ಮಂಗಳ ಹಾಡಿದ ‘ಮಂಗಳ ವಾರಪತ್ರಿಕೆ’ -ವಿವೇಕಾನಂದ ಕಾಮತ್, ಕಾದಂಬರಿಕಾರರು, ಮಂಗಳೂರು

ಮಂಗಳ ಹಾಡಿದ ಮಂಗಳ ವಾರಪತ್ರಿಕೆ

ಮಂಗಳ ಪತ್ರಿಕೆಯ ಕೊನೆಯ ಮುಖಪುಟ

ಈ ವಾರದ ಸಂಚಿಕೆಯೊಂದಿಗೆ ಮಂಗಳ ಪತ್ರಿಕೆ ತನ್ನ ಪ್ರಕಟಣೆಗೆ ತೆರೆ ಎಳೆದಿದೆ. ಕಾದಂಬರಿಗಳಿಗೆ ಮೀಸಲಾಗಿದ್ದ ಪ್ರಜಾಮತ ಪತ್ರಿಕೆಯ ನಿರ್ಗಮನದ ನಂತರ ಅಷ್ಟೇ ಬೇಗ ಓದುಗರ ಮನಸಲ್ಲಿ ಸ್ಥಾನ ಗಳಿಸಿದ್ದು ಮಂಗಳ ವಾರ ಪತ್ರಿಕೆ. ಆರು ವೈವಿಧ್ಯಮಯ ಕಾದಂಬರಿಗಳು, ಒಂದಕ್ಕಿಂತ ಒಂದು ಭಿನ್ನ.. ಓದುಗರ ಮನಸೂರೆಗೊಂಡು ಪ್ರಕಟಣೆಯ ಅಲ್ಪಾವಧಿಯಲ್ಲಿಯೇ ಓದುಗರ ಮನ ಗೆದ್ದದ್ದು ಇತಿಹಾಸ. ಆರಂಭಿಕ ಸಂಪಾದಕರಾದ ಬಾಬು ಕೃಷ್ಣಮೂರ್ತಿಯವರು ಓದುಗರ ನಾಡಿಮಿಡಿತವನ್ನು ಚೆನ್ನಾಗಿ ಅರ್ಥ ಮಾಡಿಕೊಂಡು, ಅದಕ್ಕೆ ತಕ್ಕಂತೆ ಕಾದಂಬರಿಗಳನ್ನು ಆಯ್ಕೆ ಮಾಡಿಕೊಂಡು ಮಂಗಳಕ್ಕೆ ವಿಶೇಷ ಸ್ಥಾನಮಾನ ದೊರಕಿಸಿ ಕೊಟ್ಟರು. ಒಬ್ಬರಿಗಿಂತ ಒಬ್ಬರು ಜನಪ್ರಿಯ ಕಾದಂಬರಿಕಾರರ ಕಾದಂಬರಿಗಳು ಪತ್ರಿಕೆಯಲ್ಲಿ ಪ್ರಕಟವಾಗುತ್ತಿತ್ತು. ಉಷಾ ನವರತ್ನರಾಮ್, ಸಾಯಿಸುತೆ, ಸಿ.ಎನ್ . ಮುಕ್ತಾ,
ಬಿ .ಎಲ್. ವೇಣು, ಸುದರ್ಶನ ದೇಸಾಯಿ, ಕೌಂಡಿನ್ಯ.. ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.
ಬಾಬು ಕೃಷ್ಣಮೂರ್ತಿ ಅವರ ನಂತರ ಸಂಪಾದಕರಾದ, ಬಿ. ಎಂ. ಮಾಣಿಯಾಟ್, ಎನ್. ಎಸ್. ಶ್ರೀಧರ್ಮೂರ್ತಿ , ಎನ್ನೇಬಿ ಮೊಗ್ರಾಲ್ ಪುತ್ತೂರು. ಅವರು ಕೂಡ ಮಂಗಳದ ಬೆಳವಣಿಗೆಗೆ ಟೊಂಕ ಕಟ್ಟಿ ನಿಂತವರೇ.
