ಇಂದು ಹಿರಿಯ ಕವಿ ಕೆ.ವಿ ತಿರುಮಲೇಶರ ಜನ್ಮ ದಿನ. ಈ ಹಿನ್ನಲೆಯಲ್ಲಿ ಕವಿ, ವೈದ್ಯ ಡಾ. ಲಕ್ಷ್ಮಣ ವಿಎ ಅವರು ಕಾವ್ಯದ ಮೂಲಕ ಹಿರಿಯರನ್ನು ಸ್ಮರಿಸಿಕೊಂಡು ಶುಭಾಶಯ ಕೋರಿದ್ದಾರೆ. ಕರ್ನಾಟಕ ಕಹಳೆ ಡಾಟ್ ಕಾಮ್ ಕೂಡಾ ಈ ಮೂಲಕ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರುತ್ತಿದೆ. 🍀🎂🌹🍀🎂💐🍀🌺👇
ನನ್ನ ಮನೆಯ ಬೆಕ್ಕಿನ
ಕಣ್ಣಲ್ಲಿ ಕಣ್ಣಿಟ್ಟು ನೋಡಿದಾಗ
ಆ ಬೆಕ್ಕಿನ ಕಣ್ಣುಗಳಲ್ಲಿ ನೀವೇ
ಕಾಣುತ್ತೀರಿ
ಕಾಶಿ ರಾಮೇಶ್ವರ ಮುಂಬಯಿ
ಕಲ್ಕತ್ತಾ ಮದರಾಸು ಎಲ್ಲ ಬರೆದವರಿದ್ದರು
ಹುಸೇನ ಸಾಗರ ಎದಿರಿಗಿಟ್ಟುಕೊಂಡು
ಅದೆಲ್ಲಿ ಕಾರಡ್ಕ ಕಾರಡ್ಕ ಎಂದು
ಎಂದು ಕನಸಿನಲ್ಲೂ ಕನವರಿಸಿದಿರಿ
ಸೂಟು ಬೂಟು ಟೈ ಕೋಟು
ಪರ್ಫ್ಯೂಮು ಪೂಸಿಕೊಂಡು ಸರೀಕರು
ಫೋರಮುಗಳ ಪೋಡಿಯಮ್ಮಗಳ
ಕುಟ್ಟಿ ಕವಿತೆ ಓದುವಾಗ
ನೀವು ವ್ಯಾನ ಗಾಫ್ ನ ಕೊಳೆಯಾದ
ಬೆವರು ಮೆತ್ತಿದ ಬೂಟುಗಳ ತೋರಿಸಿದಿರಿ
ಬಿರು ಬೇಸಿಗೆಯಲಿ ಸುಡುತ್ತ ರೋಡಿಗೆ ಟಾರು ಹಾಕುವ ಆ ಲಂಬಾಣಿ
ಹುಡುಗಿಯ ಕಾಲುಗಳಿಗೆ ಆ ಬೂಟು ತೊಡಿಸಿ
ಸಮಾಧಾನ ಪಟ್ಟು ಕೊಂಡಿರಿ
ಹೂ ಹಾಸಿಗೆ ಚಂದ್ರ ಚಂದನ
ಬಾಹು ಬಂಧನದ ಸುರತದಲಿ ಮೈ ಮರೆತ
ಕವಿಗಳಿಗೆ
ಮರುಭೂಮಿಯ ಕಳ್ಳಿಯ ಹೂವೂ ಹೋವೇ
ಎಂದು ಕಣ್ಣು ತೆರೆಸಿದಿರಿ
ಈ ಶಹರದ
ದಾರಿಯಲಿ ಇದ್ದಲು ಇಸ್ತ್ರಿ ಅಂಗಡಿಯ
ಮಸಿ ಮೆತ್ತಿದ ಅಂಗಿಯ
ಪೆಂಟಯ್ಯನ ಅಂಗಡಿ ಕೆಡುವಿ ಈಗ
ಮಡಚಿದ ಮಾತುಗಳಿಗೆ
ಇಸ್ತ್ರಿ ಹಾಕಿ ಮಾರುವ ದೊಡ್ಡ ಮಾಲ್
ನೊಳಗೆ ಫಳ ಫಳ ಹೊಳೆಯುವ ಅಂಗಿಯ
ನೋಡಿದಾಗಲೆಲ್ಲ
ನೀವು ಯಾವುದೋ ಕಡಲ ತೀರದಲಿ
ಕಡಲೆ ಕಾಯಿ ಮೆಲ್ಲುತ್ತ
ಥೇಟು ಕವಿಯ ಹಾಗೆ
ಎಲ್ಲಿಗೂ ಹೋಗದೆ ನಾನೂ ಇಲ್ಲೇ ಇದ್ದೇನೆ
ಎಂದು ಮುಗಳು ನಗುತ್ತಿದ್ದೀರಿ
ಕವಿ ಇದ್ದಾನೆ ಎಲ್ಲರಂತೆ
ಕವಿಗಳು ಇರೋದೇ ಹಾಗೆ ಅಲ್ವೇ ?
-ಡಾ. ಲಕ್ಷ್ಮಣ ವಿ ಎ, ಬೆಂಗಳೂರು
—–