ಬರೆಯಬಹುದಿತ್ತು…..
ಬರೆಯಬಹುದಿತ್ತು ನಗುವೊಂದನ್ನೇ;
ಹಾಡಬಹುದಿತ್ತು ಸಂತಸವೊಂದನ್ನೇ;
ಸುತ್ತ ಇರಿವ ಮುಳ್ಳುಗಳು ಕಾದು ಕುಳಿತಿವೆ!
ಅತ್ತ ವಿಷದ ಹಾವುಗಳು ಬುಸುಗುಟ್ಟುತ್ತಿವೆ!
ಇತ್ತ ಬೆಂಕಿಯ ಕೆನ್ನಾಲಿಗೆ ಆವರಿಸುತ್ತಿದೆ!
ಅಗೋ ಉಲ್ಕೆಗಳ ಅಲೆತ;
ಇಗೋ ದಾವಾನಲದ ತೊನೆತ;
ಕೂರಲಾಗದೆ ನಿಲ್ಲಲಾಗದೆ ಓಡಲಾಗದೆ
ಕೊನೆಗೆ ಇಲ್ಲಿ ಸುಮ್ಮನಿರಲಾಗದೆ ಬರೆಯಲಾದೀತೆ ನಗುವೊಂದನ್ನೆ?
ಹಾಡಲಾದೀತೆ ಸಂತಸವೊಂದನ್ನೇ?
ಎದುರಿನವರು ಗುರುತಾದರು ಅನುಮಾನದ ಚಹರೆ;
ಇದ್ದವರು ನೆರೆಹೊರೆಯಾದರು ಬಿಗುತನದ ಮೋರೆ;
ರಕ್ತ ಹಂಚಿಕೊಂಡವರು ಆಗಂತುಕ ಗುಂಪಿನಲಿ ಕೇಕೆ;
ಒಡನಾಡಿಗಳು ಒಡಲಿರಿದವರ ಜೊತೆಜೊತೆಗೆ ಹೆಜ್ಜೆ;
ಮೊಗ್ಗುಗಳು ಅವಿತಿಟ್ಟುಕೊಂಡಿವೆ ಭವಿಷ್ಯದ ಕರಾಳತೆಗೆ!
ವನಗಳು ಹೂಳಿಡುತಿವೆ ಕಾವಲ ಬೇಲಿಯ ರಣಧಾಳಿಗೆ!
ಬರೆಯಲೇಗೆ ದುಃಖದ ಲೇಖನಿಯಲಿ ನಗುವೊಂದನ್ನೆ?
ಹಾಡಲೇಗೆ ಜಗದ ಉರಿ ಜಗಲಿಯಲಿ ಸಂತಸವೊಂದನ್ನೆ?
ಯಾರು ದೂರದವರಿಲ್ಲಿಲ್ಲ ಗುರುತಿಡುವ ವ್ಯವಧಾನವಿಲ್ಲ;
ಇದ್ದಾಗಿಷ್ಟು ಮಾತಿಗೆ ಮಾತು ಪೋಣಿಸುವ ಪ್ರೀತಿಯಿಲ್ಲ;
ಬಂದಾಗಿಷ್ಟು ಆತುಕೂತು ಉಸಿರಾಡುವ ಕರುಣೆಯಿಲ್ಲ;
ಸೆಡವು ನೋವ ಬದುಕು ಗುರಿ ದಾಟಿಸುವ ಚತುರತೆಯಿಲ್ಲ;
ವಯಸ್ಸು ಆಯಸ್ಸು ಉಳಿಯದ ತಳಮಳದ ಅರಿವಿಲ್ಲ;
ದೇವ ಧರ್ಮ ಊಳಿಡುವ ದಾರಿಗೆ ಸುಂಕ ಕೇಳುವರೆಲ್ಲ!
ನಾಳೆ ಮುಖ ನೋಡದ ಬದುಕಿದು ಕವಲು!
ಹಲ್ಲು ಮುರಿದ ದವಡೆಗೆ ಕವಳದ ತೆವಲು!
ಬರೆಯಲೇಗೆ ಒಣಭೂಮಿಯ ಧಗೆಯಲ್ಲಿ ನಗುವೊಂದನ್ನೆ?
ಹಾಡಲೇಗೆ ರಣಬೇಗೆಯ ಹಸಿವಲ್ಲಿ ಸಂತಸವೊಂದನ್ನೆ?
-ಟಿ ಪಿ ಉಮೇಶ್, ಚಿತ್ರದುರ್ಗ
—–