ಸಿಂಧುವಾಳ ಗಾದಿಲಿಂಗನ ಕುಂಚದಲ್ಲಿ ಅರಳಿದ ಸಚಿವ ಬಿ.ನಾಗೇಂದ್ರ ಮತ್ತು ಸಹೋದರ ಬಿ. ಪ್ರಸಾದ್ : ಪ್ರಶಂಸೆ

ಬಳ್ಳಾರಿ, ಸೆ. 18: ತಾಲೂಕಿನ ಸಿಂಧುವಾಳ ಗ್ರಾಮದ ಯುವ ಪ್ರತಿಭೆ, ಬಿ.ಇ ಪದವೀಧರ ಗಾದಿಲಿಂಗ ಅವರು ಅಭಿಮಾನದಿಂದ ತಮ್ಮ ಕುಂಚದಲ್ಲಿ ಚಿತ್ರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಬಿ. ನಾಗೇಂದ್ರ ಮತ್ತು ಇವರ ಸಹೋದರ ಬಿ. ಪ್ರಸಾದ್ ಅವರ ಚಿತ್ರ ಭಾನುವಾರ ನಗರದಲ್ಲಿ ಗಮನ ಸೆಳೆಯಿತು.
ಕಲ್ಯಾಣ ಕರ್ನಾಟಕ ಉತ್ಸವ ಉದ್ಘಾಟನಾ ಕಾರ್ಯಕ್ರಮದ ಬಳಿಕ ಯುವ ಕಲಾವಿದ ಗಾದಿಲಿಂಗ ಚಿತ್ರಿಸಿದ ತಮ್ಮ ಮತ್ತು ಸಹೋದರನ ಚಿತ್ರ ಕಂಡು ಸಚಿವ ನಾಗೇಂದ್ರ ಅವರು ಖುಷಿ ಪಟ್ಟರು ಮಾತ್ರವಲ್ಲ ಮುಕ್ತಕಂಠದಿಂದ ಪ್ರಶಂಸಿಸಿದರು.
ಗಾದಿಲಿಂಗ ಅಭಿಮಾನಪೂರ್ವಕವಾಗಿ ಚಿತ್ರಿಸಿದ ತಮ್ಮ ಚಿತ್ರವನ್ನು ಸಚಿವರು ಪ್ರೀತಿಯಿಂದ ಸ್ವೀಕರಿಸಿದರು.
ಪರಿಚಯ: ಯಾವುದೇ ಚಿತ್ರಕಲಾ ಶಾಲೆಗೆ ಹೋಗದೆ ತನ್ನ ಆಸಕ್ತಿಯಿಂದ ಚಿತ್ರ ಬಿಡಿಸುವುದನ್ನು ಕಲಿತ ಏಕಲವ್ಯ ಪ್ರತಿಭೆ ಗಾದಿಲಿಂಗ. ರೈತಾಪಿ ಕುಟುಂಬದ ಅಪ್ಪ ಅಮ್ಮ ಓದಿಸಿದ್ದು ಬಿಇ (ಮೆಕಾನಿಕಲ್) ಪದವಿಯನ್ನು! ನಾಲ್ಕು ವರ್ಷಗಳ ಹಿಂದೆ ಇಂಜಿನಿಯರಿಂಗ್ ಪದವಿ ಪೂರೈಸಿದ ಬಳಿಕ ಹೈದ್ರಾಬಾದ್ ನಲ್ಲಿ ಯು ಪಿ ಎಸ್ ಸಿ ಪರೀಕ್ಷೆಗೆ ತರಬೇತಿ ಪಡೆಯುತ್ತಿದ್ದ ಸಂದರ್ಭದಲ್ಲಿ
ದೇಶಕ್ಕೆ ವಕ್ಕರಿಸಿದ ಕೋವಿಡ್ ನಿಂದಾಗಿ ಲಾಕ್ ಡೌನ್ ಘೋಷಣೆಯಾದ್ದರಿಂದ ಗಾದಿಲಿಂಗಪ್ಪ ಗ್ರಾಮಕ್ಕೆ ವಾಪಸಾದರು. ಬಿಇ ಓದಿದ ಹುಡುಗ ಹಳ್ಳಿಯಲ್ಲಿ ಕುಳಿತು ಏನು ಮಾಡಲು ಸಾಧ್ಯ!? ಬಳ್ಳಾರಿಗೆ ಬಂದರು. ಗೆಳೆಯನ ರೂಮ್ ನಲ್ಲಿ ಆಶ್ರಯ ಪಡೆದಿದ್ದಾರೆ.
