ಕೊಪ್ಪಳ ಸೆ. 13: ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ವಿವೇಕ ಯೋಜನೆಯಡಿಯಲ್ಲಿ
30 ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣಗೊಂಡ ಕನಕಗಿರಿ ತಾಲೂಕಿನ ಕನ್ನೇರುಮಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕೊಠಡಿಗಳನ್ನು ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿ ಅವರು ಬುಧವಾರ ಲೋಕಾರ್ಪಣೆಗೊಳಿಸಿದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಗಂಗಾವತಿ ಇವರಿಂದ ಗ್ರಾಮದ ಶಾಲಾ ಆವರಣದಲ್ಲಿ ನಡೆದ ಸಮಾರಂಭವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಸಚಿವರು,
ಶಾಲಾಭಿವೃದ್ದಿಯಲ್ಲಿ ಗ್ರಾಮಸ್ಥರ ಪಾತ್ರ ಮಹತ್ವದ್ದಾಗಿದ್ದು ಈ ಹಿನ್ನಲೆಯಲ್ಲಿ ಶಾಲಾ ಕಾರ್ಯಕ್ರಮವನ್ನು ಹಬ್ಬದಂತೆ ಆಚರಿಸುವ ಕನ್ನೇರುಮಡು ಗ್ರಾಮಸ್ಥರು ಇತರ ಗ್ರಾಮಸ್ಥರಿಗೆ ಮಾದರಿಯಾಗಿದ್ದಾರೆ ಎಂದರು. ನಮ್ಮ ಗ್ರಾಮಕ್ಕೆ ದೇವಸ್ಥಾನಕ್ಕಿಂತ ಮೊದಲು ಶಾಲೆಯಾಗಬೇಕು. ಶಾಲೆಯಾದರೆ ನಮ್ಮೂರ ಶಾಲಾ ಮಕ್ಕಳ ಕಲಿಕಾಮಟ್ಟ ಸುಧಾರಿಸಲಿದೆ ಎಂದು ಹೇಳುವ ಕನ್ಮೇರುಮಡು ಗ್ರಾಮಸ್ಥರಂತೆ ಇತರ ಗ್ರಾಮಸ್ಥರ ಮನಸ್ಥಿತಿ ಬದಲಾಗಬೇಕು. ನಮ್ಮೂರ ಶಾಲೆಗೆ ಇನ್ನು ಸಹ ಕೊಠಡಿಗಳು ಬೇಕು ಎಂದು ಹೇಳುತ್ತ ಶಾಲಾ ಏಳ್ಗೆಗೆ ದುಡಿಯುವಲ್ಲಿನ ಕನ್ನೇರುಮಡು ಗ್ರಾಮಸ್ಥರಲ್ಲಿನ ಹುಮ್ಮಸ್ಸು, ಅವರಲ್ಲಿನ ಶಿಕ್ಷಣ ಪ್ರೇಮ ಇತರರಿಗೆ ಅಕ್ಷರಶಃ ಮಾದರಿಯಾಗಿದೆ ಎಂದರು.
ಯಾವ ಗ್ರಾಮದಲ್ಲಿ ಶಾಲೆಯ ಗಂಟೆ ಸದ್ದು ಜೋರಾಗಿ ಮೊಳಗುತ್ತದವೋ ಆ ಊರು ಬೇಗನೇ ಅಭಿವೃದ್ಧಿಯಾಗಲು ಸಾಧ್ಯವಿದೆ ಎನ್ನುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಚಿಂತನೆಯನ್ನು ಗ್ರಾಮಸ್ಥರು ಅರಿಯಬೇಕು. ಗ್ರಾಮಸ್ಥರು ದೇವಸ್ಥಾನಗಳ ನಿರ್ಮಾಣದ ಬೇಡಿಕೆ ಇಡುವುದಕ್ಕಿಂತ ಶಾಲೆಗಳ ನಿರ್ಮಾಣಕ್ಕೆ ಬೇಡಿಕೆ ಇಡುವಂತಾಗಬೇಕು ಎಂದರು.
ಪ್ರತಿ ಗ್ರಾಮದಲ್ಲಿ ಶಾಲೆ ಇರಬೇಕು. ಮಕ್ಕಳು ಶಾಲೆಗೆ ಹೋಗಬೇಕು. ಮಕ್ಕಳ ಮನಸಿನಲ್ಲಿ ನಾಲ್ಕು ಅಕ್ಷರಗಳು ಮೂಡಿದಲ್ಲಿ ಅವರ ಬಾಳು ಬೆಳಗಲಿದೆ. ಒಬ್ಬ ಬಡ ಹುಡುಗ ಐಐಟಿನಲ್ಲಿ ಓದಿದರೆ, ಐಎಎಸ್, ಐಪಿಎಸ್, ಕೆಎಎಸ್ ಪಾಸು ಮಾಡಿ ಆಫೀಸರ್ ಆದರೆ ನಮಗೆಲ್ಲ ದೊಡ್ಡ ಗೌರವ. ಲಿಂಗಸೂರ ತಾಲೂಕಿನ ತಾಂಡಾವೊಂದರಲ್ಲಿ ಪ್ರತಿ ಮನೆಗೊಬ್ಬರು ಸರ್ಕಾರಿ ನೌಕರರು ಇರುವುದು ನಮಗೆಲ್ಲಾ ಮಾದರಿಯಾಗಬೇಕು ಎಂದರು.
