ಪ್ರತಿಷ್ಠಿತ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಸೇರಿದಂತೆ ನಾಡಿನ ಹಲವು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿರುವ ಬಹುಮುಖಿ, ಹಿರಿಯ ಪತ್ರಕರ್ತ ಸಿ.ಮಂಜುನಾಥ ಅವರ ಬಹುದಿನದ ಕನಸು ನನಸಾಗಿ ಮೂರು ವರುಷಗಳ ಹಿಂದೆ ವಿದ್ಯುನ್ಮಾನ (e-paper)ಮಿಂಚಂಚೆ ಪತ್ರಿಕೆಯಾಗಿ ಆವಿರ್ಭವಿಸಿದ್ದೇ-“ಕರ್ನಾಟಕ ಕಹಳೆ ಡಾಟ್ ಕಾಮ್”. ಅಂದು ಬಳ್ಳಾರಿ ವಲಯದ ಐಜಿಪಿಯವರಾಗಿದ್ದ(ಪ್ರಸ್ತುತ ಎಡಿಜಿಪಿ) “ಮನಂ”ಕಾವ್ಯನಾಮದ ಕವಿ ಲೇಖಕ ಸಂಶೋಧಕ ಶ್ರೀ ಮಳವಳ್ಳಿ ನಂಜುಂಡಸ್ವಾಮಿಯವರ ನಿವಾಸದಲ್ಲಿ ಈ ಕನಸು ಮೊಳಕೆಯೊಡೆಯಿತು. ಕವಿ, ಲೇಖಕ, ಗಾಯಕ ಮನಂ, ವಿಚಾರವಾದಿ ಸಾಹಿತಿ-ಕರ್ನಾಟಕಗ್ರಾಮೀಣ ಬ್ಯಾಂಕ್ ನಿವೃತ್ತ ರೀಜನಲ್ ಮ್ಯಾನೇಜರ್ ಡಾ.ವೆಂಕಟಯ್ಯ ಅಪ್ಪಗೆರೆ, ಸಿ.ಮಂಜುನಾಥ್ ಮತ್ತು ನಾನು(ಟಿ.ಕೆ.ಗಂಗಾಧರ ಪತ್ತಾರ)ಸುಖ ಸಂಕಥಾ ವಿನೋದದಿಂದ ಸರಸ-ಸಲ್ಲಾಪ-ಲಲಿತ ಸಂಭಾಷಣೆಯಲ್ಲಿ ತನ್ಮಯರಾಗಿ ಚಿಂತನ ಮಂಥನ ನಡೆಸುತ್ತಿದ್ದಾಗ-ಎಲ್ಲರೂ ಒಕ್ಕೊರಲಿನಿಂದ ಅನುಮೋದಿಸಿದ ಪರಿಣಾಮ ವಿಜಯ ಡಿಂಡಿಮ ಮೊಳಗಿಸುವ ಸಂಕಲ್ಪಬದ್ಧತೆಯಿಂದ-“ಕರ್ನಾಟಕ ಕಹಳೆ ಡಾಟ್ ಕಾಮ್” ಆವಿಷ್ಕಾರವಾಯಿತು.
