ಹಿರಿಯ ಪತ್ರಕರ್ತ, ಸಾಹಿತಿ ಜಿ. ಎನ್. ರಂಗನಾಥರಾವ್ ವಿಧಿವಶ

ಬೆಂಗಳೂರು, ಅ.9: ಹಿರಿಯ ಪತ್ರಕರ್ತ, ಸಾಹಿತಿ ಜಿ.ಎನ್. ರಂಗನಾಥರಾವ್ ಅವರು ಸೋಮವಾರ ವಿಧಿವಶರಾಗಿದ್ದಾರೆ.                                     ಪ್ರಜಾವಾಣಿ ದಿನಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾಗಿ ಕಾರ್ಯನಿರ್ವಹಿಸುವುದರ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲಿಯೂ ಮಹತ್ವದ ಪಾತ್ರ ವಹಿಸಿದ್ದರು. ಮಿಡಿವ ಮನ, ಪತ್ರಿಕೋದ್ಯಮ, ಬೆಳಕಿಗೊಂದು ಗವಾಕ್ಷಿ ಮುಂತಾದ ಕೃತಿಗಳು ಮಾತ್ರವಲ್ಲದೆ ಅನುವಾದ ಕ್ಷೇತ್ರಕ್ಕೂ ಅವರ ಕೊಡುಗೆ ಅವಿಸ್ಮರಣೀಯ.

ಪರಿಚಯ: ಮೂಲತಃ ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟದ ಬಳಿಯ ಗುಂಬಳ್ಳಿಯ ಅವರು ಹುಟ್ಟಿದ್ದು 1942ರಲ್ಲಿ.

ತಾಯಿನಾಡು, ಸಂಯುಕ್ತ ಕರ್ನಾಟಕ ನಂತರ ಪ್ರಜಾವಾಣಿ ಸೇರಿದರು. ‘ಹೊಸ ತಿರುವು’ ಅವರ ವಿಮರ್ಶಾ ಸಂಕಲನ, ‘ಪುಟ್ಟ ಪಾದಗಳ ಪುಳಕ’ – ಲಲಿತ ಪ್ರಬಂಧಗಳ ಸಂಕಲನ, ಬ್ರೆಕ್ಟ್ ನ ಕಕೇಸಿಯನ್ ಚಾಕ್ ಸರ್ಕಲ್, ಷೇಕ್ಸ್‌ಪಿಯರನ ರೋಮಿಯೊ ಜೂಲಿಯಟ್, ಆಂಟನಿ ಕ್ಲಿಯೋಪಾತ್ರ, ಟಾಲ್ ಸ್ಟಾಯ್ ಅವರ ಡೆತ್ ಆಫ್ ಇವಾನ್ ದಿ ಇಲ್ಯಿಚ್. ಸೋಲ್ಜೆನಿಟಿಸ್ನ ಎ ಡೇವಿನ್ ದಿ ಲೈಫ್ ಆಫ್ ಇವಾನ್ ದಿ ದೆನಿಸೊವಿಚ್, ಕಾಫ್ಕಾ ಕತೆಗಳು, ಲಾರೆನ್ಸ್ ಕತೆಗಳು, ಓ ಹೆನ್ರಿ ಕತೆಗಳು, ಅಂತಿಗೊನೆ, ಜೀನ್ ಜೆನೆಯ ಕಪ್ಪು ಜನಗಳು, ಜೆ.ಡಿ.ಬರ್ನಾಲನ ಸೋಷಿಯಲ್‌ ಸೈನ್ಸ್‌ ಇನ್ ಹಿಸ್ಟರಿ, ಖಲೀಲ್ ಗಿಬ್ರಾನನ ಸಾಹಿತ್ಯ, ಗಾಂಧೀಜಿಯವರ ಮೋಹನದಾಸ್ ಒಂದು ಸತ್ಯಕಥೆ, ರಾಮಚಂದ್ರ ಗುಹಾ ಅವರ ಇಂಡಿಯಾ ಆಫ್ಟರ್ ಗಾಂಧಿ ಹಾಗೂ ಇಂಡಿಯಾ ಬಿಫೋರ್ ಗಾಂಧಿ, ಮಹಾಭಾರತ ಅವರ ಪ್ರಮುಖ ಕೃತಿಗಳು.
ಗಣೇಶ ಅಮ್ಮೀನಗಡ ಅವರ ಕವಿತಾ ಪ್ರಕಾಶನದಿಂದ ಜಿ ಎನ್ ಆರ್ ಅವರ ಸಾಹಿತ್ಯ ಹಾಗೂ ಅವರ ಸಾಹಿತ್ಯದ ಪರಾಮರ್ಶನ ಗ್ರಂಥ ಪ್ರಕಟವಾಗಿತ್ತು.
ಖಾದ್ರಿಶಾಮಣ್ಣ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ,  ಸಂದೇಶ್ ಪ್ರಶಸ್ತಿ, ಟಿಎಸ್ ಆರ್ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿಯ ಫೆಲೋಶಿಪ್, ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದಕ ಪ್ರಶಸ್ತಿ, ಬೆಟಗೇರಿ ಕೃಷ್ಣಶರ್ಮ ಪ್ರಶಸ್ತಿ – ಹೀಗೆ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದರು.


ಶ್ರದ್ಧಾಂಜಲಿ: ಜಿ.ಎನ್. ಆರ್.‌ ಅವರಿಗೆ ಬುಕ್‌ಬ್ರಹ್ಮ ಸತೀಶ್ ಚಪ್ಪರಿಕೆ, ಹಿರಿಯ ಪತ್ರಕರ್ತ, ಪ್ರಕಾಶಕ ಗಣೇಶ ಅಮೀನಗಡ,  ಕರ್ನಾಟಕ ಕಹಳೆ‌ ಡಾಟ್ ಕಾಮ್ ಸಂಪಾದಕ ಸಿ.‌ಮಂಜುನಾಥ್ ಅವರು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ
—–