ಅನುದಿನ‌ ಕವನ-೯೮೮, ಕವಿಯಿತ್ರಿ:ರಂ ಹೊ, ತುಮಕೂರು

ಸುತ್ತ ಮುತ್ತೆಲ್ಲ
ಬಂಧಗಳು ಹರಡಿಯೂ
ಸದ್ದು ಗದ್ದಲವಿದ್ದೂ
ಈ ಬದುಕು
ನಿರ್ಜನ ರಸ್ತೆಯಂತೆ ಬಿದ್ದುಕೊಳ್ಳುತ್ತದೆ..
ಕರುಳ ಬಂಧಗಳು
ಬೇಲಿ ಬಿಗಿದುಕೊಂಡು
ಕಟ್ಟಿಕೊಂಡ ಬಂಧಗಳು
ಬಣ್ಣ ಕಳೆದುಕೊಂಡು
ರಸ್ತೆಯುದ್ದಕ್ಕೂ ಅನಾಥತನ
ನರಳಿ ಹೆಣಗುತ್ತದೆ!
ನೀರಿಲ್ಲದ,ನೆರಳಿಲ್ಲದ
ಒಣಗಿದ ದಾರಿಯಲ್ಲಿ
ಸತ್ತ ಕನಸುಗಳಿಗೆ
ಹತಾಶೆಯ ಚರಮಗೀತೆ!

ಸೋಲಿನ ತುದಿಗೇ ನಿಂತು
ಬದುಕನ್ನು ಸಂಭಾಳಿಸುವಾಗ
ಧುತ್ತನೆ ಒದಗಿಬಿಡುವ
ಮರೆಯಲ್ಲಿದ್ದ ಬಂಧಗಳು
ಕಂಬನಿಗೂ ಕರುಳು ಬೆಸೆದು
ಎದೆ ಬೆಳಗುವ ಭಾವ ನಕ್ಷತ್ರಗಳು!
ಕಣ್ಣಿಗೂ ಮಿಂಚು ಮುಡಿಸಿ
ರೆಕ್ಕೆಗಿಷ್ಟು ಕಸುವ ಕಟ್ಟಿ
ಹೆಜ್ಜೆಗಳ ಗೆಜ್ಜೆಗಳಾಗಿ
ನಗೆಯ ತೂಗುವಾಟ!
ಬಿದ್ದ ಕನಸುಗಳ ಹೆಕ್ಕಿ
ಸೋತ ಹಾಡುಗಳ ಸಂತೈಸಿ
ಬಿರಿದ ಹಾದಿಗೆ ಹೂ ಚೆಲ್ಲಿ
ತರಹೇವಾರಿ ಬಣ್ಣಗಳ ಹಿಡಿದು
ಸುತ್ತನಿಲ್ಲುವ ಮಾಯಕದಾಟ!

ನಿರ್ಜನ ರಸ್ತೆಯ ನಿಶ್ವಲತೆ
ಜಾತ್ರೆಯ ವ್ಯವಹಾರ
ಕೊಡು ಕೊಳುವಿಕೆಗಳ ಲೆಕ್ಕಾಚಾರಗಳ ನಡುವೆ
ರಸ್ತೆ  ಜಾತ್ರೆಬೀದಿಗಳ ಚಿತ್ರವೂ
ವ್ಯಸ್ತ ವ್ಯಸ್ತ!

ನಿರ್ಜನ ರಸ್ತೆಯ ನೀರವತೆ
ಜಾತ್ರೆಯ ಸಹಜ
ಸಿನಿಕತೆ
ನಡುವೆ ಬದುಕೊಂದು
ಬದುಕಲೇಬೇಕಾದ  ಕತೆ!


-ರಂಹೊ, ತುಮಕೂರು
—–