ಅನುದಿನ‌ ಕವನ-೯೫೪, ಕವಿ: ಡಾ. ನಿಂಗಪ್ಪ ಮುದೆನೂರು, ಧಾರವಾಡ

ಜಾನಪದಶ್ರೀ ನಾಡೋಜ ಬುರ್ರಕಥಾ ದರೋಜಿ ಈರಮ್ಮ ಅವರ 9ನೇ ಸಂಸ್ಮರಣೆ ದಿನವಾದ ಇಂದು ಕವಿ ಡಾ.‌ನಿಂಗಪ್ಪ ಮುದೇನೂರು ಅವರು ಈ ಕವನದ ಮೂಲಕ ಸ್ಮರಿಸಿದ್ದಾರೆ. ಅಕ್ಷರ ನಮನ ಸಲ್ಲಿಸಿದ್ದಾರೆ.🙏🙏

ಮಣ್ಣ ಪಾದದ ತೇವವಿನ್ನೂ ಆರಿಲ್ಲ
ತಾಯೇ
ತಂಬೂರಿ ಮಿಡಿಯುತ್ತಲೇ ಇದೆ ಒಳಗು
ಅಲ್ಲೂ ಅಲ್ಲಮನ ಬೆಳಗು

ನೀನು ಕಟ್ಟಿದ ಹಾಡು
ಜೋಗಿಗೆ ಅನ್ನವಾಗಿದೆ
ಜೋಳಿಗೆ ತುಂಬಾ ಮಕ್ಕಳ
ನಗುವಿದೆ

ದನಿಯಿಂದ ದನಿಗೆ ಮನದಿಂದ ಮನಕ್ಕೆ
ಎಂತಹ ಪದದ ಸೇತುವೆಯೋ ತಾಯೇ
ನಿನ್ನ ಕುಮಾರರಾಮ,ಬಬ್ಬುಲಿ ನಾಗರೆಡ್ಡಿ,ಜೈಸಿಂಗರಾಜ ತರೇವಾರಿ ಸಾಮಂತರೆಲ್ಲಾ ಎದೆಯಲ್ಲಿಯೇ ಯುದ್ಧವಾಡಿದರೂ
ಅಲ್ಲೇ ಜೊತೆಯಾಗಿ ಜೀವವಿಟ್ಟರು

ಎಷ್ಟೊಂದು ನೊಂದುಕೊಂಡೆ ಅವರ ಮಕ್ಕಳಿಗಾಗಿ
ನಿನ್ನ ಎದೆಯ ಒಕ್ಕಲಿಗಾಗಿ
ಬಿತ್ತಿದ್ದು,ಬೆಳೆದದ್ದು ಕಾಳು ಹಸನು ಮಾಡಿದ್ದು
ಉಡಿಯಲ್ಲಿ ಹಂಚಿ ಉಂಡದ್ದು
ಎಲ್ಲವೂ ನಿನ್ನ ಸ್ವರದಲ್ಲಿದೆ

ತಾಯೇ
ಎದೆ ಹಣ್ಣಾದರೂ ಹಾಲುಬಳ್ಳಿಯಂತೆ
ಹಬ್ಬಿನಿಂತ ಕಾವ್ಯದ ಕಡಲು ನೀನು
ಆ ದಡವನ್ನೊಮ್ಮೆ ಈ ದಡವನ್ನೊಮ್ಮೆ
ಶಿರಬಾಗಿ ಮುಟ್ಟುವ ದಾರಿಮುಗಿಲ
ನಕ್ಷತ್ರದಂತೆ
ಸೂರ್ಯಚಂದ್ರರಂತೆ
ಮರೆಯಾದರೂ ಮತ್ತೆ ನಾಳೆಗಳ ಬೆಳಗುವ ಹಗಲೇ
ಮಣ್ಣಮುಗಿಲೇ

ನೀನು ಮುಟ್ಟಿದ ಲೋಕ ಇಲ್ಲೇ ಇದೆ
ತಂಬೂರಿ ಡಿಮ್ಮಿ ಗಗ್ಗರಿ
ಬಾಡಿಲ್ಲ ತಾಯೇ ನೀ ಮುಡಿಸಿ ಹೋದ ಹೂವು
ಶಿವಮ್ಮ ಪಾರ್ವತಿಯರು ನುಡಿಸುತ್ತಿದ್ದಾರೆ ಈ ಲೋಕವ
ಅಲ್ಲಿ ಮಕ್ಕಳೂ ಪದವನರಿತು ಹಾಡುತ್ತಿವೆ

ಪಾಡುತ್ತಿವೆ ಜೀವತಾನಗಳು
ಕಣ್ಣದೀವಿಗೆಗಳು ನಿನ್ನ ಮುಡಿದು
ನಿಂತಿವೆ
ಬಾ…ಹರಸು ತುಂಗೆಯೇ
ನಮ್ಮ ಅಕ್ಷರದ ಸಿರಿಗಂಗೆಯೇ.

🌿-ಡಾ.ನಿಂಗಪ್ಪ ಮುದೇನೂರು, ಧಾರವಾಡ