ಅನುದಿನವೂ ಅನುರಣಿಸುತಿರಲಿ ಕಾವ್ಯ ಕಹಳೆಯ ನಿನಾದ… -ಡಾ. ಸಂಗಮೇಶ ಎಸ್ ಗಣಿ, ಹೊಸಪೇಟೆ

ಕವಿತೆ ಯಾರು ಬರೆಯುತ್ತಾರೋ ಅವರದಲ್ಲ;
ಯಾರಿಗೆ ಅವಶ್ಯಕತೆ ಇದೆಯೋ ಅವರದು

– ಪಾಬ್ಲೋ ನೆರೂಡಾ
ಕರ್ನಾಟಕ ಕಹಳೆ ಡಾಟ್ ಕಾಮ್ ನ ಜನಪ್ರಿಯ ‘ಅನುದಿನ ಕವನ’ ಕಾಲಂ ಸೆ. 27, 2023 ರಂದು ಸದ್ದಿಲ್ಲದೇ ಒಂದು ಸಾವಿರ ದಿನವನ್ನು ಪೂರೈಸಿ, ದಾಖಲೆ ಸ್ಥಾಪಿಸಿದೆ ಮಾತ್ರವಲ್ಲ ಎರಡು ಸಾವಿರ ದಿನದತ್ತ ವಿಶ್ವಾಸದಿಂದ ದಾಪುಗಾಲು ಹಾಕಿದೆ.
ಸಾವಿರ ದಿನದ ಯಶಸ್ಸು ನಾಡಿನ, ಹೊರನಾಡಿನ, ದೇಶ ವಿದೇಶದ ಹಿರಿಯ, ಕಿರಿಯ ಕವಿಗಳಿಗೆ ಸಲ್ಲಬೇಕು. ಸಾವಿರ ಕವನಗಳೆಂಬ ಕುಸುಮಗಳ ಚೆಂದದ ಆಕರ್ಷಕ ಹಾರವನ್ನು ಕಟ್ಟುವ ದಾರದ ಕೆಲಸವನ್ನು ಮಾತ್ರ ನನ್ನದು ಎಂದು ವಿನೀತನಾಗಿ ಹೇಳ‌ ಬಯಸುತ್ತೇನೆ.
*****
ಅನುದಿನ ಕವನ ಸಾವಿರ ದಿನವನ್ನು ತಲುಪಿದ ಬಗ್ಗೆ ನೂರಾರು ಜನ ಕವಿ-ಕವಿಯಿತ್ರಿಯರು ಸಂತೋಷ ವ್ಯಕ್ತಪಡಿಸಿದ್ದಾರೆ. ಸಂಭ್ರಮಿಸಿದ್ದಾರೆ. ಈ ಬಗ್ಗೆ ಪ್ರೀತಿಯಿಂದ ಪ್ರತಿಕ್ರಿಯಿಸಿದ್ದಾರೆ. ಇಂದು(ಅ.4)  ಕವಿ, ಕನ್ನಡ ಉಪನ್ಯಾಸಕ ಹೊಸಪೇಟೆಯ ಡಾ.‌ಸಂಗಮೇಶ ಎಸ್ ಗಣಿ ಅವರ ಅಭಿಪ್ರಾಯವನ್ನು ಪ್ರಕಟಿಸಲು ಹರ್ಷಿಸುತ್ತೇನೆ.                                                                                   -ಸಿ. ಮಂಜುನಾಥ್, ಸಂಪಾದಕರು, ಕರ್ನಾಟಕ ಕಹಳೆ ಡಾಟ್ ಕಾಮ್, ಬಳ್ಳಾರಿ
🍀👇🌺👇🍀👇
ಅನುದಿನವೂ ಅನುರಣಿಸುತಿರಲಿ ಕಾವ್ಯ ಕಹಳೆಯ ನಿನಾದ…

ಆಧುನಿಕ ಡಿಜಿಟಲ್ ತಂತ್ರಜ್ಞಾನ ಮಾಧ್ಯಮಗಳು ತಮ್ಮ ಕಾರ್ಯಕ್ಷೇತ್ರವನ್ನು ವ್ಯಾಪಕವಾಗಿ ವಿಸ್ತರಿಸಿಕೊಳ್ಳುತ್ತಿವೆ. ಸಾಮಾಜಿಕ ವಿದ್ಯಮಾನಗಳನ್ನು ಬಿತ್ತರಿಸುವುದರ ಜೊತೆಗೆ ಕಲೆ, ಸಾಹಿತ್ಯ, ಸಾಂಸ್ಕೃತಿಕ ಸಂಗತಿಗಳನ್ನು ಪ್ರಕಟಿಸುವ ವಿನೂತನ ಪ್ರಯೋಗಗಳನ್ನು ಮಾಡುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.

