತ್ತು, ಬಳ್ಳಾರಿ ಜಿಲ್ಲಾ ಘಟಕದ ಸಹಯೋಗದಲ್ಲಿ ಆಯೋಜಿಸಿದ್ದ ನಾಡೋಜ ಬುರ್ರಕಥಾ ದರೋಜಿ ಈರಮ್ಮ ಅವರ 9ನೇ ಸಂಸ್ಮರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಡತನವನ್ನು ಮೆಟ್ಟಿನಿಂತು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಮುಖ್ಯವಾಹಿನಿಗೆ ಬರಬೇಕು ಎಂದು ಹೇಳಿದರು.
ಅನನ್ಯ ಪ್ರತಿಭಾವಂತ ಜಾನಪದ ಕಲಾವಿದೆ ನಾಡೋಜ ಬುರ್ರಕಥಾ ಈರಮ್ಮ ಅವರ ಸಂಸ್ಮರಣೆಯು ಜಾನಪದ ಕಲೆಗಳ ಬಗ್ಗೆ ಜಾಗೃತಿ ಮೂಡಿಸುವ ಅರ್ಥಪೂರ್ಣ ಕಾರ್ಯಕ್ರಮವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸ್ಮಾರಕ ನಿರ್ಮಾಣ ಸೇರಿದಂತೆ ಯಾವುದೇ ಕಾರ್ಯಗಳಿಗೆ ಫೌಂಡೇಶನ್ ಹಾಗೂ ಡಾ. ಅಶ್ವರಾಮು ಅವರ ಹೋರಾಟಕ್ಕೆ ತಮ್ಮ ಬೆಂಬಲ ಇರುತ್ತದೆ ಎಂದು ಶಾಂತನಗೌಡ ತಿಳಿಸಿದರು.
ಮುಖ್ಯ ಅತಿಥಿಯಾಗಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ಉಪ ನಿರ್ದೇಶಕ ಚೋರನೂರು ಕೊಟ್ರಪ್ಪ ಅವರು ಮಾತನಾಡಿ, ಸಾಂಸ್ಕೃತಿಕ ಸಂವಹನ, ಪ್ರೀತಿ ವಿಶ್ವಾಸದ ಕೊರತೆಯೇ ದೇಶ ಪ್ರಸ್ತುತ ಹಲವು ಬಿಕ್ಕಟ್ಟನ್ನು ಎದುರಿಸುವಂತಾಗಿದೆ ಎಂದು ಅಭಿಪ್ರಾಯ ಪಟ್ಟರು.
ಕಲೆ, ಸಾಹಿತ್ಯ, ಸಂಸ್ಕೃತಿ ದೇಶದ ಜನರಲ್ಲಿ ಸಾಮರಸ್ಯ, ಭಾವೈಕ್ಯತೆ ತರಬಲ್ಲದು. ಮಹಾನ್ ಪ್ರತಿಭಾವಂತ ರಾಗಿದ್ದ ದರೋಜಿ ಈರಮ್ಮ ಅವರ ಸ್ಮಾರಕವನ್ನು ಸರಕಾರ ಶೀಘ್ರ ಅಭಿವೃದ್ಧಿ ಪಡಿಸಿ ಪ್ರವಾಸ ತಾಣವನ್ನಾಗಿ ಪರಿವರ್ತಿಸ ಬೇಕು ಎಂದು ಒತ್ತಾಯಿಸಿದರು.
ಹಂಪಿ ಕನ್ನಡ ವಿವಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳಿಗಿಂತ ಮೊದಲು ನಾಡೋಜ ದರೋಜಿ ಈರಮ್ಮ ಅವರನ್ನು ಸಮಾಜಕ್ಕೆ ಪರಿಚಯಿಸಿದ ಕೀರ್ತಿ ಸಿರುಗುಪ್ಪದ ಜಾನಪದ ಸಂಶೋಧಕ ಡಾ. ಚೇತನ ಕುಮಾರ್ ಅವರಿಗೆ ಸಲ್ಲಬೇಕು ಎಂದರು.