ಈ ವಿದ್ಯುನ್ಮಾನ ವಿದ್ವತ್ ಪತ್ರಿಕೆಯಲ್ಲಿ ಪ್ರತಿದಿನವೂ ಒಂದೊಂದು ಕವನ ಸುಮನ ಸುರಭಿಸುವ ಆಶಯವನ್ನು ಸಿ.ಮಂಜುನಾಥ್ ವ್ಯಕ್ತಪಡಿಸಿದರು. ಅತ್ಯಂತ ಹರ್ಷೋಲ್ಲಾಸಭರಿತನಾದ ನಾನು ಅದಕ್ಕೆ ”ಅನುದಿನ ಕವನ” ಶೀರ್ಷಿಕೆ ಸೂಚಿಸಿದ್ದುದನ್ನು ಎಲ್ಲರೂ ಒಪ್ಪಿದರು. ಮೊಟ್ಟಮೊದಲನೆಯದಾಗಿ ನನ್ನ ರಚನೆಯ ಕವನ ಶುಭನಾಂದಿ ಹಾಡಿತು! ಈ ಐತಿಹಾಸಿಕ ಕವನ ಸಂಚಿಕೆಗೆ ಈ 2023ನೇ ಸೆಪ್ಟೆಂಬರ್ 27ಕ್ಕೆ ಸಾವಿರದ ಸಂಭ್ರಮ. “ಸಾವಿರದ”-ಎನ್ನುವ ಶಬ್ದವೇ ವಿಶಿಷ್ಟವಾದುದು. ಸಂಖ್ಯಾನುಸರಣೆಯಲ್ಲಿ ಒಂದುಸಾವಿರ-(One thousand=1000)-ಎಂಬರ್ಥ ಸ್ಫುರಿಸುವ ಈ ಶಬ್ದದ ವಿಶೇಷಾರ್ಥ-ಸಾವಿರದ-ಅಂದರೆ –ಸಾವು ಇರದ-“ಸಾವು”ಯೆಂಬುದರ ‘ಅರ್ಥ’ಖಂಡಿತವಾಗಿಯೂ ‘ಮೃತ್ಯು’-‘ಮರಣ’ ಅಲ್ಲ! “ಅಂತ್ಯವಿರದ-ಅಂತಿಮವಲ್ಲದ”-ಎಂಬ ವಿಶೇಷಾರ್ಥ ಹೊಂದಿದೆ. ಇಲ್ಲಿ “ಮೃತ” ಅಲ್ಲ! “ಅಮೃತ” ಕೊನೆಯೇ ಇಲ್ಲದ ಸಂಜೀವಿನಿ.
ಈಗ 999ನೇ ಕವನವಾಗಿ-ನನ್ನ “ಹಂಪಿದರ್ಶನ”400ಚೌಪದಿಗಳ ಖಂಡಕಾವ್ಯದ ಹಂಪಿಯ ಆಯ್ದ ಪದ್ಯಗಳನ್ನು ಇಲ್ಲಿ ಪ್ರಸ್ತುತ ಪಡಿಸುತ್ತಿದ್ದೇನೆ. ಸಾವಿರ ಕವನಗಳ ಪ್ರಕಟಣೆಗೆ ಒಂದೇ ಹೆಜ್ಜೆಯ ಸನಿಹದಲ್ಲಿರುವ ಸಿ.ಮಂಜುನಾಥ್ ಅವರಿಗೆ ಅಭಿನಂದನೆಗಳು. ಸಾವಿರ- ಎರಡು- ಮೂರು-ನಾಲ್ಕು- ಐದು ಸಾವಿರ ಆಗಲಿ.ಈ ಮೂಲಕ ಇವರ ಸಾಹಿತ್ಯ ಸೇವೆ ಮುಂದುವರೆಯಲಿ ಎಂದು ಆಶಿಸುವೆನು.
-ಟಿ.ಕೆ.ಗಂಗಾಧರ ಪತ್ತಾರ, ಬಳ್ಳಾರಿ🍀👇
ಹಂಪಿ ದರ್ಶನ
(೪೦೦ಚೌಪದಿಗಳ ನೀಳ್ಗವನದ ಶಿಲ್ಪ ಕಲಾ ವೈಭವ ಬಿಂಬಿಸುವ ಆಯ್ದ ಪದ್ಯಗಳು)
ವಿಶ್ವ ಭೂ ವ್ಯೋಮಗಳ ಸೃಷ್ಟಿಸಿ/ಶರಧಿ ನದಿ ಜಲ ವೃಷ್ಟಿಸಿ// ತಾರೆ ರವಿ ಶಶಿ ದೀಪ್ತಿ ಬೆಳಗಿಸಿ/ಜಗದ ನಿಶೆಯನು ತೊಲಗಿಸಿ-/೧/(೩೩೩)