ಪರಿಸರದ ಚಿತ್ರಗಳು, ಸಮಾಜಮುಖಿ
ಚಿತ್ರ ನಟ ಸೋನು ಸೂದ್, ಶ್ರೀ ಸಿದ್ಧಗಂಗಾ ಶ್ರೀಗಳು ಸೇರಿದಂತೆ ಹಲವು ಚಿತ್ರನಟರು, ರಾಜಕಾರಣಿಗಳು, ಸೆಲೆಬ್ರಿಟಿಗಳ ಚಿತ್ರಗಳು ಚಿತ್ರ ಪ್ರೇಮಿಗಳನ್ನು ಆಕರ್ಷಿಸಿವೆ. ನಗರ ಯುವ ಶಾಸಕ ನಾರಾ ಭರತ್ ರೆಡ್ಡಿ, ಯುವ ಮುಖಂಡ ಬಿ. ಮುರಳಿಕೃಷ್ಣ, ಹಿರಿಯ ಪತ್ರಕರ್ತ ಸಿ.‌ಮಂಜುನಾಥ್ ಸೇರಿ ಹಲವರ ಚಿತ್ರಗಳು ಗಮನ ಸೆಳೆದಿವೆ. ಗಣ್ಯರು, ಚಿತ್ರಪ್ರೇಮಿಗಳು ಬೆನ್ನುತಟ್ಟಿದ್ದಾರೆ.
ಚಿತ್ರಕಲೆ ಜತೆ ನಟನೆ, ನಿರ್ದೇಶನದ ಬಗ್ಗೆ ಒಲವಿರುವದರಿಂದ ಗೆಳೆಯರ ಜತೆ ಸೇರಿ ಯೂಟ್ಯೂಬ್ ಚಾಲೆನ್ ಗಾಗಿ ಒಂದೆರಡು ಸಾಮಾಜಿಕ ಸಂದೇಶ ಸಾರುವ ಕಿರು ಚಿತ್ರಗಳನ್ನು ಗಾದಿಲಿಂಗ ಚಿತ್ರೀಕರಿಸಿರುವುದು ವಿಶೇಷ.
ಬಿ.ಇ ಪದವೀಧರರರಾದರೂ ಸೂಕ್ತ ಉದ್ಯೋಗ ದೊರೆಯದೇ ಸಂಕಷ್ಟದಲ್ಲಿರುವ ಗಾದಿಲಿಂಗ ಪ್ರಸ್ತುತ ತನ್ನ ಹವ್ಯಾಸ ಕಲೆಯಾದ ಚಿತ್ರಕಲೆಯನ್ನೇ ನಂಬಿ ಬದುಕು‌ಕಟ್ಟಿಕೊಳ್ಳಲು ನಿರ್ಧರಿಸಿದ್ದಾನೆ.
ಈ ಪ್ರತಿಭಾವಂತ ಯುವಕನಿಗೆ ಸರಕಾರ, ಸಮಾಜ, ಸಂಘ ಸಂಸ್ಥೆಗಳು ಉತ್ತೇಜಿಸುವ ಅಗತ್ಯವಿದೆ. ನೆರವು ನೀಡುವ ಮನಸ್ಸುಳ್ಳವರು ತಮ್ಮ, ಹಾಗೂ ತಮ್ಮ ಪ್ರೀತಿ ಪಾತ್ರರ ಭಾವಚಿತ್ರಗಳನ್ನು ಪೆನ್ಸಿಲ್ ಸ್ಕೆಚ್ ಹಾಕಿಸಿ ಕೊಂಡು ಈ ಯುವ ಪ್ರತಿಭೆಯನ್ನು ಪ್ರೊತ್ಸಾಹಿಸಬಹುದು.
[ಗಾದಿಲಿಂಗ ಅವರ ಮೊಬೈಲ್ ನಂ. 93465 11615]

*****