ಅನುದಿನ ಕವನ-೯೬೩, ಕವಿಯಿತ್ರಿ: ವಿನಿಶಾಗೋಪಿನಾಥ್ ಬೆಂಗಳೂರು

ನನ್ನ ಒರಟುತನ ನಿನ್ನನ್ನು
ಘಾಸಿಗೊಳಿಸುವುದು, ಗೊತ್ತು
ನಿನ್ನ ಗುಣವೇ ನನಗೂ ಬಂದಿರುವುದು,
ಮರೆಯಬೇಡ
ನಿನಗೇನು ಗೊತ್ತು
ಕಡಲಿನಷ್ಟು ಪ್ರೀತಿಯನ್ನು
ಒಡಲಲ್ಲಿ ಬಚ್ಚಿಟ್ಟುಕೊಂಡಿರುವೆ
ಹೃದಯದ ಮಾತುಗಳನ್ನು
ಮೌನದಲಿ ಪೋಣಿಸಿಟ್ಟಿರುವೆ

ಎಲ್ಲಿದ್ದರೂ ಈಗಲೇ ಬಂದುಬಿಡು
ಅನುರಾಗದ ಅಲೆಗಳ ಮೇಲೆ ತೇಲಿ
ತಂಗಾಳಿಯ ಜೊತೆಗೂಡಿ
ಬಿಡದೆ ಕಾಡಿಸುವಿಯಂತೆ
ಆ ಸಾಗರದ ಆಚೆ ಬಾ
ಸಂತಸವ ಹೊತ್ತು ತಾ
ಮುಂಜಾವಿನ ಹೊಂಬೆಳಕು ಮೂಡುವಲ್ಲಿ
ಅಲ್ಲಿ ನಿನ್ನಲಿ ಬೆರೆತು ಒಂದಾಗಬೇಕು
ಪೊರೆಬಿಚ್ಚಿ ಎಲ್ಲವನೂ ಮರೆಯಬೇಕು

ನನ್ನವು ಚಿಕ್ಕಪುಟ್ಟ
ಆಸೆಗಳಷ್ಟೇ

ನಿನ್ನೆದೆಯ ಹುಲ್ಲುಗಾವಲಿನಲ್ಲಿ ನಿದ್ರಿಸಬೇಕೆಂದು
ನಿನ್ನ ಹೆಜ್ಜೆಗೆ ನನ್ನ ಹೆಜ್ಜೆ ಸೇರಿಸಿ ಕರಗಿಹೋಗಬೇಕೆಂದು
ಹೃದಯದೊಳಗೆ ಗುಬ್ಬಚ್ಚಿ ಗೂಡು ಕಟ್ಟಿ ನಿನ್ನ ಪ್ರೀತಿಯ ಜೋಪಾನ ಪೊರೆಯಬೇಕೆಂದು

ಹಾಗೇ ಉಳಿಯಲಿ ಇಬ್ಬರ
ಒರಟುತನವೂ
ಸಮಯ ಬಂದಾಗಲೆಲ್ಲ
ಜಗಳದಲ್ಲಿ ತಿದ್ದಿ ತೀಡಿ ಒಂದಾಗಬೇಕು


-ವಿನಿಶಾಗೋಪಿನಾಥ್ ಬೆಂಗಳೂರು
*****