ವಿದ್ಯಾರ್ಥಿ ಮೆಚ್ಚಿನ ಉಪನ್ಯಾಸಕ ಡಾ.‌ಹನುಮನಗೌಡ ವಿಧಿವಶ

ಹೊಸಪೇಟೆ, ಆ.13:ನಗರದ ಎಸ್ ಎಸ್ ಎ ಎಸ್ ಸರಕಾರಿ ಪ್ರಥಮ‌ದರ್ಜೆ ಕಾಲೇಜಿನ ಸಮಾಜ ಶಾಸ್ತ್ರ ಉಪನ್ಯಾಸಕ ಡಾ. ಹನುಮನಗೌಡ(೪೨) ಅವರು ಭಾನುವಾರ ನಸುಕಿನ‌ಜಾವ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಪತ್ನಿ, ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧು ಮಿತ್ರರು, ವಿದ್ಯಾರ್ಥಿಗಳನ್ನು ಅಗಲಿದ್ದಾರೆ.
ಸ್ವಂತ ಗ್ರಾಮ ಗಂಗಾವತಿ ತಾಲೂಕಿನ ಮಲಕನ‌ಮರಡಿಯಲ್ಲಿ ಭಾನುವಾರ ಮಧ್ಯಾಹ್ನ ಅಂತಿಮ ಸಂಸ್ಕಾರ ನೆರವೇರಿತು. ಕಾಲೇಜಿನ ಸಹಾಯಕ ಪ್ರಾಧ್ಯಾಪಕರುಗಳಾದ ಡಾ. ಟಿ ಎಚ್ ಬಸವರಾಜ್, ಡಾ.‌ನಾಗಣ್ಣ ಕಿಲಾರಿ, ತಾಲೂಕು ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ಡಾ. ಷಣ್ಮುಖಪ್ಪ, ನೂರಕ್ಕೂ‌ ಹೆಚ್ಚು‌ ವಿದ್ಯಾರ್ಥಿಗಳು ಅಂತಿಮ ನಮನ ಸಲ್ಲಿಸಿದರು.
ತಾಲೂಕಿನ ಕಮಲಾಪುರದಲ್ಲಿ ಕುಟುಂಬದ ಸಮೇತ ವಾಸವಾಗಿದ್ದರು. ಆರೋಗ್ಯವಾಗೇ ಇದ್ದ ಅವರು ಶನಿವಾರ ಕಾಲೇಜಿಗೆ ಆಗಮಿಸಿ ಪಾಠ ಪ್ರವಚನದಲ್ಲಿ ತೊಡಗಿಸಿ ಕೊಂಡಿದ್ದರು. ಮೂರು ತಿಂಗಳ ಸಂಬಳವಾಗದೇ ಸಂಕಷ್ಟದಲ್ಲಿದ್ದಾಗ ಸಹೋದ್ಯೋಗಿಗಳಿಂದ ಪಡೆದ ಎಲ್ಲರ ಕೈಸಾಲವನ್ನು ಶನಿವಾರ ವಾಪಸು ‌ಮಾಡಿದ್ದರು ಎಂದು ಹೇಳುವಾಗ ಕನ್ನಡ ವಿಭಾಗದ ಡಾ. ಷಣ್ಮುಖಪ್ಪ ಅವರು ಗದ್ಗಿತರಾದರು.
ವಿಶೇಷ ಚೇತನರಾಗಿದ್ದ ಡಾ.ಹನುಮನಗೌಡರು ಕಮಲಾಪುರದಿಂದ ಪ್ರತಿದಿನವೂ ತ್ರಿಚಕ್ರವಾಹನದಲ್ಲಿ ಕಾಲೇಜಿಗೆ ಆಗಮಿಸುತ್ತಿದ್ದರು. ನಮಗೆಲ್ಲಾ ಅರ್ಥವಾಗುವ ಹಾಗೇ ಪಾಠ ಮಾಡುತ್ತಿದ್ದರು ವಿಶೇಷವಾಗಿ ಕಿರು ಸಂಶೋಧನಾ ಪ್ರಬಂಧ ಬರೆಯಲು ಅತ್ಯುತ್ತಮವಾಗಿ ಮಾರ್ಗದರ್ಶನ ನೀಡುತ್ತಾ ಇದ್ದರು ಎಂದು ವಿದ್ಯಾರ್ಥಿಗಳು ಸ್ಮರಿಸುತ್ತಾರೆ.

ಸಂತಾಪ: ಕಾಲೇಜಿನ ಪ್ರಾಚಾರ್ಯ ಪ್ರೊ. ಶಿವಪ್ಪ, ಬಳ್ಳಾರಿ ವಿಎಸ್ ಕೆ ವಿವಿಯ ಸಮಾಜಶಾಸ್ತ್ರದ ಪ್ರಾಧ್ಯಾಪಕ ಡಾ.ರಾಜೇಂದ್ರಪ್ರಸಾದ್, ಗುಲ್ಬರ್ಗಾ ವಿಶ್ವವಿದ್ಯಾಲಯದ ಮಾಜಿ ಸೆನೆಟ್ ಸದಸ್ಯ, ಹಿರಿಯ ಪತ್ರಕರ್ತ ಸಿ.ಮಂಜುನಾಥ್, ವಿಜಯನಗರ ಜಿಲ್ಲಾ ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ಡಾ. ಗುಜ್ಜಲ ಹುಲುಗಪ್ಪ, ಪತ್ರಿಕೋದ್ಯಮ ವಿಭಾಗದ ಮುರಳೀಧರ ಬಾಣದ ಮತ್ತಿತರರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
—–