ಮೆಟ್ಟಿ ನಿಲ್ಲು
ಪೆಟ್ಟು ತಿಂದ ಕಲ್ಲೇ ದೇವ ಸ್ವರೂಪ ಪಡೆಯುವುದು ಎದೆಗುಂದದೆ ಮೆಟ್ಟಿ ನಿಲ್ಲು||
ಗುರಿ ಮುಟ್ಟಲು ಒಂದೊಂದೇ ಮೆಟ್ಟಿಲು ಏರುವುದು ಎದೆಗುಂದದೆ ಮೆಟ್ಟಿ ನಿಲ್ಲು||
ಕಷ್ಟಗಳು ಯಾರಿಗಿಲ್ಲ ಹೇಳು ಬದುಕಿನಲ್ಲಿ ಬರಲಿ ಬೇಕಾದಷ್ಟು ಎಡರು ತೊಡರುಗಳು|
ಎದೆಗೊಟ್ಟು ಎದುರಿಸಿದಾಗ ಸರಿ ದಾರಿ ದೊರಕುವುದು ಎದೆಗುಂದದೆ ಮೆಟ್ಟಿ ನಿಲ್ಲು||
ಗೆಲುವು ಮರೀಚಿಕೆಯಲ್ಲ ಸೋಲುಗಳ ಮಹಲುಗಳ ಮೇಲಿಂದ ಕೈ ಬೀಸಿ ಕರೆಯುತ್ತದೆ|
ಹಿಡಿದ ಕಾರ್ಯ ಬಿಡದಿರು ಪ್ರಯತ್ನಕ್ಕೆ ಪ್ರತಿಫಲ ಕಟ್ಟಿರುವುದು ಎದೆಗುಂದದೆ ಮೆಟ್ಟಿ ನಿಲ್ಲು||
ದುರಹಂಕಾರಿಗೆ ಅರಿವು ಎಂಬುದು ಕಷ್ಟ ಸಾಧ್ಯ ದುರುಳುತನದಲ್ಲಿ ಕೇಡು ನಿಶ್ಚಿತ|
ಶಿಷ್ಟ ಮಾರ್ಗದಲ್ಲಿ ನಡೆವಾಗ ವಿರೋಧ ಹುಟ್ಟೇ ಹುಟ್ಟುವುದು ಎದೆಗುಂದದೆ ಮೆಟ್ಟಿ ನಿಲ್ಲು||
ಸಿಟ್ಟು ಸೆಡುವು ಯಾರ ಮೇಲೆ ಎಲ್ಲದಕ್ಕೂ ಕಾರಣ ಕರ್ತೃ ನೀನೇ ಅಲ್ಲವೇ|
‘ಗಟ್ಟಿಸುತ’ ಹಿಮ್ಮೆಟ್ಟದಿರು ಇಟ್ಟ ಹೆಜ್ಜೆಗಳಲ್ಲೇ ಜಯ ಸಿಗುವುದು ಎದೆಗುಂದದೆ ಮೆಟ್ಟಿ ನಿಲ್ಲು||
-ಎಂ.ಡಿ.ಬಾವಾಖಾನ ಸುತಗಟ್ಟಿ, ಮಲ್ಲಮ್ಮನ ಬೆಳವಡಿ
——