ಅನುದಿನ ಕವನ-೯೫೮, ಕವಿ:ಮನಂ, ಬೆಂಗಳೂರು, ಕವನದ ಶೀರ್ಷಿಕೆ: ಬೇಕಾಗಿದ್ದಾರೆ [ಚಿತ್ರ: ಯಜ್ಞ ಮಂಗಳೂರು]

ಬೇಕಾಗಿದ್ದಾರೆ

ಬಾಯಲ್ಲಿ ತಮ್ಮ ಬೆರಳಿಟ್ಟುಕೊಂಡು
ಚೀಪುತ್ತಾ ತಲೆಯಲ್ಲಾಡಿಸಬಲ್ಲ
ಸುಳ್ಳುಕೋರರ ಹಿತೈಸಿಗಳು ಬೇಕಾಗಿದ್ದಾರೆ.

ಸುಳ್ಳು ಕತೆಗಳ ಕೇಳುತ್ತಾ ಸುಮ್ಮನೆ
ಹೂಂಗುಟ್ಟುತ್ತಾ ಕುಳಿತು ಕೊಳ್ಳಬಲ್ಲವರು
ಬೇಕಾಗಿದ್ದಾರೆ.

ತಮ್ಮ ಹಣೆಗೆ ತಾವೇ ನಾಮ ಹಾಕಿಕೊಳ್ಳ
ಬಲ್ಲ ಅತೀ ದೊಡ್ಡ ದೊಡ್ಡ ಕುಳಗಳು
ಬೇಕಾಗಿದ್ದಾರೆ.

ಹೇಳಿಕೊಟ್ಟದ್ದನ್ನು ಸುಳ್ಳೊ ಸತ್ಯವೊ
ಎಂದು ಎಂದೆಂದೂ ಪರಿಶೀಲಿಸಲು
ಇಚ್ಚಿಸದವರು ಬೇಕಾಗಿದ್ದಾರೆ.

ತಮ್ಮ ಕಿವಿಗೆ ತಾವೇ ದೊಡ್ಡ ದೊಡ್ಡ
ಹೂವುಗಳನ್ನು ಸಿಕ್ಕಿಸಿಕೊಳ್ಳಬಲ್ಲ
ಮಹಾನುಭಾವರು ಬೇಕಾಗಿದ್ದಾರೆ.

ತಾವು ಓದಿದ್ದೆಲ್ಲಾ ಕೇಳಿದ್ದೆಲ್ಲಾ ಸರಿ ಸತ್ಯ
ಅದನ್ನು ಬಿಟ್ಟರೆ ಬೇರೆಲ್ಲಾ ಮಿಥ್ಯಾ ಎಂದು
ದಬಾಯಿಸುವವರು ಬೇಕಾಗಿದ್ದಾರೆ.

ತಮ್ಮಷ್ಟಕ್ಕೆ ತಾವೇ ಟೋಪಿ ಹಾಕಿಕೊಂಡು
ಟೋಪಿ ಹಾಕುವವರಿಗೆ ತಮ್ಮ ತಲೆ ಕೊಟ್ಟು
ನಿಲ್ಲುವವರು ಬೇಕಾಗಿದ್ದಾರೆ.

ಭರವಸೆಗಳ ಹೊಳೆಯಲ್ಲಿ ಸಂತಸದಿ
ನಲಿಯುತ್ತಾ ಎಂದೂ ಮುಳುಗದೆ ಈಜುವವರು ಬೇಕಾಗಿದ್ದಾರೆ.

ನಾಟಕೀಯ ಮಾತುಗಳಿಗೆ ಕೇಕೆ ಹಾಕುತ್ತಾ
ಕೇಕೆ ಹಾಕುತ್ತಾ ಕುಣಿದಾಡ ಬಲ್ಲ
ಬೆಪ್ಪು ತಕ್ಕಡಿಗಳು ಬೇಕಾಗಿದ್ದಾರೆ.

ಧರ್ಮ ಜಾತಿ ಬಣ್ಣ ಪ್ರೀತಿ ವಿಶ್ವಾಸಗಳ
ನಿಜ ರೂಪವ ಅರಿಯಲಾರದ ಗಣ್ಯರು
ತುರ್ತಾಗಿ ಬೇಕಾಗಿದ್ದಾರೆ.

– ಮನಂ, ಬೆಂಗಳೂರು