ಬಣ್ಣದ ಶುಕ್ತಿ(ಶಿಶುಗೀತೆ)
ಇತ್ತ ನೋಡು ಪುಟ್ಟ ಕಂದ
ಕಪ್ಪೆಚಿಪ್ಪು ಇರುವುದು|
ಮುತ್ತು ಕೂಡ ಅದರ ಒಳಗೆ
ಜನಕೆ ಸಿಗುತಲಿರುವುದು||
ಬಣ್ಣಬಣ್ಣ ಚಿಪ್ಪು ತಂದು
ಜೋಡಿಸುತ್ತಲಿಟ್ಟರು|
ಕಣ್ಣ ಸೆಳೆವ ಹೆಣ್ಣರೂಪ
ತಂದು ಮುದವ ಕೊಟ್ಟರು||
ಹಲವು ಬಣ್ಣ ಶುಕ್ತಿ ತಂದು
ನಿನಗೆ ನಾನು ಕೊಡುವೆನು|
ಒಲವಿನಿಂದ ಜೋಡಿಸುತ್ತ
ನಿನಗೆ ಖುಷಿಯ ತರುವೆನು||
ನೀನು ಕೂಡ ಚಿಪ್ಪುಗಳನು
ಅಂದವಾಗಿ ಜೋಡಿಸು|
ಮೀನು ಮತ್ತು ವಿವಿಧ ಗೊಂಬೆ
ಮಾಡಿ ನನಗೆ ತೋರಿಸು||
ಮುದ್ದುಕಂದ ನಿನ್ನ ಕೆಲಸ
ನೋಡಿ ಎಲ್ಲ ಮೆಚ್ಚಲಿ|
ಶುದ್ಧ ಮನದಿ ನಿನ್ನ ಯಶಕೆ
ಶುಭವ ಕೋರಿ ಹರಸಲಿ||
-ಅಶ್ವತ್ಥನಾರಾಯಣ, ಮೈಸೂರು
—–