ಸಂವಿಧಾನ ಶಿಲ್ಪಿ ಡಾ.ಬಿ. ಆರ್. ಅಂಬೇಡ್ಕರ್ ಅವರ ಶಿಕ್ಷಣ, ಸಂಘಟನೆ, ಹೋರಾಟ ತತ್ವಗಳನ್ನು ಅಲೆಮಾರಿ ಸಮುದಾಯಗಳು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ರಂಗ ಕಲಾವಿದ ಪುರುಷೋತ್ತಮ ಹಂದ್ಯಾಳ್ ಅವರು ಮಾತನಾಡಿ, ಪ್ರಾಥಮಿಕ ಶಾಲಾ ದಿನಗಳಿಂದಲೂ ದರೋಜಿ ಈರಮ್ಮ ಅವರ ಒಡನಾಟವಿದೆ. ಈರಮ್ಮ ಅವರು ಭೌತಿಕವಾಗಿ ಅಗಲಿದ್ದಾರೆ ಅವರ ಗಾಯನದ ಮೂಲಕ ಸದಾ ನಮ್ಮೊಂದಿಗೆ ಇದ್ದಾರೆ. ದರೋಜಿ ಗ್ರಾಪಂ ನಾಡೋಜ ಬುರ್ರಕಥಾ ಈರಮ್ಮ ಅವರ ಸ್ಮಾರಕಕ್ಕೆ ಸ್ವಾಗತ ಕಮಾನು ನಿರ್ಮಿಸಲಿ ಎಂದು ಒತ್ತಾಯಿಸಿದರು.
ಸ್ವಾಗತ ಭಾಷಣ ಮಾಡಿದ ಕರ್ನಾಟಕ ಜಾನಪದ ಪರಿಷತ್ತು, ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ, ಹಿರಿಯ ಪತ್ರಕರ್ತ ಸಿ.ಮಂಜುನಾಥ್, ಕಳೆದ ಒಂಬತ್ತು ವರ್ಷಗಳಿಂದ ಸ್ಮಾರಕ ನಿರ್ಮಾಣದ ಅಭಿವೃದ್ಧಿಗೆ ಸರಕಾರಗಳು ನೀಡಿದ ಎಲ್ಲಾ ಭರವಸೆಗಳನ್ನು ಈಡೇರಿಸಬೇಕು. ನಿರ್ಲಕ್ಷಿಸಿದರೆ ಸಮಾನ ಮನಸ್ಕ ಸಂಘಟನೆಗಳ ಜತೆ ಹೋರಾಟದ ಹಾದಿ ತುಳಿಯ ಬೇಕಾಗುತ್ತದೆ ಎಂದು ಎಚ್ಚರಿಸಿದರು.
ಫೌಂಡೇಷನ್, ಪರಿಷತ್ತು ನೇತೃತ್ವದಲ್ಲಿ ಗ್ರಾಮ ಹಾಗೂ ಸಂಘ ಸಂಸ್ಥೆಗಳ ಮುಖಂಡರು ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ, ಸಂಡೂರು ಶಾಸಕ ತುಕಾರಾಂ ಅವರನ್ನು ಭೇಟಿ ಮಾಡಿ ನೆನೆಗುದಿ ಬಿದ್ದಿರುವ ಸ್ಮಾರಕ ನಿರ್ಮಾಣದ ಬಗ್ಗೆ ಚರ್ಚಿಸಲಾಗುವುದು ಎಂದರು.