ಭವದ ಜಡತೆಯ ಕೊರಡ ಕೊನರಿಸಿ/ಅಮೃತ ಚೇತನ ಚಿಮ್ಮಿಸಿ// ಪಂಚ ಭೂತದ ತತ್ವ ಗರ್ಭದಿ/ಜೀವ ಕಾಂತಿಯ ಹೊಮ್ಮಿಸಿ-/೨/(೩೩೪)
ವೃಕ್ಷ ಗಿಡ ಲತೆ ಕಾಯಿ ಹೂ ಸಸಿ/ಸವಿ ಫಲಾಮೃತ ಕರುಣಿಸಿ// ಖನಿಜ ಸಂಪದ ಗಿರಿಯ ಹಬ್ಬಿಸಿ/ಜೀವ ಕೋಟಿಯ ರಕ್ಷಿಸಿ-/೩/(೩೩೫)
ಜೀವ ಸಂಕುಲ ಮುದದಿ ಪೊರೆಯುವ/ಜಗಜ್ಜನನಿ ಗಾಯತ್ರಿಯ// ಪರಮ ಪಾವನ ಪೀಠ ಮೆರೆವುದು/ನೀಡುತಲಿ ನಿರುತಾಶ್ರಯ-/೪/(೩೩೬)
ಕಡಲೆ-ಸಾಸುವೆ-ಕಾಳು ಗಣಪರು/ನಿಕಟ ಬಡವಿಯ ಲಿಂಗವು// ಉಗ್ರ ನರಸಿಂಹನನು ಕಂಡರೆ/ಮರುಗುವುದು ಹಾಯ್! ಹೃದಯವು-/೫/(೩೩೭)
ಅಡಿ ಅಡಿಗೆ ಗುಡಿ ಗುಡಿ ಸಮುಚ್ಚಯ/ತನು ಮನವು ರೋಮಾಂಚನ// ಏನು ಕೆತ್ತನೆ! ಎಂಥ ಕಲ್ಪನೆ!!/ಸ್ವರ್ಗ ಶಿಲ್ಪದ ಚೇತನ-/೬/(೩೪೦)
ಅಣಿಮ ಲಘಿಮಾ ಮಹಿಮ ಗರಿಮಾ/ಅಷ್ಟ ಸಿದ್ಧಿಯ ಮೂರುತಿ// ಓಜ ಹಸ್ತದಿ ಶಿಲೆಯೆ ಮೇಣವು/ಶಿಲ್ಪ ಸೃಷ್ಟಿಯ ಕೀರುತಿ-/೭/(೩೪೧)
ಚಕ್ರತೀರ್ಥವೊ! ಸೀತೆ ಸೆರಗೋ!!/ವಿಜಯ ವಿಟ್ಠಲ ದೇಗುಲಾ// ಸ್ಥಪತಿ ಕರ ಕುಶಲತೆಯ ಅಚ್ಚರಿ/ಕಲ್ಲರಳಿ ಹೂವಾಯ್ತಲಾ-/೮/(೩೪೩)
ಬೆರಳು ಮೀಂಟಲು ಸರಿಗಮದ ಸ್ವರ/ಸ್ತಂಭ ಸ್ತಂಭದಿ ಕೌಶಲ// ವಿಸ್ಮಯಾದ್ಭುತ ಆ ಶಿಲಾರಥ/ಶಿಲ್ಪ ಶಿಲ್ಪವು ಉಜ್ವಲ-/೯/(೩೪೫)
ಬಹು ವಿಶಾಲ ಹಜಾರ ರಾಮನ/ಮಂದಿರವು ರಮಣೀಯವು// ಗೋಡೆ ಗೋಡೆಯು ಬೆರಗು ಬೆಡಗಿನ/ಸೊಗದ ಚಿತ್ರದಿ ರಮ್ಯವು-/೧೦/(೩೪೬)
ವಾಸ್ತು ಭಿತ್ತಿಯ ದೃಶ್ಯ ವೈಭವ/ಇಲ್ಲಿದೆ ಮಹಾ ಭಾರತ// ವೇದ ರಾಮಾಯಣ ಪುರಾಣವು/ವಿವಿಧ ಶಿಲ್ಪಗಳದ್ಭುತ-/ ೧೧/(೩೪೭)
ಪ್ರತಿಮೆ ಪ್ರತಿಮೆಯು ನಡೆ ನಡೆದ ಕತೆ/ಬಿಡ ಬಿಡದೆ ನುಡಿ ನುಡಿವುದು// ಶಿಲೆ ಶಿಲೆಯು ತುಡಿ ತುಡಿವ ಚರಿತೆಯು/ಮನ ಮನವ ಮಿಡಿ ಮಿಡಿವುದು-/೧೨/(೩೫೦)
