ಲಕ್ಕುಂಡಿ ಬಳಿ‌ ರಸ್ತೆ ಅಪಘಾತ: ನಿವೃತ್ತ ಡಿಡಿಪಿಐ ಡಾ. ಹೆಚ್. ಬಾಲರಾಜ್, ಪುತ್ರ ವಿನಯ್ ವಿಧಿವಶ

ಬಳ್ಳಾರಿ/ಹೊಸಪೇಟೆ, ಸೆ.28: ಅವಿಭಜಿತ ಬಳ್ಳಾರಿ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾಗಿ ನಿವೃತ್ತಿ ಹೊಂದಿದ್ದ ಡಾ. ಹೆಚ್ ಬಾಲರಾಜ್ ಅವರು ಮತ್ತು ಅವರ ಪುತ್ರ  ಯುವ ಸಾಹಿತಿ ವಿನಯ್ ಹೆಚ್.ಬಿ ಅವರು ಗುರುವಾರ ಗದಗ್ ಜಿಲ್ಲೆ ಲಕ್ಕುಂಡಿ ಸಮೀಪದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಡಾ. ಬಾಲರಾಜ್ ಅವರು ಬಳ್ಳಾರಿ ಜಿಲ್ಲೆಯ ಸಾಹಿತ್ಯ ಲೋಕದಲ್ಲಿಯೂ ತಮ್ಮ ಲೇಖನ ಮತ್ತು ಬರಹಗಳ ಮೂಲಕ ಗುರುತಿಸಿ ಕೊಂಡಿದ್ದರು.
ಅವರ ಸಾಹಿತತ್ಯಿಕ ಸೇವೆಯನ್ನು ಗುರುತಿಸಿ 2023ರ ಮಾರ್ಚ್ ತಿಂಗಳಲ್ಲಿ ನಡೆದ ಹೊಸಪೇಟೆ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಧ್ಯಾಕ್ಷರನ್ನಾಗಿ ಕನ್ನಡ ಸಾಹಿತ್ಯ ಪರಿಷತ್ತು ಅವರನ್ನು ಗೌರವಿಸಿತ್ತು.
ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಅನುಪಮ‌ಸೇವೆ ಸಲ್ಲಿಸುತ್ತಿರುವುದನ್ನು ಪರಿಗಣಿಸಿ ಡಾ. ಬಾಲರಾಜ್ ಅವರನ್ನು ಬಳ್ಳಾರಿಯ ಡಾ.‌ಸುಭಾಷ್ ಭರಣಿ‌ ಸಾಂಸ್ಕೃತಿಕ ‌ವೇದಿಕೆ 10 ವರ್ಷಗಳ ಹಿಂದೆ ರಾಜ್ಯ‌ಮಟ್ಟದ ಡಾ.‌ಎಚ್ ಎನ್ ಪ್ರಶಸ್ತಿ ನೀಡಿ ಸತ್ಕರಿಸಿತ್ತು.
ಶಿಕ್ಷಣ ಮತ್ತು ಸಾಹಿತ್ಯ ವಲಯದಲ್ಲಿ ಗುರುತಿಸಿಕೊಂಡಿದ್ದ ಡಾ. ಬಾಲರಾಜ್ ಅವರ ಅಕಾಲಿಕ ಅಗಲಿಕೆ ತುಂಬ ಲಾರದ‌ ನಷ್ಟವೇ ಸರಿ.
ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತನು ಅವರ ಕುಟುಂಬ ವರ್ಗಕ್ಕೆ ನೀಡಲಿ ಎಂದು ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಡಾ. ಸುಭಾಷ್ ಭರಣಿ ಸಾಂಸ್ಕೃತಿಕ ವೇದಿಕೆ ಭಗವಂತನಲ್ಲಿ ಪ್ರಾರ್ಥಿಸಿವೆ.
ಮೂಲತಃ ಹಗರಿಬೊಮ್ಮನಹಳ್ಳಿ ತಾಲೂಕಿನ ಲಡಕನ ಬಾವಿ ಗ್ರಾಮದವರಾಗಿರುವ ಡಾ. ಬಾಲರಾಜ್ ಅವರು ಕುಟುಂಬದೊಂದಿಗೆ ಹೊಸಪೇಟೆಯಲ್ಲಿ ವಾಸಿಸುತ್ತಿದ್ದರು.
ಡಾ. ಬಾಲರಾಜ್ ಮತ್ತು ಅವರ ಪುತ್ರ ವಿನಯ್ ಅವರ ಆತ್ಮಕ್ಕೆ ಭಗವಂತನು ಚಿರಶಾಂತಿಯನ್ನು ಕರುಣಿಸಲಿ
ಎಂದು ಕಸಾಪ ಜಿಲ್ಲಾಧ್ಯಕ್ಷ ಡಾ.ನಿಷ್ಠಿ ರುದ್ರಪ್ಪ ಮತ್ತು ವೇದಿಕೆ ಅಧ್ಯಕ್ಷ ಸಿ.ಮಂಜುನಾಥ್ ಕೋರಿದ್ದಾರೆ.
—–