ಹಗರಿಬೊಮ್ಮನಹಳ್ಳಿ, ಆ.23: ಚಂದ್ರಯಾನ-೩ರ ಯಶಸ್ಸಿನಲ್ಲಿ ಬೆಂಗಳೂರಿನ ಯು ಆರ್ ರಾವ್ ಉಪಗ್ರಹ ಕೇಂದ್ರದ ಪಾಲು ಹೆಚ್ಚಿದೆ. ಈ ಕೇಂದ್ರಕ್ಕೂ ತಾಲೂಕಿನ ಹಂಪಾಪಟ್ಟಣ ಗ್ರಾಮಕ್ಕೆ ಏನಾದರೂ ನಂಟಿದೆಯಾ!
ಹೌದು! ಖಂಡಿತಾ ನಂಟಿದೆ. ಗ್ರಾಮದ ಪ್ರತಿಭಾನ್ವಿತ ಯುವಕ ತಿಮ್ಮಪ್ಪ ಪೂಜಾರ್ ಅವರು ಯು ಆರ್ ರಾವ್ ಉಪಗ್ರಹ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಮಾತ್ರವಲ್ಲ ಚಂದ್ರಯಾನ-೩ರ ಯೋಜನೆಯಲ್ಲಿ ಕೇಂದ್ರದ ಹಲವು ತಂತ್ರಜ್ಞರ ಜತೆ ಇವರು ದುಡಿದಿದ್ದಾರೆ.
ಈ ಹಿನ್ನಲೆಯಲ್ಲಿ ಹುಟ್ಟೂರು ಹಂಪಾಪಟ್ಟಣದಲ್ಲಿ ಸಂಭ್ರಮಕ್ಕೆ ಪಾರವೇ ಇಲ್ಲದಂತಾಗಿದೆ.
ಚಂದ್ರನ ದಕ್ಷಿಣಧೃವದ ಮೇಲೆ ಯಶಸ್ವಿಯಾಗಿ ವಿಕ್ರಮ್ ಲ್ಯಾಂಡರ್ ಇಳಿಯುತ್ತಲೇ ವಿಶ್ವದ 140 ಕೋಟಿಗೂ ಹೆಚ್ಚು ಭಾರತೀಯರ ಹರ್ಷೋದ್ಗಾರ ಮುಗಿಲುಮುಟ್ಟಿದೆ.
ವಿಕ್ರಮ್ ಜತೆ ಇರುವ ಪ್ರಮುಖ ರೊವರ್ ರೊಬೊಟಿಕ್
ಕಾರ್ ತಯಾರಿಕೆಯ ಇಸ್ರೋದ ಬಾಹ್ಯಾಕಾಶ ತಂಡದೊಂದಿಗೆ ಯು ಆರ್ ರಾವ್ ಉಪಗ್ರಹ ಸಂಸ್ಥೆಯ ತಂತ್ರಜ್ಞರ ತಂಡದಲ್ಲಿ ತಿಮ್ಮಪ್ಪ ಪೂಜಾರ್ ಅವರು ಇರುವುದು ಹಂಪಾಪಟ್ಟಣ ಗ್ರಾಮಸ್ಥರಲ್ಲಿ ಎಲ್ಲಿಲ್ಲದ ಸಂತಸ, ಸಂಭ್ರಮಕ್ಕೆ ಕಾರಣವಾಗಿದೆ.
ಪರಿಚಯ: ಹಂಪಾಪಟ್ಟಣ ಗ್ರಾಮದ ಪೂಜಾರ್ ಭೀಮಪ್ಪ ಮತ್ತು ಮಲ್ಲಮ್ಮ ಪೂಜಾರ್ ಅವರ ಪುತ್ರ ತಿಮ್ಮಪ್ಪ ಪೂಜಾರ್ ಅವರ ಪ್ರಾಥಮಿಕ, ಪ್ರೌಢಶಾಲಾ ವಿದ್ಯಾಭ್ಯಾಸ ತಾಯಿಯ ತವರೂರು ಕೋಗಳಿಯ ಸರಕಾರಿ ಶಾಲೆಯಲ್ಲಿ ನಡೆಯಿತು. ಹೊಸಪೇಟೆಯ ಸರಕಾರಿ ಐಟಿಐ ಕಾಲೇಜಿನಲ್ಲಿ ಐಟಿಐ ಪದವಿ ಪಡೆದು ಬೆಂಗಳೂರಿನ ಖಾಸಗಿ ಸಂಸ್ಥೆಗಳಲ್ಲಿ ನೌಕರಿಗೆ ಸೇರಿದರೂ ಸಮಾಧಾನವಿಲ್ಲ. ಇಸ್ರೋ ದಲ್ಲಿ ಉದ್ಯೋಗಿಯಾಗಬೇಕೆಂಬ ಕನಸು ನನಸಾಗದಿದ್ದಕ್ಕೆ ಮತ್ತೇ ಡಿಪ್ಲೋಮಾ ಕಾಲೇಜಿಗೆ ಪ್ರವೇಶ ಪಡೆದು ಕಷ್ಟ ಪಟ್ಟು ಓದಿ ಉತ್ತೀರ್ಣರಾದರು. ಈ ಅರ್ಹತೆ ಇಸ್ರೋ ಸೇರುವ ಕನಸನ್ನು ನನಸು ಮಾಡಿತು.
