ಅನುದಿನ ಕವನ-೯೯೬, ಕವಿ: ಅಜೋ, (ಡಾ.ಅರುಣ‌ಜೋಳದ ಕೂಡ್ಲಿಗಿ) ಕಲಬುರಗಿ, ಕವನದ ಶೀರ್ಷಿಕೆ: ಜಾಡಮಾಲಿಯೊಬ್ಬಳ ದಿನಚರಿ

ಇಂದು ಪೌರಕಾರ್ಮಿಕರ ದಿನಾಚರಣೆ. ದೇಶದ ಪಟ್ಟಣ, ನಗರ, ಮಹಾನಗರಗಳನ್ನು ಸ್ವಚ್ಛವಾಗಿಟ್ಟು ಸಾರ್ವಜನಿಕರ ಆರೋಗ್ಯ ಕಾಪಾಡುವಲ್ಲಿ ಪೌರ ಕಾರ್ಮಿಕರ ಶ್ರಮ ಅನನ್ಯ. ಆದರೆ ಇವರ ಬದುಕು ದಾರುಣತೆಯಿಂದ ಕೂಡಿರುತ್ತದೆ. ಈ ದಿನ ಪೌರ ಕಾರ್ಮಿಕರ ಹಕ್ಕೊತ್ತಾಯದ ದಿನವಾಗಲಿ ಎಂದು ಆಶಿಸುವ ಕವಿ ಡಾ. ಅರುಣ ಜೋಳದ ಕೂಡ್ಲಿಗಿ (ಅಜೋ) ಅವರ ಕವಿತೆ ‘ಜಾಡಿಮಾಲಿಯೊಬ್ಬಳ ದಿನಚರಿ’ ಪ್ರಕಟಿಸುವ ಮೂಲಕ ಕರ್ನಾಟಕ ಕಹಳೆ ಡಾಟ್ ಕಾಮ್ ಪೌರ ಕಾರ್ಮಿಕರಿಗೆ ಶುಭ ಕೋರುತ್ತದೆ.
(ಸಂಪಾದಕರು)🍀👇

ಜಾಡಮಾಲಿಯೊಬ್ಬಳ ದಿನಚರಿ

ನಸುಕಿನಲಿ ಸೂರ್ಯನ ಎಳೆ ಕಿರಣಗಳು
ಪೊರಕೆ ಹಿಡಿದು ಅವಳ ಮನೆ ಬಾಗಿಲು ತಟ್ಟುತ್ತವೆ
ತಾವಿರುವ ಬೀದಿ ಗುಡಿಸೆಂದು ಹಠ ಮಾಡುತ್ತವೆ
ಈ ಗದ್ದಲಗಳ ನಡುವೆ
ನಿನ್ನೆಯ ಕಳಚಿ ಈ ದಿನವ ತೊಟ್ಟು ಮೇಲೇಳುತ್ತಾಳೆ
ಜಗತ್ತು ಮಗ್ಗಲು ಬದಲಿಸುತ್ತದೆ !

ಪೊರಕೆ ಕನಸು ಕಾಣುತ್ತಿದೆ
ತೆಂಗಿನ ಮರವನ್ನೇ ಉಲ್ಟಾ ಹಿಡಿದು ಬೀದಿಗುಡಿಸಿದಂತೆ
ದಾರಿ ಹೋಕರು ಎಳನೀರು ಕುಡಿದು ತಂಪಾದಂತೆ
ಬಿಸಾಡಿದ ತೆಂಗು ಕಸಬಳಿಯಲು ಅಡ್ಡಾದಂತೆ
ಇವಳಿಗೆ ಏನೆಲ್ಲಾ ಅನ್ನಿಸಿ ಪೊರಕೆಯ ಕನಸ ಕಿತ್ತೊಗೆದು
ಅದಕೆ ಅಂಟಿಕೊಂಡ ಬಿಸಾಡಿದ ಪ್ಲಾಸ್ಟಿಕ್ ಕಪ್ಪುಗಳಲ್ಲಿನ
ತುಟಿಗಳ ಬಿಡಿಸಿ ಗುಡ್ಡೆ ಹಾಕುತ್ತಾಳೆ !
ರಾತ್ರಿಯಾಗುತ್ತಲೂ ಈ ತುಟಿಗಳೆಲ್ಲಾ
ಅವಳ ಚುಂಬಿಸಲು ಸ್ಪರ್ಧೆಗಿಳಿಯುತ್ತವೆ !

