ಭಾರತದ ಬಾಹ್ಯಾಕಾಶದ ಸಂಸೋಧನೆಯ ಇತಿಹಾಸದಲ್ಲಿ ಈ ತಿಂಗಳು ಅಂದರೆ, ಆಗಸ್ಟ್ 23 ರ ಬುಧವಾರ ಐತಿಹಾಸಿಕವಾಗಿ ಸ್ಮರಣೀಯ ದಿನವಾಯಿತು. ಚಂದ್ರನ ಮೇಲೆ ಇಳಿದ ಆ ಪುಟ್ಟ ಲ್ಯಾಂಡರ್ ನೌಕೆಯ ಹೆಸರು ವಿಕ್ರಮ್ ಎಂಬುದು ಎಲ್ಲರಿಗೂ ತಿಳಿದ ವಿಷಯ. ಆದರೆ, ಈ ಹೆಸರಿನ ಹಿಂದೆ ಒಂದು ಭವ್ಯ ಇತಿಹಾಸವಿದೆ. ಭಾರತದಲ್ಲಿ ಬಾಹ್ಯಾಕಾಶದ ಸಂಶೋಧನೆಯನ್ನು ಆರಂಭಿಸಿದ ವಿಕ್ರಮ್ ಸಾರಾಬಾಯ್ ಅವರ ಹೆಸರನ್ನು ಈ ನೌಕೆಗೆ ಇಡಲಾಗಿತ್ತು.
1971 ರ ಡಿಸಂಬರ್ ತಿಂಗಳಿನಲ್ಲಿ ಕೇರಳದ ತಿರುವನಂತಪುರಕ್ಕೆ ಆಗಮಿಸಿದ್ದ ವಿಕ್ರಮ್ ಸಾರಾಬಾಯ್ ಅವರು ಎಸ್.ಎಲ್.ವಿ. -2 ಉಡಾವಣೆ ಕುರಿತಂತೆ ವಿಜ್ಞಾನಿಗಳ ಜೊತೆಗೆ ಚರ್ಚೆ ನಡೆಸಿದ ನಂತರ ಬಾಹ್ಯಾಕಾಶ ವಿಜ್ಞಾನಿ ಹಾಗೂ ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಜೊತೆಗೆ ದೂರವಾಣಿಯಲ್ಲಿ ಮಾತನಾಡಿ ಅವರಿಂದ ಮಾರ್ಗದರ್ಶನ ಪಡೆದು ವಾಪಸ್ ಮುಂಬೈ ನಗರಕ್ಕೆ ತೆರಳಲು ಸಿದ್ಧರಾಗುತ್ತಿದ್ದಾಗ ಹೃದಯಾಘಾತದಿಂದ ತಿರುವಂತಪುರದಲ್ಲಿ ನಿಧನರಾದರು.
ವಿಕ್ರಮ್ ಸಾರಾಬಾಯ್ ನಿಧನರಾದಾಗ ಅವರ ವಯಸ್ಸು ಕೇವಲ 52 ವರ್ಷ. ಕಾಕತಾಳಿಯವೆಂದರೆ, ಅವರು ನಿಧನರಾದ 52 ವರ್ಷದ ನಂತರದ ಈ ಸಂಧರ್ಭದಲ್ಲಿ ಅವರು ಕಂಡಿದ್ದ ಕನಸು ನೆನಸಾಗಿದೆ. ಅವರ ಅಧ್ಯಯನದ ಮಾರ್ಗದರ್ಶನದಲ್ಲಿ ನಡೆದು ಬಂದ ನಮ್ಮ ಭಾರತದ ಇಂದಿನ ವಿಜ್ಞಾನಿಗಳು ಅವರ ಮಹದಾಸೆಯನ್ನು ಪೂರೈಸುವುದರ ಜೊತೆಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ವಿಶೇಷವಾಗಿ ಬಾಹ್ಯಾಕಾಶ ವಿಜ್ಞಾನ ಕ್ರೇತ್ರದಲ್ಲಿ ಭಾರತದ ಸ್ಥಾನವನ್ನು ಎತ್ತರಕ್ಕೆ ಕೊಂಡೊಯ್ದಿದ್ದಾರೆ.
