ಸಣ್ಣ ಸಣ್ಣ ಪ್ರಶಂಸೆಗಳು ಉನ್ನತ ಮಟ್ಟಕ್ಕೆ ಹೋಗಲು ಪ್ರೇರೇಪಿಸುತ್ತವೆ : ಎಸ್ಪಿ ಶ್ರೀ ಹರಿಬಾಬು

ಹೊಸಪೇಟೆ, ಸೆ.10: ವಿದ್ಯಾರ್ಥಿಗಳ ಜೀವನದಲ್ಲಿ ಸಣ್ಣ ಸಣ್ಣ ಪ್ರಶಂಸೆಗಳು ಅವರನ್ನು ಉನ್ನತ ಮಟ್ಟಕ್ಕೆ ಹೋಗಲು ಪ್ರೇರೇಪಿಸುತ್ತವೆ ಎಂದು ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು ಬಿ.ಎಲ್.ಹೇಳಿದರು.   ನಗರದ  ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ಜಿಲ್ಲಾ ಕುರುಬರ ಸಂಘ, ಜಿಲ್ಲಾ ಹಾಗು ತಾಲೂಕು ಕನಕ ನೌಕರರ ಸಂಘದ ಸಹಯೋಗದೊಂದಿಗೆ ಅತಿ ಹೆಚ್ಚು ಆಂಕ ಗಳಿಸಿದ ಕುರುಬ ಸಮಾಜದ ಎಸ್ಎಸ್ಎಲ್ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಎಸ್ಎಸ್ಎಲ್ಸಿ, ಪಿಯುಸಿಯಲ್ಲಿ ನೀವು ಅತಿ ಹೆಚ್ಚು ಅಂಕ ಗಳಿಸಿದ್ದೀರಿ. ಈಗ ನಿಮ್ಮನ್ನು ಕರೆಸಿ, ಸನ್ಮಾನಿಸಿ, ಶಹಬ್ಬಾಷ್ ಗಿರಿ ನೀಡಿದರೆ ನಿಮಗೆ ಉತ್ತೇಜನ ನೀಡಿದಂತಾಗಿ ನೀವು ಇನ್ನಷ್ಟು ಗುರಿ ಸಾಧಿಸಲು ಸಾಧ್ಯವಾಗುತ್ತದೆ. ವಿದ್ಯಾರ್ಥಿ ಜೀವನದಲ್ಲಿ ಈ ರೀತಿಯ ಸಣ್ಣ ಸಣ್ಣ ಪ್ರಶಂಸೆಗಳು ನಿಮ್ನ ಜೀವನದಲ್ಲಿ ದೊಡ್ಡ ಗುರಿ ಸಾಧಿಸಲು ಪ್ರೇರೇಪಿಸುತ್ತವೆ ಎಂದರು.                                                ವಿದ್ಯಾರ್ಥಿಗಳು ಯಾವ ವಿಷಯದಲ್ಲಿ ಆಸಕ್ತಿ ಹೊಂದಿದ್ದಾರೋ ಆ ಕೋರ್ಸನ್ನು ಆಯ್ಕೆ ಮಾಡಿಕೊಳ್ಳಲು ಪೋಷಕರು ಸಹಕಾರ ನೀಡಿ. ಪೋಷಕರು ಓದಿನಲ್ಲಿ ಮಕ್ಕಳ ಮೇಲೆ ಒತ್ತಡ ಹೇರಬೇಡಿ. ಅವರ ಪಾಡಿಗೆ ಅವರನ್ನು ಬಿಟ್ಟುಬಿಡಿ. ಅವರು ಇನ್ಯಾವುದರಲ್ಲೋ ಸಾಧಿಸಬಹುದು ಎಂದರು.                           ಪ್ರತಿಯೊಬ್ಬರು ಹೆಸರು ಮಾಡಲು ಮೂರು ಕ್ಷೇತ್ರಗಳಿವೆ. ಸಿನಿಮಾ, ರಾಜಕೀಯ ಹಾಗು ನಾಗರಿಕ ಸೇವೆ. ಸಿನಿಮಾ, ರಾಜಕೀಯಕ್ಕೆ ಹಣಬಲ, ಜನಬಲ ಬೇಕು. ಆದರೆ ನಾಗರಿಕ ಸೇವೆಗೆ ನಿಮ್ಮ‌ಬುದ್ದಿಬಲ ಒಂದಿದ್ದರೆ ಸಾಕು. ಹೀಗಾಗಿ ಪರೀಕ್ಷಾ ಸಮಯದಲ್ಲಿ ಒತ್ತಡದಿಂದ ಓದದೇ, ಪ್ರಾರಂಭದಿಂದಲೇ ಓದಿಕೊಂಡು ಹೋದರೆ ಅದೇ ಮುಂದೆ ನಿಮಗೆ ಸುಲಭವಾಗುತ್ತದೆ ಎಂದು ಕಿವಿ ಮಾತು ಹೇಳಿದರು.                                                        