ಹೂವಿನ ಹಡಗಲಿ, ಸೆ.7:ಕಾವ್ಯ ಕ್ಷೇತ್ರದಲ್ಲಿ ಸಹಕಾರ ತತ್ವದಡಿ ಕವಿಯಿತ್ರಿ ಶೋಭಾ ಮಲ್ಕಿ ಒಡೆಯರ್ ಅವರು ಸಂಪಾದಿಸಿ ಪ್ರಕಟಿಸಿದ ‘ಕಾವ್ಯ ವಿಜಯ’ ಕವನ ಸಂಕಲನ ಒಂದು ಮೌಲಿಕ ಕೃತಿ ಎಂದು ಮಕ್ಕಳ ಸಾಹಿತಿ, ಅಧ್ಯಾಪಕ ಎಚ್ ಎಸ್ ಮಹೇಶ್ ಅವರು ಬಣ್ಣಿಸಿದರು.
ನಗರದ ಶ್ರೀ ಗವಿಸಿದ್ದೇಶ್ವರ ಮಠದಲ್ಲಿ ಶ್ರೀ ಹಿರಿಶಾಂತವೀರ ಸ್ವಾಮೀಜಿ ಗಳವರ ಸಾನಿಧ್ಯದಲ್ಲಿ ಆಯೋಜಿಸಿದ್ದ ಮಾಸಿಕ ಶಿವಾನುಭವ ಕಾರ್ಯಕ್ರಮ ಹಾಗೂ ಪುಸ್ತಕ ಲೋಕಾರ್ಪಣೆ ಸಮಾರಂಭದಲ್ಲಿ ಕೃತಿ ಕುರಿತು ಅವರು ಮಾತನಾಡಿದರು.
ವಿಜಯನಗರ ಜಿಲ್ಲೆಯ ಕವಯಿತ್ರಿಯರು ತಮ್ಮ ತಾಯಿಯಂದಿರನ್ನು ನೆನೆದು ಕವನ ರಚಿಸಿರುವುದು ಪುಸ್ತಕದ ಘನತೆಯನ್ನು ಎತ್ತಿ ಹಿಡಿಯುವುದರ ಜೊತೆಗೆ ಮಾತೃ ಪ್ರೇಮವನ್ನ ಅಕ್ಷರಗಳ ಮೂಲಕ ಅಭಿವ್ಯಕ್ತಪಡಿಸಿದ್ದಾರೆ ಎಂದು ಶ್ಲಾಘಿಸಿದರು.
ಈ ಸಂಕಲನದ ಬಹುತೇಕ ಕವಯತ್ರಿಯರು ಕಾವ್ಯ ರಚನೆಯನ್ನು ಪಟ್ಟಾಗಿ ಹಿಡಿದರೆ ಮುಂದಿನ ಸಂಕಲನಗಳಲ್ಲಿ ಅವರಿಂದ ಉತ್ತಮ ಕವಿತೆಗಳನ್ನು ನಿರೀಕ್ಷಿಸಬಹುದು. ನೂತನ ಜಿಲ್ಲೆಯಲ್ಲಿ ಗುರುತಿಸಿಕೊಂಡ ಈ ಕವಯತ್ರಿಯರಿಗೆ ಸಾರಸ್ವತ ಲೋಕದಲ್ಲಿ ಉಜ್ವಲ ಭವಿಷ್ಯವಿದೆ ಎಂದು ಹೇಳಿದರು.
ಕೃತಿ ಬಿಡುಗಡೆ ಮಾಡಿದ ವಿಶ್ರಾಂತ ಅಧ್ಯಾಪಕ ಕುಷ್ಟಗಿಯ ಹಿರೇಮನ್ನಾಪುರದ ವಿ ಎಸ್ ಕಾಡಗಿಮಠ ಅವರು, ನಮ್ಮ ತವರು ನೆಲ ಕುಷ್ಟಗಿಯ ಮಗಳು ಶೋಭಾ ಮಲ್ಕಿ ಒಡೆಯರ್ ಅವರು ಸಾಹಿತಿಯಾಗಿ, ಪ್ರಕಾಶಕರಾಗಿ ತಮ್ಮದೇ ಆದ ರೀತಿಯಲ್ಲಿ ಛಾಪು ಮೂಡಿಸಿದ್ದಾರೆ.
ವಿಜಯನಗರದ ಹನ್ನೊಂದು ಕವಿಯತ್ರಿಯರ ಕವನಗಳನ್ನು ಸಂಪಾದಿಸಿ ಸಂಕಲನ ಹೊರ ತಂದಿರುವುದು ನಮಗೆಲ್ಲ ಹೆಮ್ಮೆಯ ಸಂಗತಿ ಎಂದು ಪ್ರಶಂಸಿಸಿದರು.
ಸಂಪಾದಕಿ ಶ್ರೀಮತಿ ಶೋಭಾ ಮಲ್ಕಿ ಒಡೆಯರ್ ಸೇರಿದಂತೆ ಕವಿಯತ್ರಿಯರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ ಶ್ರೀ ಹಿರಿಶಾಂತವೀರ ಮಹಾಸ್ವಾಮಿಗಳು ತಮ್ಮ ಆಶೀರ್ವಚನದಲ್ಲಿ
ಶ್ರೀಮತಿ ಶೋಭಾ ಮಲ್ಕಿ ಒಡೆಯರ್ ಅವರು ತಮ್ಮ ಬರಹಗಳ ಮೂಲಕ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಉತ್ತಮೋತ್ತಮ ಗೀತೆಗಳನ್ನು ರಚಿಸಿ ಸಂಗೀತದ ಮೂಲಕ ಸಾದರಪಡಿಸಿರುವುದು ಸಾರಸತ್ವ ಲೋಕದಲ್ಲಿ ಗಮನ ಸೆಳೆದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ತಮ್ಮ ಭಾಗದ ಉತ್ತಮ ಸಾಹಿತಿಗಳನ್ನು ಕಂಡು ಸಂತಸವಾಯಿತು ಎಂದರು.
ಕೃತಿ ಸಂಪಾದಕಿ ಶೋಭಾ ಮಲ್ಕಿ ಒಡೆಯರ್ ಮಾತನಾಡಿ, ಎಲ್ಲ ಸಾಹಿತ್ಯಾಸಕ್ತರು , ಓದುಗರು ಕವಿಯತ್ರಿಯರಿಗೆ ಬೆಂಬಲ ನೀಡಿದರೆ ಪ್ರತಿಯೊಬ್ಬ ಕವಿಯತ್ರಿಯರು ತಮ್ಮ ಕೃತಿಗಳನ್ನು ಪ್ರಕಟಿಸುದರಲ್ಲಿ ಸಂದೇಹವಿಲ್ಲ. ನಿಮ್ಮ ಬೆಂಬಲ ಸದಾಹೀಗೇ ಇರಲೆಂದು ಮನವಿ ಮಾಡಿದರು.
ಶ್ರೀ ಮ. ನಿ. ಪ್ರ. ನಿರಂಜನ ಸ್ವಾಮೀಜಿಯವರು, ಸಂಪಾದಕಿ ಶ್ರೀಮತಿ ಶೋಭಾ ಮಲ್ಕಿ ಒಡೆಯರ್ ಸೇರಿದಂತೆ ಕವಿಯತ್ರಿಯರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಹಲವು ಗಣ್ಯರು ಉಪಸ್ಥಿತರಿದ್ದರು.
—–