ಅನುದಿನ ಕವನ-೯೯೪, ಕವಿಯಿತ್ರಿ: ಕಿರಣ್ ಪ್ರಸಾದ್ ರಾಜನಹಳ್ಳಿ, ಬೆಂಗಳೂರು, ಕವನದ ಶೀರ್ಷಿಕೆ: ಹನಿಗಳ ಲೀಲೆ

ಹನಿಗಳ ಲೀಲೆ

ಎಳೆ ಬಿಸಿಲಿನ ತಿಳಿಬೆಳಕಿಗೆ
ಮಳೆಹನಿಗಳು ತೆರೆಕಟ್ಟಿವೆ
ಹನಿಗಳ ತೂರಿ ಹೊರಟಿಹ ಕಿರಣ
ಬಾನಿಗೆ ಕಟ್ಟಿದ ಬಣ್ಣದ ತೋರಣ||ಎ||

ಮಳೆಯಲಿ ಮಿಂದ ಧರೆಯೇ ಅಂದ
ಮಳೆಯಲಿ ತೋಯ್ದ ಹಸಿರೇ ಚಂದ
ಹೂಗಳ ರಾಶಿಗೆ ಹಬ್ಬಿದ ಮಕರಂದ
ತೇಲಿಬರುವ ಅಲೆಯೇ ಮಹಾನಂದ||ಎ||

ನಳಸುವ ಬೆಳೆಗೆ ರೈತನ ಹರುಷ
ಕುಣಿಯುವ ನವಿಲಿಗೆ ಕಾರಣ ವರ್ಷ
ಮುತ್ತಿನ ರಾಶಿಯೆ ಚೆಲ್ಲಿದೆ ಇಬ್ಬನಿ
ಧರೆಯಾಗಿಹಳು ಸೌಂದರ್ಯದ ಖನಿ||ಎ||

ಬಿರಿದಿಹ ಇಳೆಗೆ ಅಮೃತ ಸಿಂಚನ
ಬಾಯಾರಿದ ಭುವಿ ಆಗಿಹೆ ಪಾವನ
ಸೃಷ್ಟಿಯ ಅಂದಕೆ ಮಳೆಯೇ ಕಾರಣ
ಸಕಲ ಜೀವದ ಗೆಳೆಯನೇ ವರುಣ||ಎ||


-ಕಿರಣ್ ಪ್ರಸಾದ್ ರಾಜನಹಳ್ಳಿ, ಬೆಂಗಳೂರು
——