ತಿರುಗುವ ಭೂಮಿಯ ಕಥೆ
ತಿರುಗುವ ದುಂಡನೆಯ
ಭೂಮಿಗೆ ಎತ್ತಣ ಮೂಡಣ
ಎತ್ತಣ ಪಡುವಣ ಬಡಗಣ
ಮತ್ತಿಂದೆತ್ತಣ ತೆಂಕಣ?
ಎಲ್ಲಿಂದೆಲ್ಲಿಗೆ ಪೂರ್ವ, ಪಶ್ಚಿಮ
ಉತ್ತರ ಮತ್ತು ದಕ್ಷಿಣ?
ಕತ್ತಲೆಗೆ ಹೆದರಿ ಬೆಂಕಿ
ದಿಕ್ಕು ದೆಸೆಯಿಲ್ಲದೆ ಕಳೆದು
ಹೋಗುವ ಭಯದಿಂದ ದಿಕ್ಕು,
ಜೀವ ರಕ್ಷಣೆಗೆ ಶಸ್ತ್ರ
ಮಳೆಗೆ ಚಳಿಗೆ ಮನೆ,
ನಿರಂತರ ಕಾಲ ಪ್ರವಾಹಕೆ
ಕೊನೆ ಮೊದಲಿಲ್ಲ.ಆದರೆ
ಎಲ್ಲಿಯ ಸೆಕೆಂಡ್, ನಿಮಿಷ
ಗಂಟೆ, ದಿನ, ವಾರ, ತಿಂಗಳು
ವರ್ಷ ಮತ್ತಿಂದೆಲ್ಲಿಯ
ಹಗಲು ರಾತ್ರಿ – ಗಡಿಯಾರ?
ಮೂಡದ, ಮುಳುಗದ
ಸೂರ್ಯ ಚಂದ್ರರಿಗೂ
ಉದಯಾಸ್ತಮಾನ?
ಆದರೂ ಇಲ್ಲಿ ರಸ್ತೆ ಬಾಂದಾರ
ಮನೆ,ಗುಡಿ, ಗೋಪುರ,
ಎತ್ತರದ ಗಗನ ಚುಂಬಿ ಕಟ್ಟಡ, ಸೇತುವೆ, ಅಣೆಕಟ್ಟು
ಭೂತಾಯಿ ಒಮ್ಮೆ ಮುನಿದು
ಮೈ ಕೊಡವಿದರೆ,
ಕಂಪಿಸಿದರೆ ಎಲ್ಲವೂ ಬುಡಮೇಲು
ಆದರೂ ನಮಗೆ ಇನ್ನಿಲ್ಲದ ಮೋಹ
ಕನಸು, ಭ್ರಮೆ ಒಪ್ಪುವಳೇ ಭೂ ರಮೆ?
ಅಸದಳ ನಿಸರ್ಗವ ನಿಯಂತ್ರಿಸುವ
ನಮ್ಮ ಸ್ವತ್ತು ಎನ್ನುವ ಅಹಂ
ಭೂತಾಯಿಯ ಎದೆ ಬಗೆಯುವ ದುರುಳತನ.
-ಪ್ರೊ.ಶಾಂತಮೂರ್ತಿ ಕುಲಕರ್ಣಿ, ಹೂವಿನ ಹಡಗಲಿ
—–