ಇದೀಗ ಚಂದ್ರಯಾನ-೩ರ ಯಶಸ್ವಿನ ಟೀಮ್ ನಲ್ಲಿ ತಿಮ್ಮಪ್ಪ ಇರುವುದು ಅವಿಭಜಿತ ಬಳ್ಳಾರಿ ಜಿಲ್ಲೆಯ ಜನತೆಗೆ ಎಲ್ಲಿಲ್ಲದ ಹೆಮ್ಮೆ.
ಗ್ರಾಮದ ಶ್ರೀನಿವಾಸ ಮೆಡಿಕಲ್ ಸ್ಟೋರ್ ನ ಜಿ.ಶ್ರೀನಿವಾಸಶೆಟ್ಟಿ ತನ್ನ ಆಪ್ತ ಮಿತ್ರನ ಬಗ್ಗೆ ಹೇಳುವುದು ಹೀಗೆ. “ಸಹೋದರನಂತಿರುವ ತಿಮ್ಮಪ್ಪ ಹಂಪಾಪಟ್ಟಣಕ್ಕೆ ಬಂದಾಗ ನನ್ನ ಹತ್ತಿರವೇ ಹೆಚ್ಚು ಸಮಯ ಕಳೆಯುತ್ತಾನೆ. ತಿಮ್ಮಪ್ಪ ಮತ್ತು ನಾನು ಒಂದೇ ಕುಟುಂಬದ ಸದಸ್ಯರಂತೆ ಇರುತ್ತೇವೆ. ತಿಮ್ಮಪ್ಪ 2019ರಲ್ಲಿ ವಿವಾಹವಾದರು. ಮದುವೆಯ ಸಂಪೂರ್ಣ ಜವಾಬ್ದಾರಿಯನ್ನೇ ನನಗೆ ವಹಿಸಿ ಕೊಟ್ಟಿದ್ದರು” ಎಂದು ನೆನೆದು ಭಾವುಕರಾದರು. ಗ್ರಾಮದಲ್ಲಿ ಇರುವ ದಿನಗಳಲ್ಲಿ ಸಾಮಾನ್ಯರಲ್ಲಿ ಸಾಮಾನ್ಯರಾಗಿರುತ್ತಾರೆ. ಲುಂಗಿ-ಟೀಶರ್ಟ್ ಸರಳ ಉಡುಪಿನಲ್ಲಿದ್ದು ಗಮನ ಸೆಳೆಯುತ್ತಾರೆ.
ಇಸ್ರೋ ಉದ್ಯೋಗಿ ಎನ್ನುವ ಯಾವುದೇ ಹಮ್ಮು ಬಿಮ್ಮು ತಿಮ್ಮಪ್ಪನಲ್ಲಿ ಇರದಿರುವುದು ಗ್ರಾಮದ ಬಾಲ್ಯದ ಗೆಳೆಯರಿಗೆ ಖುಷಿ.
ಕರ್ನಾಟಕ ಕಹಳೆ ಡಾಟ್ ಕಾಮ್ ಜತೆ ಮಾತನಾಡಿದ ಚಂದ್ರಯಾನ-೩ರ ಯಶಸ್ಸು ನನಗೂ ಅತ್ಯಂತ ಸಂತಸ ನೀಡಿದೆ. ಇಸ್ರೋ ಉದ್ಯೋಗಿಯಾಗಿದ್ದು ಇಂತಹ ದೇಶವೇ ಮೆಚ್ಚುವ ಕಾರ್ಯದಲ್ಲಿ ಭಾಗಿಯಾಗಿದ್ದು ಪುಣ್ಯವೇ ಸರಿ ಎಂದರು.
ಗ್ರಾಮಕ್ಕೆ ಕೀರ್ತಿ ತಂದಿರುವ ತಿಮ್ಮಪ್ಪ ಅವರನ್ನು ಅಭಿನಂದಿಸಲು ಗ್ರಾಮಸ್ಥರು, ಬಂಧು ಮಿತ್ರರು ತುದಿಗಾಲಲ್ಲಿ ನಿಂತಿದ್ದಾರೆ. ಊರಿಗೆ ಆಗಮಿಸುವುದನ್ನೇ ಕಾಯ್ತಾ ಇದ್ದಾರೆ.
—–