ಬೆಂಗಳೂರು, ಆ.29:ಜ್ಞಾನ ಜೀವನದ ಯಶಸ್ಸಿನ ಮಾರ್ಗವಾಗಿದೆ ಎಂದು ಕೃಷಿ ಅಧಿಕಾರಿ, ಸಾಹಿತಿ ಡಾ. ನೂರ್ ಸಮದ್ ಅಬ್ಬಲಗೆರೆ ಅವರು ಹೇಳಿದರು.
ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಆಯೋಜಿಸಿರುವ ಐದು ದಿನಗಳ ಆಡಿಯೋ-ವಿಡಿಯೋ ಎಡಿಟಿಂಗ್ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿದ್ದ ಅವರು ಮಾತನಾಡಿದರು.
ಜ್ಞಾನ ಸುಲಭವಾಗಿ ಸಿದ್ಧಿಸುವುದಿಲ್ಲ. ಶ್ರಮ ಬೇಡುತ್ತದೆ. ಕಲಿಕೆಯ ಸಂದರ್ಭದಲ್ಲಿ ಸಣ್ಣ ವಿಷಯಗಳನ್ನು ನಿರ್ಲಕ್ಷಿಸ ಬಾರದು ಎಂದು ಕಿವಿ ಮಾತು ಹೇಳಿದರು.
ಫೋಟೋಗ್ರಫಿಗೆ ಬದ್ಧತೆ ಇರಬೇಕು. ಹೆಚ್ಚು ಶಿಸ್ತು, ಶ್ರಮ ಬೇಡುತ್ತದೆ ಎಂದು ತಿಳಿಸಿದರು.
ಸಮಯಕ್ಕೆ ಮಹತ್ವ ನೀಡಬೇಕು. ಸಮಯವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಅತಿಥಿ, ಯುವ ಚಿತ್ರ ನಿರ್ದೇಶಕ ವಿಲಾಸ್ ಆರ್. ಕ್ಷತ್ರಿಯ ಅವರು ಮಾತನಾಡಿ, ಸಮಾಜಕ್ಕೆ ಸಂದೇಶ ನೀಡುವ ಚಿತ್ರ, ಕಿರುಚಿತ್ರಗಳನ್ನು ನಿರ್ಮಿಸುವುದು ನನ್ನ ಆದ್ಯತೆ ಎಂದು ಹೇಳಿದರು.
ತಾವು ಪ್ರತಿದಿನವೂ ಕಲಿಕೆಗೆ ಮಹತ್ವ ನೀಡುತ್ತೇನೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಕಾಡೆಮಿಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ. ಎ.ಎಂ. ರಮೇಶ್ ಅವರು, ಒಂದು ಫೋಟೊ ಸಾವಿರ ಪದಗಳಿಗೆ ಸಮನಾದರೆ ಒಂದು ವಿಡಿಯೋ ಕ್ಲಿಪ್ ಒಂದು ಮಿಲಿಯನ್ ಪದಗಳಿಗೆ ಸಮವಾಗಿರಬಹುದು ಎಂದು ಅಭಿಪ್ರಾಯಪಟ್ಟರು.
ಐದು ದಿನಗಳ ಕಾರ್ಯಾಗಾರವನ್ನು ಶಿಬಿರಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹಾರೈಸಿದರು.
ಅಕಾಡೆಮಿಯ ಅಧಿಕಾರಿ, ಕಾರ್ಯಾಗಾರ ಸಂಯೋಜಕ ಅಂಟೋನಿ ಎಂ ಲೋಬೊ ಉಪಸ್ಥಿತರಿದ್ದರು.
ಅಕಾಡೆಮಿಯ ಹಿರಿಯ ವೈಜ್ಞಾನಿಕ ಅಧಿಕಾರಿ ಡಾ. ಆರ್ ಆನಂದ್ ಅವರು ಸ್ವಾಗತಿಸಿದರು. ಉಮೇಶ ಘಾಟಗೆ ವಂದಿಸಿದರು.ವಿ.ಕೆ. ಶ್ರೀನಿವಾಸು ನಿರೂಪಿಸಿದರು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು ನಲವತ್ತು ಜನ ಶಿಬಿರಾರ್ಥಿಗಳು ಆಡಿಯೋ ವಿಡಿಯೋ ಕಾರ್ಯಾಗಾರದಲ್ಲಿ ಭಾಗವಹಿಸಿದ್ದಾರೆ.
—–