ಕವಿ ಪರಿಚಯ: ಮಹಾದೇವ ಎಸ್.ಪಾಟೀಲ
ಮೂಲತಃ ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಭೂಪೂರು (ರಾಂಪೂರ) ಗ್ರಾಮದಲ್ಲಿ ೧೫.೦೪.೧೯೮೨ ರಲ್ಲಿ ಜನಿಸಿದರು. ಓದಿದ್ದು ಬಿ.ಎ ಪದವಿ. ಸ್ವಗ್ರಾಮದಲ್ಲಿ ಪ್ರತಿ ವರ್ಷ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತ; ‘ರಾಜಕೀಯದಲ್ಲಿ ರಾವಣರು’ ಎಂಬ ಸಾಮಾಜಿಕ ನಾಟಕವನ್ನು ರಚಿಸಿ ಸ್ವಗ್ರಾಮದಲ್ಲಿಯೇ ಪ್ರಯೋಗ ಮಾಡುವ ಮೂಲಕ ಸಾಹಿತ್ಯ ಲೋಕವನ್ನು ಪ್ರವೇಶಿಸಿದರು.
ಕಾಲೇಜು ಹಂತದಿಂದಲೇ ಕಥೆ, ಕವಿತೆ, ನಾಟಕ, ಚುಟುಕು, ಗಜಲ್, ಹಾಯ್ಕು ಹೀಗೆ ಸಾಹಿತ್ಯದಲ್ಲಿ ಕೃಷಿ ಮಾಡಿದ್ದಾರೆ. ಇವರ ಮೊದಲನೇ ಕೃತಿ ‘ಗಾಂಧಿ ಬಜಾರ’ (ಕವನ ಸಂಕಲನ), ಎರಡನೇ ಕೃತಿ ‘ಭೂಪೂರಾಧೀಶ್ವರ’ (ಶರಣರ ಜೀವನ ಚರಿತ್ರೆ), ಮೂರನೇ ಕೃತಿ ‘ ಮುತ್ತಿನ ತೆನೆ’ (ಚುಟುಕು ಸಂಕಲನ), ನಾಲ್ಕನೇ ಕೃತಿ ‘ ಬಿಸಿಲು ಬಿದ್ದ ರಾತ್ರಿ’ ( ಗಜಲ್ ಸಂಕಲನ), ಐದನೇ ಕೃತಿ; ‘ ಸುಡುವ ತಂಗಾಳಿ’ ( ಗಜಲ್ ಸಂಕಲನ), ಖಾಕಿಯೊಳಗಿನ ಕಾವ್ಯ ಜಗತ್ತು (ಕವನಸಂಕಲನ ಸಂಪಸಾದನೆ) ಪ್ರಕಟಿಸಿದ್ದಾರೆ.
ಜಿಲ್ಲಾ, ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಹಾಗೂ ನಾಡಿನ ಪ್ರಮುಖ ಸಮಾರಂಭಗಳಲ್ಲಿ ಭಾಗವಹಿಸಿ ಕವನ ವಾಚನ ಮಾಡಿದ್ದಾರೆ. ೨೦೦೮ ರಲ್ಲಿ ಮೈಸೂರು ದಸರಾ ಚುಟುಕು ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದಾರೆ. ಚಂದನವಾಹಿನಿಯ ಲಿಟ್ರರಿ ಗುರು ಕಾರ್ಯಕ್ರಮದಲ್ಲಿ ಸ್ವರಚಿತ ಕವನ ಓದು ಪ್ರಸಾರ, ಬೆಂಗಳೂರಿನಲ್ಲಿ ನಡೆದ ಪೊಲೀಸ್ ಸಂಭ್ರಮ -೨೦೨೨ ರಲ್ಲಿ ಭಾಗವಹಿಸಿ ಕವನ ವಾಚನ. ಇವರಿಗೆ ಹಲವು ಸಂಘ, ಸಂಸ್ಥೆಗಳು ಸನ್ಮಾನಿಸಿ ಗೌರವಿಸಿವೆ. ೨೦೨೨ ರಲ್ಲಿ ಬೀದರನ ಮಂದಾರ ಕಲಾವಿದರ ವೇದಿಕೆಯಿಂದ ರಾಜ್ಯಮಟ್ಟದ ‘ಗಜಲ್ ಗಂಗೋತ್ರಿ ಪ್ರಶಸ್ತಿ’, ಸುಡುವ ತಂಗಾಳಿ ಗಜಲ್ ಕೃತಿಗೆ ಬೆಳಗಾವಿ ಜಿಲ್ಲೆಯ ಸವದತ್ತಿಯ ಸಹೃದಯ ಪ್ರತಿಷ್ಠಾನದ ೨೦೨೨ ನೇ ಸಾಲಿನ ‘ಗಜಲ್ ಕಾವ್ಯ ಪ್ರಶಸ್ತಿ’ ಹಾಗೂ ಸಿರವಾರದ ಚುಕ್ಕಿ ಪ್ರತಿಷ್ಠಾನದ ಪ್ರಶಸ್ತಿ ಪಡೆದಿದ್ದಾರೆ.