ಗ್ರಾಮಸ್ಥರು ಸಹ ಪ್ರಜ್ಞಾವಂತರಾಗಬೇಕು. ಉಳ್ಳವರಿಗಷ್ಟೇ ಶಿಕ್ಷಣ ಅನ್ನುವಂತಾಗಬಾರದು. ಮನೆಗೊಬ್ಬ ಸುಶಿಕ್ಷಿತನಿದ್ದರೆ ಇಡೀ ಮನೆಯವರೆಲ್ಲಾ ಸುಶಿಕ್ಷಿತರಾಗಲು ಸಾಧ್ಯವಿದೆ. ಪಠ್ಯಪುಸ್ತಕ, ಬಟ್ಟೆ, ಮಧ್ಯಾಹ್ನ ಬಿಸಿಯೂಟ ಸೇರಿದಂತೆ ಸರ್ಕಾರವು ಶಿಕ್ಷಣಕ್ಕಾಗಿ ಹತ್ತಾರು ಸೌಕರ್ಯಗಳನ್ನು ಕಲ್ಪಿಸಿದ್ದು ಅದರ ಸದುಪಯೋಗವಾಗಬೇಕು. ಮುಖ್ಯವಾಗಿ ಹೆಣ್ಣುಮಕ್ಕಳು ತಪ್ಪದೇ ಓದುವಂತಾಗಬೇಕು ಎಂದರು.
ಕನ್ನೇರುಮಡು ಶಾಲೆಗೆ ಇನ್ನೇರಡು ಕೊಠಡಿಗಳನ್ನು ನೀಡಲಾಗುವುದು. ಶಾಲಾ ಕಾಂಪೌಂಡ್ ನಿರ್ಮಾಣಕ್ಕೆ ಒತ್ತು ಕೊಡಲಾಗುವುದು ಎಂದು ತಿಳಿಸಿದರು.
ಕೆಕೆಆರ್ ಡಿಬಿಯಿಂದ ಅನುದಾನ ಪಡೆದು
ಕನಕಗಿರಿ ಕ್ಷೇತ್ರದಲ್ಲಿ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಒತ್ತು ಕೊಡಲಾಗುವುದು. ಕನಕಗಿರಿ ಕ್ಷೇತ್ರಕ್ಕೆ ದಾಖಲೆಯ ಪ್ರಮಾಣದಲ್ಲಿ ಕೆಕೆಆರ್ ಡಿಬಿಯಿಂದ ಅನುದಾನ ತಂದಿರುವುದಾಗಿ ಸಚಿವರು ಹೇಳಿದರು.
ಕ್ಷೇತ್ರದ ಅಭಿವೃದ್ಧಿಗೆ ಸದಾಕಾಲ ತಾವು ಬದ್ಧರಿರುವುದಾಗಿ ತಿಳಿಸಿದ ಸಚಿವರು, ಕ್ಷೇತ್ರದಲ್ಲಿ ವಿವಿಧೆಡೆಗಳಲ್ಲಿನ ರಸ್ತೆಗಳ ದುರಸ್ತಿಗೆ ಒತ್ತು ಕೊಡುವುದಾಗಿ ಹೇಳಿದರು.
ಗುರುವಿನ ಸ್ಥಾನ ದೊಡ್ಡದು: ದೇಶದ ಪ್ರಧಾನಮಂತ್ರಿಗಳಿಗೆ, ಮುಖ್ಯಮಂತ್ರಿಗಳು, ಸಚಿವರು, ಶಾಸಕರಿಗೆ ಸಹ ಗುರುಗಳು ಇರುತ್ತಾರೆ. ಯಾರೇ ಇರಲಿ
ಅಕ್ಷರ ಕಲಿಸಿದವರನ್ನು ನಾವು ನೆನಪಿಸಿಕೊಳ್ಳುತ್ತೇವೆ. ಯಾರೇ ಎಷ್ಟೇ ದೊಡ್ಡ ಸ್ಥಾನಕ್ಕೆ ಹೋದರು ಸಹ ನನಗೆ ಕಲಿಸಿದ ಗುರು ಇವರೇ ಎಂದು ಎಲ್ಲರೂ ನೆನಪಿಸುತ್ತಾರೆ. ಹೀಗಾಗಿ ಗುರುವಿಗೆ ದೊಡ್ಡ ಸ್ಥಾನವಿದೆ. ವೈದ್ಯರು ಜೀವ ಉಳಿಸಿದರೆ, ಗುರು ಜೀವನವನ್ನು ನಿರೂಪಿಸುತ್ತಾರೆ. ಯಾರು ಎಷ್ಟೇ ದೊಡ್ಡ ಹುದ್ದೆಯಲ್ಲಿದ್ದರು ಸಹ ಶಿಕ್ಷಕರ ಬಗ್ಗೆ ವಿಶೇಷ ಒಲವು ಇರುತ್ತದೆ ಎಂದು ತಿಳಿಸಿದರು.