ಮಂಗಳೂರಿನ ಹಂಪನಕಟ್ಟೆಯ ಬೀದಿ ಬದಿಯ ಫುಟ್ಪಾತ್ ಒಂದರಲ್ಲೇ ವಾರಕ್ಕೆ ಸುಮಾರು 10 ಸಾವಿರ ಪ್ರತಿಗಳು ಮಾರಾಟವಾಗುತ್ತಿತ್ತು ಎಂದರೆ ಇದರ ಜನಪ್ರಿಯತೆಯನ್ನು ಊಹಿಸಬಹುದು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದಕ್ಕೆ ಅತ್ಯಧಿಕ ಪ್ರಸಾರಣೆ ಇತ್ತು. ಮಧ್ಯಮ ವರ್ಗದ ಜನರ ಅಭಿರುಚಿಗೆ ಹೇಳಿ ಮಾಡಿಸಿದಂತೆ ಪತ್ರಿಕೆ ರೂಪುಗೊಳ್ಳುತ್ತಿತ್ತು.
ಅನೇಕ ಬರಹಗಾರರಿಗೆ ಇದು ಮೊದಲ ಮೆಟ್ಟಿಲಾದ ಪತ್ರಿಕೆ.‌ ತಿದ್ದಿ ಬರೆಸಿ ಬೆಳೆಸಿದ ಪತ್ರಿಕೆ.
25 ವರ್ಷಗಳ ಹಿಂದೆ ನಾನು ಬರೆಯಲು ಆರಂಭಿಸಿದಾಗ ಬೇರೆ ಪತ್ರಿಕೆಗಳಲ್ಲಿ ಕಾದಂಬರಿಗಳು ಪ್ರಕಟವಾದರೂ, ಮಂಗಳದಲ್ಲಿ ಯಾವುದೂ ಬಂದಿರಲಿಲ್ಲ. ಆಗ ಪತ್ರಿಕೆ ಉತ್ತುಂಗದಲ್ಲಿ ಇತ್ತು. ನನ್ನ ಕಾದಂಬರಿಗಳು ಸತತವಾಗಿ ಅಸ್ವೀಕೃತ ಗೊಳ್ಳುತ್ತಿದ್ದವು. ಮಂಗಳ ಪತ್ರಿಕೆ ಧಾರವಾಹಿಗಳಿಗೆ ವಿಶೇಷ ತಂತ್ರ ಬೇಕಿರುತ್ತಿತ್ತು. ಪ್ರತೀ ವಾರದ ಕೊನೆಯಲ್ಲಿ ಕುತೂಹಲವನ್ನು ಕಾಯ್ದಿರಿಸಿ ಓದುಗರನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡುವ ತಂತ್ರಗಾರಿಕೆ ಬೇಕಾಗುತ್ತಿತ್ತು. ಕಾದಂಬರಿ ಬರೆಯುವ ಕಲೆ ಇದ್ದೂ ಕೂಡಾ, ಮಂಗಳಕ್ಕೆ ಬೇಕಾದಂತೆ ರಚಿಸುವ ಸಾಮರ್ಥ್ಯವುಳ್ಳ ಕಾದಂಬರಿಕಾರರನ್ನು ಗುರುತಿಸಿ, ಆಗಿನ ಸಂಪಾದಕರಾಗಿದ್ದ ಬಾಬು ಕೃಷ್ಣಮೂರ್ತಿ ಅವರು, ಸಂಪನ್ಮೂಲ ವ್ಯಕ್ತಿಗಳನ್ನು ಕರೆದು ಕಾದಂಬರಿಕಾರರ ಕಮ್ಮಟ ಏರ್ಪಡಿಸಿ ಬೆಳೆಸುವ ಪ್ರಯತ್ನ ಮಾಡಿದ್ದರು.
ಈ ಪ್ರಯತ್ನ ಬೇರೆ ಯಾವ ಪತ್ರಿಕೆ ಮಾಡಿದ್ದು ಇತಿಹಾಸದಲ್ಲಿ ನನಗೆ ಗೊತ್ತಿಲ್ಲ.