ಸಾಮಾಜಿಕ ಕಾಳಜಿಯುಳ್ಳ, ಕಲೆ ಸಾಹಿತ್ಯ ಪ್ರೇಮಿಯೂ, ಸಂಘಟಕರೂ, ಶಿಕ್ಷಣ ಚಿಂತಕರೂ, ಆತ್ಮೀಯರೂ ಆಗಿರುವ ಶ್ರೀ ಸಿ.‌ಮಂಜುನಾಥ ಅವರ ಕನಸಿನ ಕೂಸು ‘ಕರ್ನಾಟಕ ಕಹಳೆ ಡಾಟ್ ಕಾಮ್’ ವಿದ್ಯುನ್ಮಾನ ಪತ್ರಿಕೆ ಮಾಧ್ಯಮರಂಗದಲ್ಲಿ ಸದ್ದಿಲ್ಲದೆ ಸುದ್ದಿ ಮಾಡುತ್ತಿದೆ.

ಅವರ ಸಂಪಾದಕತ್ವದಲ್ಲಿ ಪ್ರಕಟವಾಗುತ್ತಿರುವ ಕರ್ನಾಟಕ ಕಹಳೆ ಡಾಟ್ ಕಾಮ್ ಪತ್ರಿಕೆಯು ಸುದ್ದಿಗಳ ಪ್ರಕಟಣೆಗೆ ಆದ್ಯತೆಯನ್ನು ನೀಡುವುದಲ್ಲದೇ ಕವಿತೆಗಳನ್ನು ನಿರಂತರವಾಗಿ ಪ್ರಕಟಿಸುವ ಸಾಹಸ ಮಾಡಿದ್ದು ಮಂಜುನಾಥ ಅವರ ಕಾವ್ಯಪ್ರೀತಿಯ ದ್ಯೋತಕವಾಗಿದೆ.

ಕವನ ಪ್ರಕಟಣೆಗಾಗಿಯೇ ‘ಅನುದಿನ ಕವನ’ ಎಂಬ ಹೆಸರಿನಲ್ಲಿ ನಿರ್ದಿಷ್ಟ ಜಾಗೆಯನ್ನು ಮೀಸಲಿಟ್ಟು ಒಂದು ಸಾವಿರ ಕವಿತೆಗಳನ್ನು ಪ್ರಕಟಿಸಿದ್ದು ಪತ್ರಿಕೆಯ ಬಹುದೊಡ್ಡ ಸಾಧನೆ. ಇದು ಕಾವ್ಯ ಸಂಭ್ರಮಕ್ಕೆ ಸಾಕ್ಷಿಯಾಗಿದೆ. ನಾಡಿನ ಮೂಲೆಮೂಲೆಯಲ್ಲಿರುವ ಕವಿಗಳಿಂದ ಕವಿತೆಗಳನ್ನು ಕೇಳಿ,ಪಡೆದುಕೊಂಡು ನಿರಂತರವಾಗಿ ಒಂದು ಸಾವಿರ ಕವಿತೆಗಳನ್ನು ಪ್ರಕಟಿಸುವ ಮೂಲಕ ಕವಿಗಳಿಗೆ ವೇದಿಕೆ ಕಲ್ಪಿಸಿಕೊಡುವ ಸಂಪಾದಕರ ಕಾವ್ಯಪ್ರೀತಿ, ಬದ್ಧತೆ ಪ್ರಶಂಸನೀಯ.