10 ನೇ ವರ್ಷದ ಸಂಸ್ಮರಣೆ ಕಾರ್ಯಕ್ರಮದ ಹೊತ್ತಿಗೆ ನಾಡೋಜ ದರೋಜಿ ಈರಮ್ಮ ಅವರ ಕಂಚಿನ ಪುತ್ಥಳಿ ಯನ್ನು ನಿರ್ಮಿಸಬೇಕು ಎಂದು ಆಗ್ರಹಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಗೀತಾ ಗಣೇಶ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಬುಡ್ಗ ಜಂಗಮ್ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಸಣ್ಣ ಮಾರೆಪ್ಪ, ಪರಿಷತ್ತು ಕಂಪ್ಲಿ ತಾಲೂಕು ಘಟಕದ ಅಧ್ಯಕ್ಷ ಶಿಕಾರಿ ರಾಮು, ಗ್ರಾಮದ ಮುಖಂಡ ಡಾ. ಆರ್. ರಾಮಪ್ಪ ಮತ್ತಿತರರು ಮಾತನಾಡಿದರು.
ಕಾರ್ಯಕ್ರಮದಲ್ಲಿ ರಂಗ ಕಲಾವಿದರಾದ ಎಚ್ ತಿಪ್ಪೇಸ್ವಾಮಿ, ಕೆ ಜಗದೀಶ್, ಡಾ ಅಣ್ಣಾಜಿ ಕೃಷ್ಣಾರೆಡ್ಡಿ, ಉಪ್ಪಾರ ಹನುಮೇಶ,ಬಿ.ರಮಣಪ್ಪ, ಮಾದನಂ ಮಾರೆಪ್ಪ , ಅಶ್ವ ತಿಪ್ಪೇಸ್ವಾಮಿ, ಮಲ್ಲಿಕಾರ್ಜುನಪ್ಪ, ಮೋತಿ ಗಂಗಾಧರ, ಸಿ ಡಿ ಗಿರೀಶ್ , ಅಶ್ವ ರಾಮಣ್ಣ, ಸರೋಜಾ ತಿಮ್ಮಪ್ಪ, ಹಂಪಣ್ಣ, ಒಡೆಯರ್ ಈಶ್ವರ, ಆರ್ ರಾಮಪ್ಪ, ಅಶ್ವ ನಾಗರಾಜು, ಅಶ್ವ ಸುರೇಶ್ ಮತ್ತಿತರರು ಉಪಸ್ಥಿತರಿದ್ದರು. ಸನ್ಮಾನ: ಇದೇ ಸಂದರ್ಭದಲ್ಲಿ ದರೂರು ಶಾಂತನಗೌಡ, ಚೋರನೂರು ಕೊಟ್ರಪ್ಪ, ಸಣ್ಣ ಮಾರೆಪ್ಪ ಮತ್ತು ಗ್ರಾಪಂ ಅಧ್ಯಕ್ಷೆ ಗೀತಾ ಗಣೇಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಫೌಂಡೇಶನ್ ಅಧ್ಯಕ್ಷ ಡಾ. ಅಶ್ವರಾಮು ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀ ಸತ್ಯಂ ಶಿಕ್ಷಣ ಮಹಾ ವಿದ್ಯಾಲಯದ ಸಹಾಯ ಪ್ರಾಧ್ಯಾಪಕ ಆಲಂ ಭಾಷ ನಿರೂಪಿಸಿದರು. ಪರಿಷತ್ತು ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹೇಮಾ ಮಂಜುನಾಥ್ ವಂದಿಸಿದರು.
ಜಾನಪದ ಕಲಾ ಪ್ರದರ್ಶನ: ಬುರ್ರಕಥಾ ಶಿವಮ್ಮ ಮತ್ತು ತಂಡದವರಿಂದ ಬುರ್ರಕಥಾ, ಅಶ್ವ ರಾಮಣ್ಣ ಮತ್ತು ತಂಡ ದವರಿಂದ ಜಾನಪದ ಗೀತಾ ಗಾಯನ, ರಾಘವೇಂದ್ರ, ಮೌನೇಶ್ ಅವರಿಂದ ತತ್ವಪದ ಗಾಯನ ಪ್ರಸ್ತುತ ಪಡಿಸಿದರು.
*****