ಅನುದಿನ ಕವನ-೯೬೬, ಕವಿ: ಸಿದ್ಧರಾಮ‌ಕೂಡ್ಲಿಗಿ, ಕಾವ್ಯ ಪ್ರಕಾರ: ಗಜಲ್

ಗಜಲ್

ಎದೆಯಾಳದಲ್ಲೊಂದು ಕಂಬನಿಯಿತ್ತು ನನ್ನ ನಗೆಯಲ್ಲಿ ನೀನದನ್ನು ನೋಡಲೇ ಇಲ್ಲ
ಉಸಿರಿನೊಳಗೊಂದು ನಿಟ್ಟುಸಿರಿತ್ತು ನನ್ನ ಮಾತುಗಳ ಸುಳಿಯಲ್ಲಿ ನೀನದ ಕಾಣಲೇ ಇಲ್ಲ

ಮನದೊಳಗೊಂದು ದಿಕ್ಕೇಡಿಯಾಗಿ ಅಲೆಯುತಿಹ ಭೋರ್ಗರೆವ ಪ್ರವಾಹ ಅಡಗಿಹುದು
ಚಂದದ ಮನೆಯೊಂದು ಕುಸಿದುಬಿತ್ತು ನೆಲ ನಡುಗಿದ ಭರದಲ್ಲಿ ನೀನು ಗುರುತಿಸಲೇ ಇಲ್ಲ

ಅನುದಿನವೂ ಅನವರತವೂ ಸುಂದರತೆಯನೇ ತೋರುವ ಬದುಕಿನ ಬೆಳಗು ಬೈಗುಗಳಿದ್ದವು
ಸುಂದರ ಕನ್ನಡಿಯೊಂದು ಒಡೆದು ಚೂರಾಯ್ತು ನಡೆವ ಹಾದಿಯಲಿ ನಿನಗದು ಅರಿವಾಗಲೇ ಇಲ್ಲ

ಪ್ರತಿಕ್ಷಣವೂ ನೆಮ್ಮದಿಯನೇ ಬಯಸುವ ತನ್ನದೇ ರೆಕ್ಕೆಗಳಿವೆಂದು ಹಾರುತಲಿತ್ತು ಸುಂದರ ಚಿಟ್ಟೆ
ಕಾಲನ ಹೊಡೆತಕೆ ರೆಕ್ಕೆಗಳೇ ಕಿತ್ತುಹೋದವು ಕಲ್ಲುಬಂಡೆಯಾದ ನಿನ್ನೆದೆಗದು ಸೋಂಕಲೇ ಇಲ್ಲ

ನೀ ಜೊತೆಗಿರುವಾಗ ಬದುಕು ಹೂಗಳರಳಿದ ಸುಂದರ ದಾರಿಯೆಂದೇ ಕೈಹಿಡಿದು ನಡೆದಿದ್ದನು ಸಿದ್ಧ
ಹೂಗಳೆಲ್ಲ ಕೆಂಡಗಳಾದಾಗ ಉರಿವ ದಾರಿಯ ದಾಟಿ ನಡೆದಿದ್ದ ನಿನ್ನ ಪಾದಗಳಿಗೆ ಗೊತ್ತಾಗಲೇ ಇಲ್ಲ


-ಸಿದ್ಧರಾಮ ಕೂಡ್ಲಿಗಿ