ಶಿಲ್ಪ ಕುಸುಮಿತ ಕತೆಯೊ ಕವಿತೆಯೊ/ಶಿಲೆಯೊಳರಳಿದ ಚರಿತೆಯೊ// ಶಿಲ್ಪ ಕಲೆಯ ಪ್ರಯೋಗ ಶಾಲೆಯೊ/ವಿಶ್ವಕರ್ಮನ ಲೀಲೆಯೊ-/೧೩/(೩೫೧)
ಶಿಲ್ಪ ಶುಕ ಶ್ರೀಕಾರ ಶ್ಲೋಕವೊ/ಶಿಲ್ಪ ಪಿಕ ಝೇಂಕಾರವೊ// ಶಿಲ್ಪ ಭ್ರಮರೋಂಕಾರ ಗಾನವೊ/ಶಿಲ್ಪ ಹಯ ಠೇಂಕಾರವೊ-/೧೪/(೩೫೨)
ಶಿಲ್ಪ ಕಾವ್ಯವು ಶಿಲ್ಪ ಶ್ರಾವ್ಯವು/ ಶಿಲ್ಪ ಶಾಸ್ತ್ರವು ವೇದವು// ಶಿಲ್ಪ ಭವ್ಯವು ಶಿಲ್ಪ ದಿವ್ಯವು/ ಲಲಿತ ಸುಮಧುರ ನಾದವು/೧೫/(೩೫೫)
ಪಚ್ಚೆ ಪೈರಿನ ವೃಕ್ಷ ಲತೆಗಳ/ಕುಸುಮ ಪರಿಮಳ ಪಲ್ಲವಿ// ಹೊಳೆಯ ಜುಳುಜುಳು ಕೊಳದ ಕಲಕಲ/ಜಲತರಂಗದ ಭೈರವಿ-/೧೬/(೩೫೭)
೧ಕಲ್ಲು ಕಲ್ಲೂ ಕತೆಯ ಹೇಳಿವೆ/ಲಿಪಿಯು ಸೂಸಿವೆ ಚಂದನ// ಶಿಲ್ಪ ಶಿಲ್ಪವು ನಾಟ್ಯವಾಡಿವೆ/ನೆಲದ ಕಣ ಕಣ ನಂದನ-/೧೭/(೩೬೧)
ಇಲ್ಲೆ ದ್ವಾರಕೆ ಮಥುರೆ ಗೋಕುಲ/ಇಲ್ಲೆ ಇದೆ ಬೃಂದಾವನ// ಕೃತವು ತ್ರೇತಾ ದ್ವಾಪರವು ಕಲಿ/ಯುಗಗಳಿಲ್ಲಿ ಚಿರಂತನ-/೧೮ /(೩೬೨)
ಅನತಿ ದೂರದಿ ಇಹುದು ಕೆಂಚನ/ಗುಡ್ಡ ಜಲನಿಧಿ ಯೋಜನೆ// ಹೊಳೆಯ ನೀರನು ಹೊಲಕೆ ಹರಿಸುವ/ಪ್ರಗತಿಪರ ಆಲೋಚನೆ/೧೯/(೩೬೩)
ಆಳಿದರಸರು ಕೃಷಿಯ ವೃದ್ಧಿಗೆ/ನೀಡುತಿದ್ದರು ಆದ್ಯತೆ// ಎಂಬ ಮಾತಿಗೆ ಇದುವೆ ಸಾಕ್ಷಿಯು/ಇತ್ತು ರೈತಗೆ ಮಾನ್ಯತೆ/೨೦/(೩೬೫)
ಹೇಮಕೂಟಾಚಲವೆ ಹಿಮಗಿರಿ/ಹಂಪಿ ದಕ್ಷಿಣ ಕಾಶಿಯು// ತುಂಗಭದ್ರೆಯೆ ದೇವ ಗಂಗೆಯು/ಕೊಳೆ ತೊಳೆವ ಅಘನಾಶಿಯು-/೨೧/(೩೬೭)
“ಭುವನ ವಿಜಯ”ದ ಯುಗವು ಮುಗಿಯಿತು/ಕಾಲ ಗರ್ಭದಿ ಮುಳುಗಿತು// ಹಂಪೆ! ಎಂದೂ ಕೊಂಪೆಯಾಗದು!/ವೈಭವವು ಮರೆಯಾಯಿತು-/೨೨/(೩೬೯)
-ಟಿ.ಕೆ.ಗಂಗಾಧರ ಪತ್ತಾರ. ಹಿರಿಯ ಸಾಹಿತಿಗಳು, ಬಳ್ಳಾರಿ
——