ಇನ್ನೂ ಮಲಗಿಕೊಂಡು ಗೊರಕೆ ಹೊಡೆಯುತ್ತಿರುವ
ಬೀದಿ ಮೇಲಿನ ನಿನ್ನೆಯ ನೆರಳುಗಳ
ಮೆಲ್ಲಗೆ ನಿದ್ದೆಕೆಡಿಸದಂತೆ ಎತ್ತಿ ಕಸದ ತೊಟ್ಟಿಗೆ ತುಂಬಿ
ಅವರ ನೆರಳಿನ ಉಡುಪು ಕೊಳೆಯಾಗದಂತೆ
ಇಸ್ತ್ರಿಯ ಗೀರುಗಳು ಮುಕ್ಕಾಗದಂತೆ ಎಚ್ಚರವಹಿಸಿ
ಭೇದ ಮರೆತು ಕಸದ ತೊಟ್ಟಿಯಲ್ಲಿ ಒಂದಾದ
ಮನುಷ್ಯರ ಛಾಯೆಗಳಿಗೆ ವಂದಿಸಿ
ಮುಟ್ಟಿಸಿಕೊಳ್ಳದವರ ನೆರಳುಗಳ ಮುಟ್ಟಿ ಪುಳಕಿತಳಾಗುತ್ತಾಳೆ !

ಈಗತಾನೇ ಚಲಿಸಿದ ವಾಹನವೊಂದರ ಟಯರ ಗುರುತು
ಹೊಸ ಕಾರಿನದೆಂದು ಗುರುತಿಸಿ
ಗುರುತು ಹಿಡಿದು ಎಳೆದಂತೆ ಕಾರು ಹಿಂದೆ ಬಂದು
ಅವಳ ಕೂರಿಸಿಕೊಂಡು ಮುಂಚಲಿಸುತ್ತದೆ !
ಟಯರಿನ ಚೆಂದದ ಹೆಜ್ಜೆಗೆ ಮನಸೋತು
ಅದು ಅಳಿಸುವ ಮುನ್ನ ಸೀರೆಯ ಅಂಚಿಗೆ
ಅಂಟಿಸಿಕೊಳ್ಳುತ್ತಾಳೆ !
ಉಟ್ಟ ಸೀರೆಯಲ್ಲೆಲ್ಲಾ ಕಾರು ಚಲಿಸಿದಂತಾಗಿ
ತಾನು ರಸ್ತೆಯಾಗಿ ಸುಖಿಸುತ್ತಾಳೆ !
ಹೆಜ್ಜೆ ಮೂಡದ ಹಳೇ ಟಯರುಗಳು ಇವಳ ನೋಡಿ
ಮುಸಿಮುಸಿ ನಕ್ಕು ಹೇಳುತ್ತವೆ ನೀನು ನಮ್ಮಂತೆಯೇ..

ಮನಕೆ ಭಾರವಾದ ಈಡೇರದ ಕನಸುಗಳ
ಮುಂಜಾನೆ ಕಸದ ಬೆನ್ನಿಗೆ ಕಟ್ಟಿ ಹಗುರಾಗಿ
ಲೋಕದ ನಿನ್ನೆಯ ಪೊರಕೆಯಿಂದ ಗುಡಿಸಿ
ಮುಂಜಾವನ್ನು ಬೀದಿಗೆ ಹಂಚುತ್ತಾಳೆ !
ಈಗವಳು ಕಸಗುಡಿಸುವಾಗ ಬಚ್ಚಿಟ್ಟುಕೊಂಡ
ವಿಮಾನದ ನೆರಳಲ್ಲಿ ಚಲಿಸಿ ಸೂರ್ಯನ ಸೇರಿ
ಆತನ ರಾತ್ರಿಗೆ ಸುಖದ ಗಂಧ ತೇಯುತ್ತಾಳೆ
ಹಗಲ ಭಿಕ್ಷೆಯ ಋಣದ ಭಾರ ಇಳಿಸಲು!


-ಅಜೋ(ಡಾ.ಅರುಣ್ ಜೋಳದ ಕೂಡ್ಲಿಗಿ,) ಕಲಬುರಗಿ
—–