ವಿಕ್ರಮ್ ಸಾರಾಬಾಯ್ ಅವರ ಕುಟುಂಬದ ಹಿನ್ನಲೆ ಮತ್ತು ಸಾರ್ವಜನಿಕ ಕ್ಷೇತ್ರದಲ್ಲಿ ಅವರು ತೊಡಗಿಸಿಕೊಂಡಿರುವ ವೈಖರಿ ನಿಜಕ್ಕೂ ಪ್ರತಿಯೊಬ್ಬ ಭಾರತೀಯನೂ ಹೆಮ್ಮೆ ಪಡುವಂತಹದ್ದು. ಇವರ ತಂದೆ ಅಂಬಾಲಾಲ್ ಸಾರಾಬಾಯ್ ಅವರು 1900 ರ ದಶಕದಲ್ಲಿ ಅಹಮದಾಬಾದ್ ನಗರದಲ್ಲಿ ಪ್ರಸಿದ್ಧ ಗಿರಣಿ ಮಾಲಿಕರು. ಗಾಂಧೀಜಿಯವರ ನಂಬಿಕೆ ಮತ್ತು ಹೋರಾಟಗಳಿಗೆ ಆತ್ಮ ವಿಶ್ವಾಸವನ್ನು ತುಂಬಿದವರು. 1915 ರಲ್ಲಿ ಅಹಮದಾಬಾದಿನ ಹೊರವಲಯದ ಸಬರಮತಿ ನದಿಯ ದಂಡೆಯಲ್ಲಿ ಗಾಂಧೀಜಿಯವರು ಆಶ್ರಮವನ್ನು ಸ್ಥಾಪಿಸಿ, ಹರಿಜನ ಕುಟುಂಬವೊಂದನ್ನು ಆಶ್ರಮಕ್ಕೆ ಸೇರಿಸಿಕೊಂಡಾಗ ಅವರ ಸಹೋದರಿಯರು ಆಶ್ರಮವನ್ನು ತ್ಯೆಜಿಸಿದರು. ನಂತರ ಇತರೆ ಆಶ್ರಮವಾಸಿಗಳು ಸಹ ಭೋಜನ ವ್ಯವಸ್ಥೆಯನ್ನು ಧಿಕ್ಕರಿಸಿದಾಗ ಹಾಗು ಇತರೆ ಸಮಾಜದ ಗಣ್ಯರು ಆಶ್ರಮದಿಂದ ದೂರ ಉಳಿದಾಗ ಗಾಂಧೀಜಿಯವರು ದೃತಿಗೆಡಲಿಲ್ಲ.
ಆಶ್ರಮದ ಭೂಮಿಯಲ್ಲಿ ದುಡಿದು ತಿನ್ನೋಣ ಎಂದು ಬಾಪು ನಿರ್ಧರಿಸಿದ್ದಾಗ ಒಂದು ದಿನ ತಡರಾತ್ರಿ ಕಾರಿನಲ್ಲಿ ಆಶ್ರಮದ ಗೇಟಿನ ಬಳಿಗೆ ಆಗಮಿಸಿದ ಅಂಬಲಾಲ್ ಸಾರಾಬಾಯ್ ಗಾಂಧೀಜಿಯವರನ್ನು ಕರೆಸಿಕೊಂಡು ಅವರ ಕೈಗೆ ಹದಿಮೂರು ಸಾವಿರ ರೂಪಾಯಿ ಹಣವನ್ನಿತ್ತು, ಈ ವಿಷಯ ಹೊರಜಗತ್ತಿಗೆ ತಿಳಿಯುವುದು ಬೇಡ ಎಂದು ತಾಖೀತು ಮಾಡಿ ಹೋದರು. ಸುಮಾರು ಮುವತ್ತು ಮಂದಿ ಆಶ್ರಮವಾಸಿಗಳು ಇದ್ದ ಸಬರಮತಿ ಆಶ್ರಮಕ್ಕೆ ಒಂದು ವರ್ಷ ಕಾಲ ಯಾವುದೇ ಆರ್ಥಿಕ ಕೊರತೆ ಕಾಡಲಿಲ್ಲ. ಈ ಹಿನ್ನಲೆಯಲ್ಲಿ ಆಶ್ರಮದಲ್ಲಿ ಚರಕದಿಂದ ನೂಲು ತೆಗೆಯುವ ಯೋಜನೆಗೆ ಗಾಂಧೀಜಿ ಚಾಲನೆಯಿತ್ತರು. ಅವರ ಸ್ವದೇಶಿ ಚಿಂತನೆಗೆ ಅಂಬಾಲಾಲ್ ಸಾರಾಬಾಯ್ ಬೆಂಬಲವಾಗಿ ನಿಂತರು.
