ಬೆಂಗಳೂರು, ಆ.15: ಶಾಂತಿಯುತ ಸಮಾಜವಿದ್ದರೆ ಮಾತ್ರ ಅಭಿವೃದ್ಧಿ ಸಾಧಿಸಲು ಸಾಧ್ಯ ಎಂದು ನಮ್ಮ ಜನರಿಗೆ ಅರ್ಥವಾಗಿರುವುದರಿಂದ ದುಷ್ಟರ ಆಟಗಳು ಬಹಳ ಕಾಲ ನಡೆಯುವುದಿಲ್ಲ ಎಂಬುದನ್ನು ಕರ್ನಾಟಕದ ಜನರೇ ಸಾಬೀತು ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಹೇಳಿದರು. ನಗರದ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಮಂಗಳವಾರ ಜರುಗಿದ 77 ಸ್ವಾತಂತ್ರ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಕರ್ನಾಟಕದ ಜನರು ಒಡೆದಾಳುವವರ ವಿರುದ್ಧ ನಿಂತಿದ್ದಾರೆ. ಇವನಾರವನೆನ್ನದೆ ಒಳಗೊಂಡು ಆಡಳಿತ ಮಾಡುವ ನಮ್ಮನ್ನು ಆರಿಸಿದ್ದಾರೆ. ಈ ಸ್ವಾತಂತ್ರ್ಯ ದಿನದಂದು ನಾನು ನೀಡುವ ಭರವಸೆಯಲ್ಲಿ ಬಹಳ ಮುಖ್ಯವಾದುದು ಈ ಒಳಗೊಂಡು ಬಾಳುವ, ಎಲ್ಲರ ಅಭಿವೃದ್ಧಿಯನ್ನು ಬಯಸುವ ಕರ್ನಾಟಕದ ಹೊಸ ಮಾದರಿಗಳನ್ನು ಪ್ರಬಲಗೊಳಿಸುವ ಭರವಸೆಯೇ ಆಗಿದೆ ಎಂದು ತಿಳಿಸಿದರು. ನಾಡಿನ ನೆಲ, ಜಲ, ಭಾಷೆ ಹಾಗೂ ಅಸ್ಮಿತೆಯನ್ನು ಕಾಪಾಡಲು ನಮ್ಮ ಸರ್ಕಾರ ಕಟಿಬದ್ಧವಾಗಿದೆ. ಹಾಗೆಯೇ ಮಹಾನ್ ಮಾನವತಾವಾದಿಗಳಾದ ಬುದ್ಧ, ಗಾಂಧೀಜಿ, ಬಸವಣ್ಣ, ಅಂಬೇಡ್ಕರ್, ಕುವೆಂಪು ಮೊದಲಾದವರು ಪ್ರತಿಪಾದಿಸಿದ ಮಾನವೀಯತೆಯ ತಳಹದಿಯ ಅಭಿವೃದ್ಧಿಯ ಮಾದರಿಯನ್ನು ನಾವು ಅಳವಡಿಸಿಕೊಂಡಿದ್ದೇವೆ. ಇದನ್ನು ‘ಕರ್ನಾಟಕ ಮಾದರಿ ಅಭಿವೃದ್ಧಿʼ ಎಂದು ಕರೆಯಲಾಗುತ್ತದೆ ಎಂದರು. ದೇಶದಲ್ಲಿಯೇ ಅತಿ ಹೆಚ್ಚು ತೆರಿಗೆ ಪಾವತಿಸುವ ರಾಜ್ಯಗಳಲ್ಲಿ ಕರ್ನಾಟಕ ಎರಡನೆಯ ಸ್ಥಾನದಲ್ಲಿದೆ. ಸುಮಾರು 4 ಲಕ್ಷ ಕೋಟಿಗೂ ಹೆಚ್ಚಿನ ತೆರಿಗೆ, ಸುಂಕ, ಮೇಲ್ತೆರಿಗೆಗಳನ್ನು ಕೇಂದ್ರಕ್ಕೆ ಪಾವತಿಸುತ್ತಿದೆ. ಅದರೆ ನಮಗೆ ವಾಪಸ್ಸು ಬರುತ್ತಿರುವುದು 50 ಸಾವಿರ ಕೋಟಿ ರೂ. ಮಾತ್ರ. ನಮಗೆ ನ್ಯಾಯಯುತವಾಗಿ ಬರಬೇಕಾದಷ್ಟು ಸಂಪನ್ಮೂಲಗಳು ಕೇಂದ್ರದಿಂದ ಮರಳಿ ಬಂದರೆ ರಾಜ್ಯವು ಅತ್ಯಂತ ಶ್ರೀಮಂತ ರಾಜ್ಯವಾಗುವುದು. ಇಷ್ಟರ ನಡುವೆಯೂ ನಾವು ಆರ್ಥಿಕ ಶಿಸ್ತನ್ನು ಸರಿಯಾಗಿ ಪಾಲಿಸುತ್ತಿದ್ದೇವೆ. ರಾಜ್ಯದ ಸಮಗ್ರ ಅಭಿವೃದ್ಧಿಗೆ ಬದ್ಧರಾಗಿದ್ದೇವೆ. ನೈಜ ದೇಶಪ್ರೇಮಿಗಳಿಗೆ ಇದು ಅರ್ಥವಾಗುತ್ತದೆ ಎಂದು ವಿವರಿಸಿದರು. ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರ ಲಾಲ್ ನೆಹರು ಅವರು ಹೇಳಿದಂತೆ ಎಲ್ಲರೂ ಒಟ್ಟುಗೂಡಿ ದುಡಿಯೋಣ, ರಾಜ್ಯದ ಅಭಿವೃದ್ಧಿಯ ಹೊಸ ಮನ್ವಂತರವನ್ನು ಪ್ರಾರಂಭಿಸೋಣ ಎಂದರು. ನಮ್ಮ ನಾಡಿನಲ್ಲಿ ಶಾಂತಿ, ಸೌಹಾರ್ದ, ಸಮೃದ್ಧಿಗಳು ನೆಲೆಸಲಿ. ಬಲಿಷ್ಠವಾಗಿ ನಿಂತಿರುವ ನಮ್ಮ ದೇಶದ ಸೈನ್ಯ, ದೇಶದ ಸಂಪತ್ತನ್ನು ಹೆಚ್ಚಿಸುತ್ತಿರುವ ಯುವಜನತೆ ಮತ್ತು ದೇಶವು ಹಸಿವಿನಿಂದ ಕಂಗೆಡದಂತೆ ನಿರಂತರ ಅನ್ನ ಉತ್ಪಾದಿಸುತ್ತಿರುವ ಅನ್ನಬ್ರಹ್ಮನೆಂದು ಕರೆಯಲಾಗುವ ರೈತರನ್ನು ಸ್ಮರಿಸೋಣ. ಕಾರ್ಮಿಕರು, ವಿಜ್ಞಾನಿಗಳು, ತಂತ್ರಜ್ಞಾನಿಗಳು… ಮುಂತಾದವರನ್ನು ಹುರಿದುಂಬಿಸೋಣ. ಶ್ರದ್ಧೆಯಿಂದ ದುಡಿದು ಸುಭದ್ರ ಬದುಕನ್ನು ಕಟ್ಟಿಕೊಳ್ಳುವ ಮೂಲಕ ಸುಭದ್ರ ಕರ್ನಾಟಕ ಹಾಗೂ ಸುಭದ್ರ ಭಾರತವನ್ನು ನಿರ್ಮಿಸೋಣ ಎಂದು ಸಿದ್ಧರಾಮಯ್ಯ ಅವರು ಹೇಳಿದರು.