ಜಿಲ್ಲಾ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಕುರಿ ಶಿವಮೂರ್ತಿ ಮಾತನಾಡಿ, ಶಿಕ್ಷಣ ಈ ಹಿಂದೆ ಕೆಲವೇ ವರ್ಗಗಳಿಗೆ ಸೀಮಿತವಾಗಿತ್ತು. ಈಗ ಡಿಜಿಟಲ್ ಯುಗ. ಇಲ್ಲಿ ಯಾರು ಬೇಕಾದರೂ ಕಲಿಯಬಹುದು, ಏನು ಬೇಕಾದರೂ ಸಾಧಿಸಬಹುದು. ಸಾಕಷ್ಟು ಅವಕಾಶಗಳಿವೆ. ವಿದ್ಯಾರ್ಥಿಗಳು ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಸಮಾಜ ನಮಗೆ ಏನು ಕೊಟ್ಟಿದೆ ಅನ್ನುವುದಕ್ಕಿಂತ, ಸಮಾಜಕ್ಕೆ ನಾವು ಏನು ಕೊಟ್ಟಿದ್ದೇವೆ ಎಂಬುದನ್ನು ಅರಿತುಕೊಂಡು ಸಾಗಬೇಕಿದೆ ಎಂದು ಹೇಳಿದರು.                              ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಚೆನ್ನಬಸಪ್ಪ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಶ್ರದ್ದೆ, ನಿಷ್ಠೆ ಅಳವಡಿಸಿಕೊಂಡರೆ ಖಂಡಿತ ಯಶಸ್ಸು ಸಾಧಿಸಬಹುದು.ಜೊತೆಗೆ ಮಕ್ಕಳ ಹಂಬಲವನ್ನು ಸಹ ಪೋಷಕರು ಪೋಷಿಸಬೇಕು. ನಾವು ಸರ್ಕಾರಿ ನೌಕರರು. ನಮ್ಮ ಜೀವನ ಚೆನ್ನಾಗಿದೆ. ನೀವು ಹೀಗೆ ಆಗಬೇಕಾದರೆ ಇಂದೇ ನಿಮ್ಮ ಗುರಿಯನ್ನು ತಲುಪಲು ಸಂಕಲ್ಪ ಮಾಡಿ ಎಂದು ಕರೆ ನೀಡಿದರು.                                        ಹಗರಿಬೊಮ್ಮನಹಳ್ಳಿ ತಾಲೂಕು ಕುರುಬರ ಸಂಘದ ಅಧ್ಯಕ್ಷ ಬುಡ್ಡಿ ಬಸವರಾಜ ಪ್ರಾಸ್ತಾವಿಕ ಮಾತನಾಡಿ, ಕುರುಬ ಸಮಾಜದಲ್ಲಿ ದಾನಿಗಳಿಗೆ ಕೊರತೆಯಿಲ್ಲ. ನೀವು ಚೆನ್ನಾಗಿ ಓದಿ ಎಸ್ಪಿ ಸಾರ್ ಅವರ ರೀತಿ ನೀವು ದೊಡ್ಡ ಅಧಿಕಾರಿಯಾಗಬೇಕು ಎನ್ನುವ ಉದ್ದೇಶದಿಂದ ಅವರನ್ನು ಕಾರ್ಯಕ್ರಮದ ಉದ್ಘಾಟನೆಗೆ ಕರೆಸಲಾಗಿದೆ. ನೀವು ಮೊಬೈಲ್ ಚಟ ಬಿಟ್ಟು ಪುಸ್ತಕದ ಚಟ ಹತ್ತಿಸಿಕೊಂಡರೆ ಜಗತ್ತೇ ನಿಮ್ಮ ಕಡೆ ತಿರುಗಿ ನೋಡುವಂತೆ ಮಾಡಬಹುದು ಎಂದರು.                                              