‘ಕೊನೆಯ ಸಹಿ’ ಮಾಡುವುದು ಅಷ್ಟು ಸುಲಭವಲ್ಲ ! (ಟ್ರಾನ್ಸ್‌ಫರ್ ಆಯ್ತಾ ನಿಮ್ದು? ಒಂದ್ಸಲ ಓದಿ ಬಿಡಿ) -ಸೋಮು ಕುದರಿಹಾಳ ಚಂದಾಪುರ, ಗಂಗಾವತಿ

‘ಕೊನೆಯ ಸಹಿ’ ಮಾಡುವುದು ಅಷ್ಟು ಸುಲಭವಲ್ಲ !
(ಟ್ರಾನ್ಸ್‌ಫರ್ ಆಯ್ತಾ ನಿಮ್ದು? ಒಂದ್ಸಲ ಓದಿ ಬಿಡಿ)

ಸರ್ಕಾರಿ ನೌಕರಿ ಮಾಡುವವರ ಬದುಕಿನಲ್ಲಿ ವರ್ಗಾವಣೆ ಎಂಬುದು ಸಿಹಿ ಕಹಿಗಳ ಸಮ್ಮಿಲನ. ನೌಕರಿ ಸಿಗುವಾಗ ಯಾವುದೇ ಜಿಲ್ಲೆ ರಾಜ್ಯ ಗಡಿಗಳ ಮಿತಿ ನೋಡದೇ ಕೆಲಸ ಸಿಕ್ಕಲ್ಲಿ ಹೋಗಿ ಬಿಡುವವರು, ದಿನ ಕಳೆದಂತೆ ವರ್ಷ ಉರುಳಿದಂತೆ ಊರಿನ ಕಡೆ ಮನಸ್ಸು ಮಾಡುತ್ತಾರೆ. ವಿದೇಶದಲ್ಲಿ ಐಷಾರಾಮಿ ಬದುಕಿನ ನಂಟಿನಲ್ಲಿದ್ದವರು ತಾಯ್ನೆಲಕ್ಕೆ ಬಂದು ಬಿಡಬೇಕು ಎಂದು ಹಂಬಲಿಸುತ್ತಾರೆ. ಬೇರೆ ರಾಜ್ಯದಲ್ಲಿರುವವರು ತಮ್ಮ ರಾಜ್ಯಕ್ಕೆ ಹೋಗಬೇಕು ಎಂದು ವರ್ಗಾವಣೆಗಾಗಿ ಕಾಯುತ್ತಿರುತ್ತಾರೆ. ಆಹಾರ ಹೆಕ್ಕಲು ಹಾರಿ ಹೋದ ಹಕ್ಕಿಗೆ ಮರಳಿ ಗೂಡು ಸೇರುವ ಅವಸರ. ಅಲ್ಲಿ ಬೆಚ್ಚನೆಯ ಭಾವವಿದೆ. ತನಗಾಗಿ ಕಾದು ಕೊಕ್ಕು ಚಾಚುವ ಮಕ್ಕಳಿದ್ದಾರೆ. ಹೋದ ತಕ್ಷಣ ರೆಕ್ಕೆ ಅಗಲಿಸಿ ಸ್ವಾಗತಿಸುವ ಬಂಧುಗಳಿರುತ್ತಾರೆ.