ಸುದ್ದಿ, ಜಾಹೀರಾತುಗಳ ಪ್ರಕಟಣೆಗೆ ಆದ್ಯತೆ ನೀಡುವ ಇಂದಿನ ಪತ್ರಿಕೆಗಳಿಗೆ ಹೊರತಾಗಿರುವ ಈ ‘ಕರ್ನಾಟಕ ಕಹಳೆ.ಕಾಂ’ ಕನ್ನಡದ ಕಾವ್ಯಬೆಳೆಗೆ ಭೂಮಿಕೆಯಾಗಿರುವುದು ವಿದ್ಯುನ್ಮಾನ ಪತ್ರಿಕೆಗಳ ಇತಿಹಾಸದಲ್ಲಿಯೇ ಮಹತ್ವದ್ದು ಮತ್ತು ದಾಖಲಾರ್ಹವೂ ಆಗಿದೆ. ಈ ‘ಅನುದಿನ ಕವನ’ ದಲ್ಲಿ ನನ್ನ ಕವಿತೆ ಪ್ರಕಟವಾಗಿರುವುದು, ಸಾವಿರ ಕವನ ಸಂಭ್ರಮದ ಭಾಗವಾಗಿರುವುದು ನನಗೂ ಹೆಮ್ಮೆಯ ಸಂಗತಿ. ನನ್ನನ್ನೂ ಭಾಗಿಯಾಗಿಸಿದ ಸಂಪಾಕದರ ಪ್ರೀತಿಗೆ ಶರಣು.

ಪತ್ರಿಕೆಯಲ್ಲಿ ಈವರೆಗೂ ಪ್ರಕಟವಾಗಿರುವ ‘ಸಾವಿರ ಕವನ’ಗಳು ಸದ್ಯದ ಕನ್ನಡ ಕಾವ್ಯಸ್ವರೂಪ, ಅದರ ಚಹರೆ, ಚಲನೆಯ ಗತಿಯನ್ನು ಗುರುತಿಸುವ ಗಮನಾರ್ಹ ಪ್ರಯತ್ನವಾಗಿದೆ. ಈ ಎಲ್ಲ ಕವಿತೆಗಳನ್ನು ಒಂದೆಡೆ ಸಂಪಾದಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸಿದರೆ ಕನ್ನಡ ಅಧ್ಯಯನಕ್ಕೆ ಆಕರ ಕೃತಿಯಾಗುವುದರಲ್ಲಿ ಸಂದೇಹವಿಲ್ಲ. ಅಲ್ಲದೇ ಇದು ಕನ್ನಡ ಕಾವ್ಯಕ್ಷೇತ್ರಕ್ಕೆ ಒಂದು ವಿಶಿಷ್ಟ ಕೊಡುಗೆಯಾಗುತ್ತದೆ. ಸಂಪಾದಕರೂ ಈ ಬಗ್ಗೆ ಗಂಭೀರವಾಗಿ ಚಿಂತಿಸದರೆ ಕನ್ನಡ ಕಾವ್ಯಲೋಕಕ್ಕೆ ಅನುಕೂಲ ಆಗುತ್ತದೆ ಎಂಬುದು ನನ್ನ ಅಂಬೋಣ.

ಪ್ರಯೋಗಪ್ರಿಯ ಸಂಪಾದಕರಾದ ಸಿ.‌ಮಂಜುನಾಥ ಅವರ ವಿಶಿಷ್ಟ, ವಿನೂತನ  ಈ ‘ಅನುದಿನ ಕವನ’ದ ಮೂಲಕ ನಿರಂತರವಾಗಿ ಕಾವ್ಯ ಕಹಳೆಯ ನಿನಾದ ಅನುರಣಿಸುತಿರಲಿ, ಕನ್ನಡ ಕಾವ್ಯ ಸಂಭ್ರಮ ಇನ್ನೂ ಸಮೃದ್ಧವಾಗಲಿ ಎಂದು ಹಾರೈಸಿ, ಸಂಪಾದಕರನ್ನು ಮನಸಾರೆ ಅಭಿನಂದಿಸುತ್ತೇನೆ.‌

-ಡಾ. ಸಂಗಮೇಶ ಎಸ್. ಗಣಿ
ಮುಖ್ಯಸ್ಥರು, ಕನ್ನಡ ವಿಭಾಗ.
ಟಿಎಂಎಇಎಸ್ ಅಕಾಡೆಮಿ ಪಿಯು ಕಾಲೇಜು, ಹೊಸಪೇಟೆ.
*****