ಮುಖಂಡರಾದ ರಾಜಶೇಖರ ಹಿಟ್ನಾಳ, ಆರ್.ಕೊಟ್ರೇಶ, ಚಿದಾನಂದಪ್ಪ, ರಾಮಚಂದ್ರಗೌಡ, ಬಿಸಿಯೂಟ ಅಧಿಕಾರಿ ಶೇಖರ ಹೊರಪೇಟಿ, ತಾ.ಪಂ.ಇಒ ಉಮೇಶ, ಜಿ.ಪಂ.ಉಪ ಕಾರ್ಯದರ್ಶಿ ಭೀಮಪ್ಪ ಲಾಳ ಮಾತನಾಡಿದರು.                                               ಬಳಿಕ ಎಸ್.ಎಸ್.ಎಲ್.ಸಿ. ಪಿ.ಯು.ಸಿ.ಯಲ್ಲಿ ಶೇ.90 ಅಂಕ ಗಳಿಸಿದ ವಿದ್ಯಾರ್ಥಿಗಳು ಹಾಗು ಪೋಷಕರಿಗೆ ನಗದು, ಹಾಗು ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.  ಇದೇ ಸಂದರ್ಭದಲ್ಲಿ ಜಿಲ್ಲಾ ಕುರುಬ ಸಮಾಜದ ಪದಾಧಿಕಾರಿಗಳು, ಜಿಲ್ಲಾ ಹಾಗು ತಾಲೂಕು ಕನಕ ನೌಕರರ ಸಂಘದ ಪದಾಧಿಕಾರಿಗಳನ್ನು ಸಹ ಇದೇ ವೇಳೆ ಸನ್ಮಾನಿಸಲಾಯಿತು.                               ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ಕುಲಗುರು ಗುರುವಿನ ಮಲ್ಲಯ್ಯ ಒಡೆಯರ್ ವಹಿಸಿದ್ದರು. ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಅಯ್ಯಾಳಿ ತಿಮ್ಮಪ್ಪ ಅಧ್ಯಕ್ಷತೆ ವಹಿಸಿದ್ದರು.  ಈ ಸಂಧರ್ಭದಲ್ಲಿ ಮುಖಂಡರಾದ ಎಲ್.ಎಸ್.ಆನಂದ, ಡಿ.ಚೆನ್ನಪ್ಪ, ಕನಕ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ಬಿ.ತಿಮ್ಮಪ್ಪ, ಪ್ರಧಾನ ಕಾರ್ಯದರ್ಶಿ ರಮೇಶ, ಪದಾಧಿಕಾರಿಗಳಾದ ಮಲ್ಲಯ್ಯ ಮೋಟಗಿ, ಶಿವರಾಮಪ್ಪ, ಮಲ್ಲಿಕಾರ್ಜುನ, ಟಿ.ವಿಶ್ವನಾಥ, ಎಚ್.ಶ್ರೀನಿವಾಸ, ಕ್ಯಾದಿಗೆಹಾಳ್ ಉದೇದಪ್ಪ, ಕೆ.ಶ್ಯಾಮಲ ಕುಮಾರಿ, ಕೂಡ್ಲಿಗಿ ತಾಲೂಕು ಕುರುಬರ ಸಂಘದ ಅಧ್ಯಕ್ಷ ಬೊಪ್ಪಲಾಪುರ ಬಸವರಾಜ, ಹರಪನಹಳ್ಳಿ ಅಧ್ಯಕ್ಷ ಕೆ.ಗೋಣಿಬಸಪ್ಪ, ಕೊಟ್ಟೂರು ಅಧ್ಯಕ್ಷ ಮೂಗಪ್ಪ, ಹಡಗಲಿ ಅಧ್ಯಕ್ಷ ಹೊಸಕೇರಿ ಬೀರಪ್ಪ, ಬಿಸಾಟಿ ತಾಯಪ್ಪ, ಮೇಟಿ ಜಂಬಣ್ಣ ಸೇರಿದಂತೆ ಇತರರು ಇದ್ದರು.