ಅಂಬಾಲಾಲ್ ಸಾರಾಬಾಯ್ ಅವರ ಕಿರಿಯ ಸಹೋದರಿ ಅನುಸೂಯಾ ಬೆಹನ್ ಅವರು 1916 ರಲ್ಲಿ ಇಂಗ್ಲೇಂಡಿನ ಲಂಡನ್ ನಗರದ ‘’ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್’ ಸಂಸ್ಥೆಯಲ್ಲಿ ಅಧ್ಯಯನ ಮಾಡಿ ಬಂದು ಅಹದಾಬಾದ್ ಜವಳಿ ಗಿರಣಿಗಳಲ್ಲಿ ದುಡಿಯುತ್ತಿದ್ದ ಮಹಿಳಾ ಕಾರ್ಮಿಕರ ಪರವಾಗಿ ಹೋರಾಡಿ 1920 ರಲ್ಲಿ ಭಾರತದಲ್ಲಿ ಪ್ರಥಮವಾಗಿ ಮಹಿಳಾ ಕಾರ್ಮಿಕ ಒಕ್ಕೂಟವನ್ನು ಸ್ಥಾಪಿಸಿದ ಮಹಾನ್ ಹೋರಾಟಗಾರ್ತಿ ಎಂದು ಹೆಸರಾದವರು. ಇಂತಹ ಕುಟುಂಬದಲ್ಲಿ 1919 ರಲ್ಲಿ ಜನಿಸಿದ ವಿಕ್ರಮ್ ಸಾರಾಬಾಯ್ ಅಹಮದಾಬಾದಿನಲ್ಲಿ ವಿಜ್ಞಾನದಲ್ಲಿ ಪದವಿ ಮುಗಿಸಿ ನಂತರ ಇಂಗ್ಲೇಂಡಿನ ಕೇಬ್ರಿಡ್ಕ್ ವಿಶ್ವವಿದ್ಯಾನಿಲಯದಲ್ಲಿ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಸೂರ್ಯನ ವಿಕಿರಣ ಕುರಿತ ಸಂಶೋಧನೆಗೆ ಡಾಕ್ಟರೇಟ್ ಪದವಿ ಗಳಿಸಿ ಭಾರತಕ್ಕೆ ಹಿಂತಿರುಗಿ ಸಂತೋಧನೆಯಲ್ಲಿ ತೊಡಗಿಸಿಕೊಂಡರು’ ಇಂದಿಗೂ ನಾವು ಅಹಮದಾಬಾದಿನ ಕೇಂದ್ರಸ್ಥಳವಾದ ಲಾಲ್ ದರ್ವಾಜ ಬಳಿ ಸಾರಾಬಾಯ್ ಕುಟುಂಬದ ಕಚೇರಿಗಳನ್ನು ನಾವು ನೋಡಬಹುದಾಗಿದೆ. ( ಸಿದ್ಧಾರ್ಥ ಕಾಲೇಜ್ ಸಮೀಪ)
ವಿಕ್ರಮ್ ಸಾರಾಬಾಯ್ ಅವರಿಗೆ ನಮ್ಮ ಬೆಂಗಳೂರಿನ ಕನ್ನಡಿಗ ಡಾ,ಸರ್.ಸಿ.ವಿ. ರಾಮನ್ ಅವರು ಪಿ.ಹೆಚ್.ಡಿ. ಪದವಿಗೆ ಮಾರ್ಗದರ್ಶಕರಾಗಿದ್ದರು. ಮುಂದಿನ ದಿನಗಳಲ್ಲಿ ಗುರುವಿನಿಂದ ಕಲಿತ ಜ್ಞಾನವನ್ನೆಲ್ಲಾ ವಿಕ್ರಮ್ ಸಾರಾಬಾಯ್ ಅವರು ಮತ್ತೊಬ್ಬ ಕನ್ನಡಿಗ ಹಾಗೂ ಶಿಷ್ಯ ಡಾ.ಯು.ಆರ್. ರಾವ್ ( ಉಡುಪಿ ರಾಮಚಂದ್ರರಾವ್) ಅವರಿಗೆ ಧಾರೆ ಎರೆದರು. ಜೈನ ಸಮುದಾಯಕ್ಕೆ ಸೇರಿದ ವಿಕ್ರಮ ಸಾರಾಬಾಯ್ ಅವರು ಮೃಣಾಲಿನಿ ಎಂಬ ಖ್ಯಾತ ನೃತ್ಯ ಕಲಾವಿದೆಯನ್ನು ವಿವಾಹವಾಗಿದ್ದರು. ಇವರ ಪುತ್ರಿ ಮಲ್ಲಿಕಾ ಸಾರಾಬಾಯ್ ಕೂಡಾ ಪ್ರಸಿದ್ಧ ನೃತ್ಯಗಾತಿ ಹಾಗೂ ಕಲಾವಿದೆಯಾಗಿ ಹೆಸರು ಮಾಡಿದ್ದಾರೆ. ಮತ್ತೊಬ್ಬ ಪುತ್ರ ಕಾರ್ತಿಕೇಯ ಸಾರಾಬಾಯ್ ಪ್ರಸಿದ್ಧ ಪರಿಸರ ವಿಜ್ಞಾನಿಯಾಗಿ ಗುರುತಿಸಿಕೊಂಡಿದ್ದಾರೆ.