ಬೇರೆ ಎಲ್ಲಿಯೋ ಇರುವಾಗ ಒಂಟಿತನವೋ ಅನಾಥ ಭಾವವೋ ಧುತ್ತನೆ ಎದುರು ನಿಂತು ಸಂಕಟಕ್ಕೀಡು ಮಾಡಿರುತ್ತದೆ. ನೌಕರಿಯೋ ದೀರ್ಘ ಪ್ರವಾಸವೋ ಕೆಲ ದಿನಗಳ ವಲಸೆಯೋ ಎಲ್ಲದರ ನಂತರ ಮತ್ತೆ ಹುಟ್ಟಿದ ಊರಿಗೆ ಹೋಗುವ ಬಯಕೆ ಸದಾ ಕಾಡುತ್ತಿರುತ್ತದೆ. ಊರಿನಲ್ಲಿ ಏನಾದರೂ ಕೆಟ್ಟದ್ದು ಘಟಿಸಿದರೆ? ಕುಟುಂಬದ ಯಾರಿಗಾದರೂ ತುರ್ತು ಆರೋಗ್ಯ ಹದಗೆಟ್ಟರೆ? ಸಾವೋ ಸಂಕಟವೋ ಬಂದು ಬಿಟ್ಟರೆ? ಯಾಕಾದರೂ ಬೇಕು ಈ ನೌಕರಿ ಎಂದುಕೊಂಡವರು ಬಹಳಷ್ಟು ಜನ. ಮದುವೆ ನಾಮಕರಣ ಹಬ್ಬದಂತಹ ಮನೆಯ ಸಂಭ್ರಮಗಳಿಗೆ ಹೋಗಲಾಗದೆ ಬಂಧು ಬಾಂಧವರಿಗೆ ನಿಷ್ಠುರರಾದವರು, ರಜೆ ಸಿಗದೇ ಒದ್ದಾಡಿದವರು, ಊರಿಗೆ ಹೋಗಿ ಮರಳಿ ಬರಲು ಆಗದಷ್ಟು ದೂರವಿದ್ದವರು, ಮಗ ಬರಲಿಲ್ಲವೆಂದು ಹಬ್ಬವನ್ನೇ ಮಾಡದ ತಾಯಿ, ನೌಕರಿ ಸೇರಿದ ಮಗಳಿಗೆ ಹೊಸ ಸೀರೆ ತಂದಿಟ್ಟಕೊಂಡ ಅಪ್ಪನ ನಿರಾಸೆ, ಅಜ್ಜ ಅಜ್ಜಿಯ ನಂಟನ್ನು ಕಳೆದುಕೊಂಡ ಮಕ್ಕಳು, ಊರಿನ ಸಂಬಂಧಿಕರನ್ನು ಗುರುತಿಸದಷ್ಟು ಅಂತರ, ಯಾವತ್ತೋ ಒಮ್ಮೆ ಹೋದಾಗ ‘ಯಾರು?’ ಎಂದು ಕೇಳಿಸಿಕೊಳ್ಳುವ ಪ್ರಶ್ನೆ, ಗಂಡ ಒಂದು ಕಡೆ ಹೆಂಡತಿ ಇನ್ನೊಂದು ಊರಿನಲ್ಲಿ ನಡೆಸುವ ಒಂಟಿ ಜೀವನ, ಅಪ್ಪ ಅಮ್ಮನ ಕೊನೆಯ ದಿನಗಳಲ್ಲಿ ಜೊತೆಗಿರುವ ಬಯಕೆ ಎಲ್ಲವೂ ಸೇರಿ ವರ್ಗಾವಣೆಯನ್ನು ಬಯಸುವುದು ಸಹಜ. ವರ್ಗಾವಣೆಯಲ್ಲಿ ಊರು ಸಿಗದಿದ್ದರೂ ಊರಿನ ಸಮೀಪಕ್ಕಾದರೂ ಹೋಗಬೇಕು ಎನ್ನುವ ತಹತಹಿಕೆ. ಇಂತಹ ಒಂದಿಲ್ಲೊಂದು ಕಾರಣಕ್ಕೆ ಗೆಳೆಯರು ವರ್ಗಾವಣೆಯಾಗಿ ತಮ್ಮ ಕೆಲಸದ ಸ್ಥಳವನ್ನು ಬದಲಿಸಿಕೊಂಡಿದ್ದಾರೆ. ಊರಿನ ಸಮೀಪಕ್ಕೋ ಪಕ್ಕದ ಜಿಲ್ಲೆಗೋ ಹೋಗಿ ಹೊಸ ಸ್ಥಳವನ್ನು ಸೇರಿದ್ದಾರೆ.
