ಮೂರು ತೂತಿನ ಪಾತ್ರೆ
ತೀರದುದೆನಗೆ ದಾಹ
ಬದುಕಿನುದಕ
ಕುಡಿಯುತಿರೆ ಮೋಹ
ಗುರು ಬಂದು ನಿಂತ
ಎದುರಿನಲ್ಲಿ
-ಏನು ಹೇಳಲಿ ಗುರುವೇ
ಉಳಿದುದಿಷ್ಟೇ ಬಾಯರಿಸಿಕೊ –
ಎಂದೆರೆಗಿ ಚರಣಕೆ ತಲ್ಲಣಿಸಿದ ಕ್ಷಣ
-ನನಗೆ ದಣಿವೆ, ಬಾಯಾರಿಕೆಯಿಲ್ಲ-
ಎಷ್ಟು ಕುಡಿಯುತ್ತೀಯ;
ಅಂಗಳು ಅರಲಿಲ್ಲ,
ದಾಹ ತೀರಲಿಲ್ಲ
ಹಗಲಿರುಳು ಕುಡಿಯುತ್ತಲೇ
ಇರುತ್ತಿಯ; ಎಷ್ಟು ದಾಹ ನಿನಗೆ
ಎಂದ.
ಎಚ್ಚರವಿದ್ದೂ
ಜೊತೆಗಿರುವ ವಿಷವನ್ನು
ವಿಷವೆಂದು ತೋರದೆ
ನೀರಬೆರಸಿ ಹನಿ
ಹನಿಯಾಗಿ ನಾಲಿಗೆ
ಮೇಲಿರಿಸಿ ಚಪ್ಪರಿಸಿ
ನನಗೆ ನಾ
ಬಿಟ್ಟು ಹೋದ ಬಟ್ಟಲು
ಕಂಡು ಲಹರಿಗೊಂಡು
ಕಾಡ ವಿಷ
ಕುಡಿದು ಸತ್ತರಲ್ಲ
ಹೊಣೆಯಾರು
ದುರಂತಕೆ;
ಸಾವು ವಿಷವಲ್ಲ
ನಮಗೆ ನಶೆ
ಅವರಿಗೆ ವಿಷವಲ್ಲವೇ !
ಪರಿಹಾರವಿದೆಯದಕೆ ನೋಡು
ಪರಿವಾರ ಇನ್ನೊಮ್ಮೆ
ಕೇಳು , ನಿನ್ನೊಳಗೆ
ಪ್ರಶ್ನೆ ಒಂದೇ
ನೂರಾರು ಉತ್ತರ
ನಿನ್ನ ಬಾಳಿನೆತ್ತರ
ಪ್ರಶ್ನೆ ಕೇಳು,
ಇನ್ನೊಮ್ಮೆ ಅದರ ನೆರಳೇ
ಉತ್ತರ
ಬಟ್ಟಲು ಖಾಲಿಯಿರಬೇಕು
ತುಂಬಿಸಿಕೊಳ್ಳುವುದಕ್ಕಲ್ಲ;
ತಿಳಿಯಿತೇ ಈಗಲಾದರೂ
ತಳದಲ್ಲುಳಿದ ವಿಷ ಬಸಿದು
ಕುಡಿಯುವರೆ ಮತ್ತೆ, ಬಯಸಿ
ಕುಡಿದಳಿಯಬಹುದು ಕಾಣದ ಮತಿಹೀನರು
ಅರಿವೇ ತುಂಬಿದ ಪಾತ್ರೆ,
ಮರೆವೇ ಖಾಲಿ
ಪಾತ್ರೆ ಯಾವುದಯ್ಯ ನಿನ್ನದು
ಕಾಲ ದೇಶದೊಳಗೆ ಹರಿದು ಹೋಗುವ
ಅಕ್ಷರ ಉಪದೇಶ ಮಾಡುತ್ತದೆ
ಕೇಳಿಸಿಕೊಂಡಿದ್ದೀಯ ನಿಶ್ಯಬ್ದ
ಗುರು, ಲಘು,
ಅಲಂಕಾರ, ಶೃಂಗಾರ
ನೆನಪು ವಿಸ್ಮೃತಿ
ಸರಮಾಲೆ ಧರಿಸಿ
ಕನ್ನಡಿ ಮುಂದೆ ನಿಲ್ಲು
ಪ್ರತಿಬಿಂಬ ಒಳಗೆ
ಹೊರ ಹೋಗುವ ಮೊದಲು
ಹಿನ್ನಡೆಯಬೇಡ ಮತ್ತೆ,
ನೆನಪು ಕಾಡಿ ಬಳಲಬೇಡ
ಜ್ಞಾನ ಕೋಶದಲ್ಲಿ ಒಣಗಬೇಡ
ಬಟ್ಟಲು ತೊಳೆ ಶುಚಿಯಾಗಿ
ಒಣಗಿ
ಬಿಸಿಲಲ್ಲಿ ಬೋರಲಾಗಿರಲಿ
ಖಾಲಿ ಬಟ್ಟಲು
ಕುರುಡನಿಗೂ ತಿಳಿಯುತ್ತದೆ.
ಅರಿವು ಎಚ್ಚರಗಳ ಪಾತ್ರೆ
ಖಾಲಿ ಖಾಲಿ.
ಖಾಲಿಗೂ ಒಬ್ಬ ಒಡೆಯ
ನೀನೇ
-ಎಂ.ಎಸ್.ಮೂರ್ತಿ, ಬೆಂಗಳೂರು
—–