‘ಅರ್ಪಣೆ’ ರಾಧೆಯ ಮಾಧವನಾರಾದನೆಯ ಕವಿತೆಯಷ್ಟೆ ಅಲ್ಲ. ರಾಧೆಯಂತಹ ಚಿರಪ್ರೇಮಿಗಳ ಪ್ರೇಮಾರ್ಪಣೆಯ ಚಿರ ಭಾವಗೀತೆ. ಇಲ್ಲಿ ಪ್ರೇಮದ ಪರಾಕಾಷ್ಟೆಯಿದೆ. ಪ್ರೀತಿಯ ಪೂರ್ಣ ಶರಣಾಗತಿಯಿದೆ. ನೀವು ರಾಧೆಯಾಗಿ ಓದಿದರೆ ಇದು ಪ್ರೇಮ ಸಮರ್ಪಣೆ ಅನುರಾಗ ಗೀತೆ. ಭಕ್ತನಾಗಿ ಓದಿದರೆ ಆತ್ಮ ಸಮರ್ಪಣೆ ಅನುಭಾವಗೀತೆ. ಒಲವಿನ ಸಾಕ್ಷಾತ್ಕಾರವಾಗಲೀ, ಮುಕ್ತಿಯ ಆತ್ಮೋನ್ನತಿಯಾಗಲೀ ಬೇಕೆಂದರೆ ಸಂಪೂರ್ಣ ಶರಣಾಗತರಾಗಲೇ ಬೇಕು ಅಂತಾರೆ ಪ್ರೇಮ ಕವಿ ಎ.ಎನ್.ರಮೇಶ್. ಗುಬ್ಬಿ ಅವರು!👇🍀🌺🍀
ಅರ್ಪಣೆ.!
ನನ್ನೆದೆಯ ಹೃದಯ ದೇಗುಲದಲ್ಲಿ
ಅವನ ರಮ್ಯನೋಟದ ಘಂಟಾನಾದ
ಮೆಲು ಮುಗುಳ್ನಗೆಯ ಶಂಖನಾದ
ಮೃದುಲ ನುಡಿಗಳ ಓಂಕಾರ ನಾದ
ನೆನಪುಗಳ ಅಮೂರ್ತರೂಪ ನಿನಾದ.!
ನಯನಗಳಲಿ ಅವನದೇ ಚೆಲುವು
ಕರ್ಣಗಳಲಿ ಅವನದೇ ಕಲರವವು
ಗಾಳಿಯಲಿ ಅವನದೇ ಪರಿಮಳವು
ದಿಗ್ದಿಗಂತಗಳಲು ಅವನದೇ ನಿಲುವು
ಕಣಕಣದಿ ಅವನದೇ ಅನುಭಾವವು.!
ನರ ನರದಲೂ ಅವನ ಜೀವ ಧ್ಯಾನ
ಸ್ವರ ಸ್ವರದಲೂ ಅವನ ಭಾವಗಾನ
ಧಮನಿ ಧಮನಿಯಲವನದೇ ಚೇತನ
ಉಸಿರುಸಿರಲೂ ಹೆಸರ ಸಂಕೀರ್ತನ
ಮೈಮನದಲಿ ಅವನದೇ ಅನುರಣನ.!
ಓ ಒಲವೇ ಒಲಿದೊಲಿದು ಹರಸು
ಓ ಪ್ರೀತಿಯೇ ಪರವಶವಾಗಿ ಹಾರೈಸು
ಓ ಪ್ರೇಮವೇ ಪರಾಂಬರಿಸಿ ಆಶೀರ್ವದಿಸು
ಓ ಅನುರಾಗವೇ ಅಕ್ಕರದಿ ಅನುಗ್ರಹಿಸು
ನನ್ನೊಳವನ ಚಿರ ಚಿರಂತನ ಚಿರವಾಗಿಸು.!
ಈ ಜೀವ ಮಾಧವನ ಮಡಿಲಲಿ ಮೇಳೈಸು
ಯುಗವೆಲ್ಲ ಯಾದವನ ಯುಗಳದಿ ತೇಲಿಸು
ಕೇಶವನ ಕಾರುಣ್ಯದಿ ಕಡೆತನಕ ಮೀಯಿಸು
ವಾಸುದೇವನ ವೃಂದಾವನದ ವಶವಾಗಿಸು
ಕೃಷ್ಣಸಖ್ಯದಲಿ ಈ ರಾಧೆಯ ಐಕ್ಯವಾಗಿಸು.!
-ಎ.ಎನ್.ರಮೇಶ್ ಗುಬ್ಬಿ, ಕೈಗಾ, ಕಾರವಾರ ಜಿ.
—–