ಭಾರತದ ಬಾಹ್ಯಾಕಾಶ ವಿಜ್ಞಾನದಲ್ಲಿ ವಿಕ್ರಮ್ ಸಾರಾಬಾಯ್ ಮತ್ತು ಸತೀಶ್ ದಾವನ್ ರಂತಹ ಕೆಲವೇ ಕೆಲವು ವಿಜ್ಞಾನಿಗಳನ್ನು ಹೊರತು ಪಡಿಸಿದರೆ ಇಂದಿಗೂ ಸಹ ಸಂಸ್ಥೆಯ ಅರವತ್ತು ವರ್ಷಗಳ ಇತಿಹಾಸದಲ್ಲಿ ದಕ್ಷಿಣ ಭಾರತೀಯರು ಮುಂಚೂಣಿಯಲ್ಲಿದ್ದಾರೆ. ವಿಕ್ರಮ್ ಸಾರಾಬಾರ್ ನಿಧನಾನಂತರ ಎಂಜಿಕೆ ಮೆನನ್ ಮುಖ್ಯಸ್ಥರಾಗಿದ್ದರು.ಆನಂತರ ಕಾಶ್ಮೀರ ಮೂಲದ ಸತೀಶ್ ದಾವನ್ ಮುಖ್ಯಸ್ಥರಾಗಿ ಇಸ್ರೊ ಕೆಂದ್ರವನ್ನು ಬೆಂಗಳೂರಿಗೆ ವರ್ಗಾಯಿಸಿದರು. ಇವರ ನಂತರ ಡಾ.ಯು.ಆರ್.ರಾವ್, ನಾಯಕ್, ರಾಧಾಕೃಷ್ಣನ್, ಡಾ.ಕೆ.ಶಿವನ್ ಹಾಗೂ ಈಗಿನ ಎಸ್.ಸೋಮನಾಥ್ ಹೀಗೆ ಹೆಸರಿಸಬಹುದು.
ಕೇಂದ್ರ ಸರ್ಕಾರವು ಇಸ್ರೋ ಸಂಸ್ಥೆಯ ವಿಜ್ಞಾನಿಗಳನ್ನು ಮತ್ತು ಅಲ್ಲಿನ ಸಿಬ್ಬಂದಿಯನ್ನು ಸರ್ಕಾರಿ ನೌಕರರು ಅಥವಾ ಇಸ್ರೊ ಸಂಸ್ಥೆ ಕೇಂದ್ರ ಸರ್ಕಾರದ ಅಂಗಸಂಸ್ಥೆ ಎಂದು ನೋಡುವ ದೃಷ್ಟಿಕೋನವನ್ನು ಈಗಲಾದರೂ ಬದಿಗಿರಿಸಿ ಅದಕ್ಕೆ ವಿಶೇಷ ಸ್ಥಾನಮಾನ ನೀಡಬೇಕಾಗಿದೆ. ಅಮೇರಿಕಾದ ನಾಸಾ ಸಂಸ್ಥೆಯಲ್ಲಿ ಮತ್ತು ಇಂಗ್ಲೇಂಡ್ ಮತ್ತು ಅಮೇರಿಕಾದ ವೈದ್ಯಕೀಯ ರಂಗದಲ್ಲಿ ಇರುವ ಬಹುತೇಕ ಪ್ರಸಿದ್ಧ ತಜ್ಞರು ಭಾರತೀಯರು ಎಂಬುದನ್ನು ಕೇಂದ್ರ ಸರ್ಕಾರ ಮನಗಾಣಬೇಕು.
ತಂತ್ರಜ್ಞಾನದ ಕ್ಷೇತ್ರದಲ್ಲಿನ ಗೂಗಲ್. ಮೈಕ್ರೊಸಾಪ್ಟ್ ನಂತಹ ನೂರಾರು ಬೃಹತ್ ಕಂಪನಿಗಳ ಪ್ರಮುಖ ಸ್ಥಾನದಲ್ಲಿಯೂ ಸಹ ಭಾರತೀಯ ಮೇಧಾವಿಗಳಿದ್ದಾರೆ. ಇಂತಹ ಪ್ರತಿಭೆಗಳಿಗೆ ದೇಶ ತೊರೆಯದಂತೆ ಮಾಡಲು ಎಲ್ಲಾ ಸವಲತ್ತುಗಳನ್ನು ಇಲ್ಲಿಯೇ ಒದಗಿಸುವ ಕುರಿತು ಭಾರತದ ರಾಜಕಾರಣಿಗಳು ಗಂಭೀರವಾಗಿ ಆಯೋಚಿಸಬೇಕಿದೆ.
-ಜಗದೀಶ್ ಕೊಪ್ಪ, ಹಿರಿಯ ಪತ್ರಕರ್ತರು, ಮೈಸೂರು
—–