ನಂತರ ಅದೇ ಪತ್ರಿಕೆ ನಿರಂತರವಾಗಿ ನನ್ನ ಒಂಭತ್ತು ಕಾದಂಬರಿಗಳನ್ನು ಪ್ರಕಟಿಸಿ ಕಾದಂಬರಿ ಲೋಕದಲ್ಲಿ ನನಗೆ ಒಂದು ಭದ್ರ ಸ್ಥಾನ ಮತ್ತು ಆತ್ಮವಿಶ್ವಾಸ ತುಂಬಿಸಿದ್ದು ನಿಜ.
ನನ್ನಂತೆ ಅನೇಕ ಕಾದಂಬರಿಕಾರರಿಗೆ ಬೆಳೆಸಿದ, ಪೋಷಿಸಿದ ಪತ್ರಿಕೆ, ಈಗ ಇತಿಹಾಸದ ಪುಟ ಸೇರುತ್ತಿರುವುದು ನಿಜಕ್ಕೂ ನೋವಿನ ಸಂಗತಿ. ಕಥೆ, ಮುಖ್ಯವಾಗಿ ಕಾದಂಬರಿಗಳನ್ನು ಬರೆಯುವವರಿಗೆ ಅದನ್ನು ಬೆಳಕು ತೋರುವ ಪತ್ರಿಕೆಗಳು ಅಗತ್ಯವಾಗಿ ಬೇಕಾಗಿದೆ. ಅಂತಹ ಅವಕಾಶಗಳು ಈ ರೀತಿ ಕ್ಷೀಣಿಸುತ್ತಿರುವುದು ವಿಷಾದನೀಯ.
ಬದಲಾಗುತ್ತಿರುವ ಬದುಕಿನ ಶೈಲಿ, ಹೊಸ ಯುವ ಮನಸ್ಸುಗಳ ಅಭಿರುಚಿಗಳಿಗೆ
40 ವರ್ಷಗಳಿಂದ ಓದುಗರ ಒಡನಾಡಿಯಾದ ಪತ್ರಿಕೆ ಪ್ರಕಟಣೆ ನಿಲ್ಲಿಸುತ್ತಿರುವುದು ಒಂದು ಉದಾಹರಣೆಯಷ್ಟೇ.
ಇದರ ಸ್ಥಾಪಕರು, ವ್ಯವಸ್ಥಾಪಕರು ಕೇರಳದ ವರ್ಗೀಸ್ ಕುಟುಂಬ. ಕನ್ನಡದ ಸಾಹಿತ್ಯದ ವಲಯಕ್ಕೆ ಅವರು ನೀಡಿದ ಸೇವೆಗೆ, ಈ ಪತ್ರಿಕೆಯನ್ನು ಸಮರ್ಪಕವಾಗಿ ಮುನ್ನಡೆಸಿದ ಎಲ್ಲಾ ಸಂಪಾದಕರಿಗೂ ವಿಶೇಷವಾಗಿ ಎನ್ನೇಬಿ ಮೊಗ್ರಾಲ್ ಪುತ್ತೂರು ಅವರು ಒಂಟಿಯಾಗಿ ನಿರ್ವಹಿಸಿ ಅಸು ನೀಗದಂತೆ ಶ್ರಮಿಸಿದರು. ಅವರಿಗೆ ಕೃತಜ್ಞತೆಗಳು .
ಮಂಗಳ ಪತ್ರಿಕೆಯ ಕೊನೆಯ ಮುಖಪುಟ ಇದು.
ಮಂಗಳ ಪತ್ರಿಕೆ ಬಹಳಷ್ಟು ನೆನಪುಗಳಿವೆ.
ಸದಾ ಇರುತ್ತದೆ.

-ವಿವೇಕಾನಂದ ಕಾಮತ್, ಕಾದಂಬರಿಕಾರರು, ಮಂಗಳೂರು