ವರ್ಗಾವಣೆ ಹೋಗುವುದು ಒಂದು ಖುಷಿಯೋ, ಅನಿವಾರ್ಯತೆಯೋ, ಅವಕಾಶವೋ ಅಗತ್ಯವೂ ಮತ್ತು ಸಹಜ ಪ್ರಕ್ರಿಯೆಯೂ ಆಗಿರಬಹುದು. ಆದರೆ ನೌಕರಿ ಮಾಡುತ್ತಿದ್ದ ಸ್ಥಳವಿದೆಯಲ್ಲ ಅದು ಅಷ್ಟು ಸುಲಭಕ್ಕೆ ಕಡಿದುಕೊಳ್ಳುವ ಕರುಳಲ್ಲ. ಕರುಳು ಕತ್ತರಿಸಿಕೊಂಡು ತಾಯಿಯಿಂದ ಬೇರ್ಪಟ್ಟರೂ ತಾಯಿಯ ಮಡಿಲಿನಿಂದ ದೂರವಿರಲು ಸಾಧ್ಯವೇ? ನೌಕರಿಗೆ ಸೇರಿದ ಮೊದಲ ದಿನ, ಬ್ಯಾಗು, ಸೂಟಕೇಸ್, ಟ್ರಂಕು ಹೊತ್ತುಕೊಂಡು ಬಂದ ಕ್ಷಣ, ಬಾಡಿಗೆ ಮನೆ ಹುಡುಕುವ ಅಲೆದಾಟ, ಜ್ವರ ಬಂದಾಗ ಊಟ ತಂದು ಕೊಟ್ಟ ಓನರ‍್ರು, ಸಂಬಳವಿಲ್ಲದಿದ್ದಾಗ ಕೈಸಾಲ ಕೊಟ್ಟ ಪಕ್ಕದ ಮನೆಯವರು, ನೌಕರಿಗೆಂದೇ ಬಂದು ಸೇರಿದ ಅಪರಿಚಿತರೆಲ್ಲ ಕೂಡು ಕುಟುಂಬದಂತೆ ಕಟ್ಟಿಕೊಂಡ ಸ್ನೇಹ ಸಂಬಂಧಗಳು, ಊರಿನಲ್ಲಾದ ಚಿಕ್ಕ ತೊಂದರೆಗೆ ಬಂಧುಗಳಿಗಿಂತ ಹೆಚ್ಚಾಗಿ ಜೊತೆ ನಿಂತು ನೆರವಾದವರು, ಅಪ್ಪನ ಸಾವಿಗೆ ಕಣ್ಣೀರಾದವರು, ಮಕ್ಕಳನ್ನು ಮೊಮ್ಮಕ್ಕಳಂತೆ ನೋಡಿಕೊಂಡವರು ಯಾವುದನ್ನೂ ಮರೆಯಲು ಸಾಧ್ಯ. ಹಬ್ಬದ ಅಡುಗೆ ತಂದು ಕೊಟ್ಟ ಅಡುಗೆಯಮ್ಮ, ಆಟವಾಡುತ್ತಿದ್ದಾಗ ಜಾರಿ ಬಿದ್ದಾಗ ಮುತ್ತಿಕೊಂಡ ಮಕ್ಕಳು ಇದೆಲ್ಲ ಯಾವ ಹೆಸರಿನ ಬಂಧ! ಒಬ್ಬೊಬ್ಬರಿಗೂ ಒಂದೊಂದು ಹೆಸರಿಲ್ಲದ ಬಂಧ. ಹೇಳಿಕೊಳ್ಳಲಾಗದೇ ಇದ್ದವರು ಮನದೊಳಗೆ ಅತ್ತಿದ್ದಾರೆ. ಹೇಳಿಕೊಂಡವರು ಕಣ್ಣೀರನ್ನು ತಡೆದಿಟ್ಟುಕೊಂಡಿದ್ದಾರೆ.
ಮೊದಲು ನೌಕರಿಗೆ ಬಂದಾಗ ಅಪರಿಚಿತ ಊರು. ಹೊರಟು ನಿಂತಾಗ ಕಣ್ಣೀರ ಕಡಲು. ಶಿಕ್ಷಕರು ವರ್ಗಾವಣೆಯಾಗಿ ಹೋಗುವಾಗ ಅಪ್ಪ ಅಮ್ಮನನ್ನು ತಬ್ಬಿ ಅಳುವಂತೆ ಅತ್ತ ಮಕ್ಕಳ ಎಷ್ಟೋ ವಿಡಿಯೋಗಳನ್ನು ನೋಡಿದ್ದೇವೆ. ಅದ್ಯಾವ ಬಂಧ ಹೀಗೆ ಬೆಸೆದುಕೊಂಡಿರುತ್ತದೆಯೋ ಅದೆಲ್ಲವನ್ನು ಬಿಟ್ಟು ಹಾಜರಿ ಪುಸ್ತಕದಲ್ಲಿ ‘ಕೊನೆಯ ಸಹಿ’ ಮಾಡಿ ಹೋಗುವುದು ಅಷ್ಟು ಸುಲಭವಲ್ಲ. ವಿಳಾಸ ಬದಲಿಸುವುದೆಂದರೆ ಪಿನ್‌ಕೋಡ್ ಬದಲಿಸಿಕೊಳ್ಳುವಷ್ಟು ಸರಳ ಅಲ್ಲ. ಬದಲಾದ ವರ್ಷದ ನಂಬರ್ ಕೆಲ ದಿನಗಳವರೆಗೆ ತಪ್ಪು ತಪ್ಪಾಗಿ ಬರೆಸಿಕೊಳ್ಳುವಂತೆ ಬದಲಾದ ಶಾಲೆ ಬದಲಾದ ನೌಕರಿಯ ಸ್ಥಳ ಕಾಡುತ್ತಲೇ ಇರುತ್ತದೆ. ಕೈ ತಡವುತ್ತಲೇ ಇರುತ್ತದೆ. ವರ್ಗಾವಣೆಯ ವಿಚಾರದಲ್ಲಿ ಬೇರೆ ಎಲ್ಲ ನೌಕರಿಗಳಿಗಿಂತಲೂ ಯಾತನದಾಯಕವಾದದ್ದು ಶಿಕ್ಷಕ ವೃತ್ತಿ. ದಿನದ ಮುಕ್ಕಾಲು ಭಾಗ ಮಕ್ಕಳ ಜೊತೆ ಕಳೆದು ಮನೆ ತಲುಪುವ ಶಿಕ್ಷಕನಿಗೆ ಅತೀ ನೆಮ್ಮದಿಯ ಸ್ಥಳ ಮತ್ತು ಸಮಯ ಮಕ್ಕಳ ಜೊತೆ ಕಳೆಯುವುದು. ಕಲಿಸುವ ಟೀಚರ್ ತಂದೆ ತಾಯಿಗಿಂತಲೂ ಹೆಚ್ಚು ಎನ್ನಿಸುವುದು ಮಕ್ಕಳಿಗೆ. ಮನೆಯ ಮಕ್ಕಳಿಗೂ ಮಿಗಿಲು ಶಾಲೆಯ ಮಕ್ಕಳು ಎನ್ನಿಸುವುದು ಶಿಕ್ಷಕರಿಗೆ. ಕೆಲವರು ತಮ್ಮ ಬದುಕನ್ನೇ ಧಾರೆ ಎರೆದು ಶಾಲೆಯನ್ನು ಜೀವಿಸಿರುತ್ತಾರೆ. ಅವರ ಬದುಕಿನ ಒಂದು ಭಾಗವನ್ನು ಬಿಟ್ಟು ಮತ್ತೊಂದು ಕಡೆ ಹೋಗುವುದು ಎಷ್ಟು ಕಷ್ಟವೋ!?
ವರ್ಗಾವಣೆಯಾಗಿ ಹೊರಟು ನಿಂತಾಗ ಮನಸ್ಸಿನಲ್ಲಿ ಆದ ಕನ್‌ಫೆಶನ್ ಅದೆಷ್ಟೋ..!? ಶಾಲೆಯಲ್ಲಿ ಆದ ಜಗಳ, ಸಹುದ್ಯೋಗಿಗಳ ಜೊತೆ ಮಾತು ಬಿಟ್ಟಿದ್ದು. ಊರಿನವರ ಜೊತೆ ಆದ ಗಲಾಟೆ, ಆದಿಕಾರಿಗಳ ಜೊತೆ ನಡೆದ ಮಾತಿನ ಚಕಮಕಿ, ಬೈಕ್ ರಿಪೇರಿ ಮಾಡಿಕೊಟ್ಟವನೊಂದಿಗಿನ ಚೌಕಾಸಿ, ಕಿರಾಣಿ ಅಂಗಡಿಯ ತಪ್ಪು ಲೆಕ್ಕಕ್ಕೆ ಮಾಡಿದ ಒರಟು ಮಾತುಕತೆ. ಅಯ್ಯೋ! ಎಷ್ಟು ಸಣ್ಣ ಕಾರಣಗಳು ಎನಿಸುತ್ತದೆ. ಶಾಲೆಯ ಶಿಕ್ಷಕರ ಕೈಹಿಡಿದುಕೊಂಡು ಸಾರಿ ಹೇಳಬೇಕು, ಊರಿನವರ ಜೊತೆ ಕೊನೆಯದಾಗಿ ಕುಳಿತು ಮಾತನಾಡಬೇಕು, ಕೊನೆಯ ಸಲ ಪೆಟ್ರೊಲ್ ಹಾಕಿಸಿಕೊಂಡು ಥ್ಯಾಂಕ್ಸ್ ಹೇಳಬೇಕು, ಊರೆಲ್ಲಾ ಸೇರಿ ಸನ್ಮಾನ ಮಾಡುವಾಗ ಮಾತೇ ಬರದೇ ಇದ್ದದ್ದು ಯಾಕೋ..? ಉಮ್ಮಳಿಸಿ ಬಂದ ದುಃಖಕ್ಕೆ ಕಪಾಳ ನೆನೆಯಿತೋ? ಮನಸ್ಸು ತೋಯಿತೋ..? ಏನೋ ಇದು, ಹೇಳಿ ಹಗುರವಾಗದ ಭಾವ.
