💕ಗಾನಕವಿತೆ💕
ತುಟಿ ಮೇಲೆ ಬಂದದ್ದು ಒಂದೇ..ಒಂದು ..
ಎದೆಯಲ್ಲಿ ಉಳಿದದ್ದು….!?!?
ಬರೆಯಲಾಗದಷ್ಟು
ಕೈ ನಡುಗುತಿತ್ತು
ನನ್ನೊಳಗಿನ ವೇದನೆಯೆಲ್ಲಾ
ಒಂದೇ ಸಮನೆ
ಧುಮ್ಮಿಕ್ಕುತ್ತಿರುವ ಪರಿಗೆ
ಲೇಖನಿಯೇ ಮುರಿದಂತಾಗಿತ್ತು.
ಕಣ್ಣ ಹನಿಗಳೆಲ್ಲಾ ಕಣ್ಣಾಲಿಗಳ ತುಂಬಿ
ಕಣ್ಣನೋಟವ ಬಂಧಿಸಿದ್ದವು.
ಮಾತುಗಳು ನೂರಿದ್ದರೂ
ಶೂನ್ಯದ ಬುರುಡೆಯಂತಾಗಿತ್ತು ಮನ.
ಅಕ್ಷರಶಃ.. ನಾ ಮೂಕನಂತೆ,
ಗಾವಿಲನಂತೆ ಚಡಪಡಿಸುತ್ತಿದ್ದೆ.
ಅಪ್ಪನಿಗೆದರಿ ನಿನ್ನ ಸಹವಾಸಕ್ಕೆ
ಚರಮಗೀತೆ ಬರೆದು ಬಿಡಲಾ?
ಅವ್ವನ ನಂಬಿ ನಿನ್ನ
ಮದುವೆಯಾಗುವ ಅಭಯ ನೀಡಲಾ?
ಸೋದರರ ಮೂದಲಿಕೆಗಂಜಿ
ನಿನ್ನಿಂದ ದೂರ ಸರಿದು ಬಿಡಲಾ?
ನಾ ಬರೀ ಅಂಜುಬುರುಕನಷ್ಟೇ ಅಲ್ಲಾ
ಅಮಾಯಕ, ಜೊತೆಗೆ
ಅಪ್ರಯೋಜಕ ಕೂಡ..!
ಇಂತಹ ನಿಷ್ಪ್ರಯೋಜಕನ ನೀ
ಪ್ರೀತಿಸಿದೆ ಎಂಬ ಒಂದೇ ಕಾರಣಕ್ಕೆ
ನನ್ನ ಇಷ್ಟೆಲ್ಲಾ ಪಡಿಪಾಟಲು.
ಆದರೂ ಅದೆಷ್ಟು ಧೈರ್ಯವಿತ್ತೆ ನೀನು?,
ದುಡಿದು ಸಾಕುವೆ ಎಂದೆ,
ಮಲಗಿಸಿ ಮುದ್ದಿಸುವೆ ಎಂದೆ.
ತಾಯಾಗಿ ತಣಿಸಿ,ಸತಿಯಾಗಿ ಉಣಿಸಿ
ದೇವಿಯಾಗಿ ಧಣಿಸುವೆ ಎಂದ ನಿನ್ನ
ಪ್ರೀತಿಯ ಧಿಕ್ಕರಿಸಿದ ತಪ್ಪಿಗೆ
ನಿನಗಷ್ಟೇ ಅಲ್ಲಾ,ನನಗೂ ಪ್ರಾಯಶ್ಚಿತ್ತ ದ
ಬದುಕೇ ನಂಟಾಯಿತು
ಒಂದೇ ನದಿಯ ಎದುರು ಬದುರಿನ
ದಂಡೆಯ ಬಂಡೆಯಂತಾದೆವು
ಸರಳ ರೇಖೆಯಂತ ಹಳಿಗಳಾಗಿ ಹೋದೆವು.
ಮುಖ ನೋಡಿದರೂ ಮುದ್ದಿಸೋ
ಭಾಗ್ಯವಿಲ್ಲ
ಎದುರಿದ್ದರೂ ನೀರಿನ ಬೇರ್ಪಡಿಕೆಗೆ
ಬಲಿಯಾದೆವು.
ಇದೇ ಜೀವನ…ಬಹುಶಃ
ಅದೇ..ನಮ್ಮ ಪಾಲಿನ ಪಾವನ…!!??
-ಗಾನಾಸುಮಾ ಪಟ್ಟಸೋಮನಹಳ್ಳಿ, ಮಂಡ್ಯ
——