ಗ್ರಾಮಕ್ಕೆ ಸೌಕರ್ಯ: ಕನ್ನೇರುಮಡು ಗ್ರಾಮಸ್ಥರ ಬೇಡಿಕೆಯಂತೆ ಹೊಸ ಊರಿಗೆ ಅಗತ್ಯವಿರುವ ಸೌಕರ್ಯ ಕಲ್ಪಿಸಲು ಒತ್ತು ಕೊಡಲಾಗುವುದು. ಕ್ಷೇತ್ರದಲ್ಲಿನ ಇನ್ನೀತರ ಹಳ್ಳಿಗಳಿಗೆ ಸಹ ಹಂತಹಂತವಾಗಿ ಅವಶ್ಯವಿರುವ ಮೂಲಭೂತ ಸೌಕರ್ಯ ಕಲ್ಪಿಸಲಾಗುವುದು ಎಂದರು.
ಸೋಮನಾಳ ಶಿಕ್ಷಕನ ಸೇವೆ ಸ್ಮರಣೆ: ಭಾಷಣದ ವೇಳೆಯಲ್ಲಿ ಸಚಿವರು, ಸೋಮನಾಳ ಶಿಕ್ಷಕರಾದ ರಾಘವೇಂದ್ರ ಕಂಠಿ ಅವರ ಸೇವೆಯನ್ನು ಸ್ಮರಿಸಿದರು. ರಾಘವೇಂದ್ರ ಅವರು ಆಸ್ಥೆವಹಿಸಿ ಶಾಲೆಯಲ್ಲಿ ಸುಸಜ್ಜಿತ ಗ್ರಂಥಾಲಯ, ಗಣಕಯಂತ್ರ ಸೇರಿದಂತೆ ಇನ್ನಿತರ ಸೌಕರ್ಯವನ್ನು ಮಕ್ಕಳಿಗೆ ಕಲ್ಪಿಸಿ ಶಾಲೆಯನ್ನು ಮಾದರಿಯಾಗಿಸಿದ್ದಾರೆ ಎಂದು ತಿಳಿಸಿದರು.
ಶಿಕ್ಷಕ ವೆಂಕಟೇಶ ಸಿ.ಕೆ.ಅವರ ಕಾರ್ಯಕ್ಕೆ ಮೆಚ್ಚುಗೆ: ಕನ್ನೇರುಮಡು ಶಾಲಾ ಶಿಕ್ಷಕ ವೆಂಕಟೇಶ ಸಿ.ಕೆ. ಅವರು ಶಾಲಾ ಸುಧಾರಣೆಗಾಗಿ ತಮ್ಮ ವೇತನದಲ್ಲಿನ ಹಣವನ್ನು ಸಹ ಖರ್ಚು ಮಾಡುತ್ತಿದ್ದಾರೆ ಎಂದು ಕಾರ್ಯಕ್ರಮದಲ್ಲಿ ಕನ್ನೇರುಮಡು ಗ್ರಾಮಸ್ಥರು ತಿಳಿಸಿದಾಗ ಸಚಿವರು, ಶಿಕ್ಷಕ ವೆಂಕಟೇಶ ಅವರಿಗೆ ಅಭಿನಂದಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವೆಂಕಟೇಶ ರಾಮಚಂದ್ರಪ್ಪ ಪ್ರಾಸ್ತಾವಿಕ ಮಾತನಾಡಿ, ಕನಕಗಿರಿ ವಿಧಾನಸಭಾ ಕ್ಷೇತ್ರಕ್ಕೆ
ವಿವೇಕ ಯೋಜನೆಯಡಿ 70 ಶಾಲಾ ಕೊಠಡಿಗಳು ಮಂಜೂರಾಗಿವೆ. ಸಚಿವರ ಪ್ರಯತ್ನದಿಂದಾಗಿ, ಈಗಾಗಲೇ 37 ಕೊಠಡಿಗಳ ಕಟ್ಟಡ ನಿರ್ಮಾಣ ಕಾರ್ಯವು ಫಿನಿಸಿಂಗ್ ಹಂತದಲ್ಲಿದ್ದು ಇವುಗಳನ್ನು ಸಹ ಸದ್ಯದಲ್ಲೇ ಉದ್ಘಾಟನೆಗೆ ಸಿದ್ಧಪಡಿಸುವುದಾಗಿ ಹೇಳಿದರು.