ಹೊಸತೊಂದು ಶಾಲೆ, ಹೊಸ ಮಕ್ಕಳು, ಹೊಸ ಊರು ಸಿಗುತ್ತದೆ. ಬೈಕು ಹೊಸ ದಾರಿಯಲ್ಲಿ ಓಡುತ್ತದೆ. ನಮಸ್ಕಾರ ಮಾಡುವ ಕೈಗಳು ಬದಲಾಗುತ್ತವೆ. ಮಳೆ ಬಂದರೆ ನಿಲ್ಲುತ್ತಿದ್ದ ಮರ ಬೇರೆಯಾಗುತ್ತದೆ. ಊರಿನ ಹೆಸರು ಕೇಳದೆ ಟಿಕೆಟ್ ಕೊಡುತ್ತಿದ್ದ ಕಂಡಕ್ಟರ್ ನೆನಪಾಗುತ್ತಾರೆ. ಹೊಸ ಬ್ಯಾಂಕಿನಲ್ಲಿ ಅಕೌಂಟ್ ಮಾಡಿಸುವಾಗ ಹಳೆಯ ನೋಟುಗಳ ನೆನಪು. ಮನಸ್ಸಿನ ಒದ್ದಾಟಕ್ಕೆ ಮತ್ತೂ ಶಾಲೆಯೇ ಮದ್ದು. ಕ್ಲಾಸ್‌ರೂಂನೊಳಗೆ ಕಾಲಿಟ್ಟರೆ ಮತ್ತೆ ಹೊಸ ಪಾಠ. ಹೊಸ ಗೂಡು ಕಟ್ಟುವ ಕಡ್ಡಿ ಹುಲ್ಲುಗಳ ಜೋಡಣೆ, 10 16 20 ವರ್ಷಗಳ ಹಿಂದೆ ಇದ್ದ ಹುಮ್ಮಸ್ಸು ಈಗ ಇರುತ್ತದಾ? ಮತ್ತೆ ಮೊದಲಿನಂತೆ ಓಡುವ ಕಸುವ ಇದೆಯಾ? ಗೊತ್ತಿಲ್ಲ.. But ಕಾಲ clap board ಹಿಡಿದು ನಿಂತಿದೆ. ಶಾಲೆಯ ಬೆಲ್ಲು ಹೇಳುತ್ತಿದೆ
On your mark
Set
Go..

ಶುಭವಾಗಲಿ ಗೆಳೆಯರೇ.. ಹೊಸ ಹೆಜ್ಜೆಗಳಲ್ಲಿ ಹೊಸ ಕನಸುಗಳೇ ಹುಟ್ಟಲಿ. ಕುಟುಂಬದೊಂದಿಗಿನ ಬದುಕು ಚಂದವಿರಲಿ.

ಆದರೂ ನೆನಪಿರಲಿ, ಮನಸ್ಸೆಂದರೆ ವರ್ಷ ವರ್ಷವೂ ಬದಲಿಸುವ ಹಾಜರಿ ಪುಸ್ತಕವಲ್ಲ. ವರ್ಗಾವಣೆಯೆಂದರೆ ಬಿಡಿಸಿಕೊಳ್ಳುವುದೋ ಬಂಧನವೋ…!! ಹೊಸ ಬಂಧ ಕಟ್ಟಿಕೊಳ್ಳುವ ಹೊಸ ದಾರಿಯೋ..? ಮಧುರಾನುಬಂಧ. ಮರೆಯದಿರಿ.


-ಸೋಮು ಕುದರಿಹಾಳ ಚಂದಾಪುರ, ಗಂಗಾವತಿ