ಪ್ರಸ್ತುತ ರಾಯಚೂರು ಜಿಲ್ಲೆಯ ಪೊಲೀಸ್ ಇಲಾಖೆಯ ಡಿ.ಎ.ಆರ್ ಘಟಕದಲ್ಲಿ ಕಾನ್ಸಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
——
ಅಪ್ಪನೆಂಬ ಆಲದಮರ
ನನ್ನಪ್ಪನ ಹರಿದ ಅಂಗಿ
ಕಾಸಿಲ್ಲದ ಖಾಲಿಕಿಸೆಯಲ್ಲಿ
ಸಾಲು ಸಾಲು ಬವಣೆಗಳು
ಉಂಗುಷ್ಟ ಕಿತ್ತಿದ ಚಪ್ಪಲಿ
ಸುಡು ಸುಡುವ ಪಾದಗಳು
ಉರಿಯುವ ಬಯಲಲಿ
ಎದೆಯ ಕಡಲಾಳದಿಂದ
ಉಕ್ಕಿದ ಬೆವರು ಹನಿಗಳು
ಹಸಿದ ಒಡಲು ತುಂಬಿಸಲು
ಭರವಸೆಯ ಹಾದಿಯಲಿ
ಹಗಲಿರುಳು ದುಡಿಯುತ
ಹೊತ್ತು ಹೊಯ್ಯಲಾರದ
ಸಂತೆಯ ಮಾಡಿ ಸೋತು ಹೋದ
ವಿಧಿಯಿಲ್ಲದೆ ತೆವಳುತ್ತ, ಬಳಕುತ್ತ
ಎದುಸಿರು ನಿಂತರು ಬಿಡದೆ
ಯುದ್ಧದಲ್ಲಿ ಗೆದ್ದು ಸೋತ;
ಬಾಹುಬಲಿಯಷ್ಟೆ ಶಕ್ತಿಶಾಲಿಯಂತೆ
ಗಮ್ಯದ ದಾರಿಯ ತೋರಿ ಹೋದ
ಸವೆದು ಹೋದ ಅಂಗೈ ಗೆರೆಗಳು
ನದಿಯಾಗಿ ಹರಿದ ಒದ್ದೆಗಣ್ಣು
ಬಿರುಕು ಬಿಟ್ಟ ಪಾದಗಳಲಿ
ರಕ್ತ ಹನಿ ಹನಿಯಾಗಿ ಜಿನುಗಿ
ಬದುಕು ಇತಿಹಾಸದ ಪುಟ ಸೇರಿತು
ಹಾಸಿಗೆ ಇದ್ದಷ್ಟೆ ಕಾಲು ಚಾಚಿ
ಬಡತನವ ಹೊದ್ದು ಮಲಗಿ
ಮಕ್ಕಳ ಬದುಕಿಗೆ ಪುಡಿಗಾಸು ಕೂಡಿಸಿ
ಒಂದಷ್ಟು ಬುತ್ತಿ ಕಟ್ಟಿಟ್ಟು
ಹೇಳದೆ ಕೇಳದೆ ಪಯಣ ಮುಗಿಸಿದ
ಅಪ್ಪನೆಂಬ ಆಲದಮರ
-ಮಹಾದೇವ ಎಸ್.ಪಾಟೀಲ, ರಾಯಚೂರು.