ಸಚಿವರಿಂದ ಕಾಲ್ನಡಿಗೆ: ಕಾರ್ಯಕ್ರಮಕ್ಕೆ ಆಗಮಿಸಿದ ಸಚಿವರಿಗೆ ಗ್ರಾಮಸ್ಥರು ದೀಪ ಬೆಳಗಿ ಸ್ವಾಗತಿಸಿದರು. ಹೊಸ ಊರಿನಿಂದ ಶಾಲಾ ಆವರಣದವರೆಗೆ ಕುಂಭ ಮೆರವಣಿಗೆ ಮೂಲಕ ಸಚಿವರನ್ನು ಕಾಲ್ನಡಿಗೆಯಲ್ಲಿ ಕರೆ ತಂದದ್ದು ವಿಶೇಷವಾಗಿತ್ತು.
ಸಮಾರಂಭದಲ್ಲಿ ಕನಕಗಿರಿ
ತಾಲೂಕು ತಹಸೀಲ್ದಾರ ವಿಶ್ವನಾಥ ಮುರುಡಿ, ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಚಂದ್ರಶೇಖರ,
ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಜೆ.ವಿಶ್ವನಾಥ, ಶಿಕ್ಷಣ ಇಲಾಖೆಯ ಅಧಿಕಾರಿ ಚಂದ್ರಶೇಖರ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಸುರೇಶ ಗೌಡ್ರು, ಶಿಕ್ಷಣ ಸಂಯೋಜಕರು ಕನಕಗಿರಿ ವಲಯದ ಆಂಜನೇಯ, ಕ್ಲಸ್ಟರ್ ಮಟ್ಟದ ಅಧಿಕಾರಿ
ವಿನಾಯಕ ಡಿ., ಕನಕಗಿರಿ ತಾಲೂಕು ಐಇಸಿ ಸಂಯೋಜಕರಾದ ಶಿವು,
ಮುಸಲಾಪುರ ಗ್ರಾಮ ಪಂಚಾಯತ್ ಅಧ್ಯಕ್ಷೆ ರೇಣುಕಮ್ಮ ಗಂಡ ಶರಣಗೌಡ, ಉಪಾಧ್ಯಕ್ಷೆ ಚಂದ್ರಮ್ಮ ಗಂಡ ಗೋಕುರೆಪ್ಪ ತಳವಾರ ಬಮಸಾಗರ, ಗ್ರಾಪಂ
ಸದಸ್ಯರಾದ ಶಿವಮ್ಮ ಗಂಡ ರುದ್ರಪ್ಪ ಗುಡದಾರ,
ಎಸ್‌ಡಿಎಂಸಿ ಅಧ್ಯಕ್ಷರಾದ
ರಾಮಾವಲಿ ಮುಜಾವರ,
ಉಪಾಧ್ಯಕ್ಷರಾದ ಫಕೀರಪ್ಪ ಅಗಸಿಮುಂದಿನ, ಮುಸಲಾಪುರ ಪಿಡಿಓ ನಾಗೇಶ, ಶಾಲೆಯ ಮುಖ್ಯ ಗುರುಗಳಾದ ಧರ್ಮಪ್ಪ,
ಗ್ರಾಮದ ಹಿರಿಯರಾದ ಗುರುರಾಜ ಕುಲಕರ್ಣಿ, ಬಸವಂತಗೌಡ್ರ, ಲಕ್ಷ್ಮಮ್ಮ ನೀರಲೂಟಿ, ರವಿ ಪಾಟೀಲ, ನಾಗಪ್ಪ ಶಿರವಾರ, ಪ್ರಮೀಳಾ ರೆಡ್ಡಿ ಹಾಗೂ ಇತರರು ಉಪಸ್ಥಿತರಿದ್ದರು.
ಗ್ರಾಮ ಪಂಚಾಯತ್ ಸದಸ್ಯರಾದ ಹೊಳಿಯಪ್ಪ ಸ್ವಾಗತಿಸಿದರು. ಶಿಕ್ಷಕ
ವೆಂಕಟೇಶ ಸಿ.ಕೆ.
ನಿರೂಪಿಸಿದರು. ಶಾಲೆಯ ಶಿಕ್ಷಕಿ
ನಾಗರತ್ನ ಹಾಗೂ ಸಂಗಡಿಗರು ಪ್ರಾರ್ಥಿಸಿದರು.