ಅನುದಿನ ಕವನ-೧೦೧೨, ಕವಿ: ಶಂಕರಾನಂದ ಹೆಬ್ಬಾಳ, ಇಳಕಲ್ಲು, ಕವನದ ಶೀರ್ಷಿಕೆ: ಬೇಲಿ‌ ಮೇಲಿನ ಗುಬ್ಬಿ

ಬೇಲಿ ಮೇಲಿನ ಗುಬ್ಬಿ

ಬೇಲಿಮೇಲೆ ಗುಬ್ಬಿಯೊಂದು
ಒಂಟಿಯಾಗಿ ಕೂರಲು
ವಾಲದಂತೆ ಚಿಂತೆಮಾಡಿ
ಜಗವನೆಲ್ಲ ನೋಡಲು

ಕಾಳನೊಂದು ತಿನ್ನದಂತ
ಹೊಸತು ಗುಬ್ಬಿ ನೋಡಿರಿ
ಗೋಳವನ್ನು ಸುತ್ತದಂತ
ಹಕ್ಕಿಯೆಂದು ಹಾಡಿರಿ

ಮನಕೆ ಖುಷಿಯ ಕೊಟ್ಟು ತಾನು
ತಂತಿ ಮೇಲೆ ನಿಂತಿತು
ಸನಿಹ ಬರದೆ ಅಲುಗದಂತೆ
ಬೇಲಿ ಮೇಲೆ ನೋಡಿತು

ತಾಯಿಯಿಲ್ಲ ತಂದೆಯಿಲ್ಲ
ಗೂಡು ತೊರೆದು ಬಂದಿತು
ಬಾಯಿ ತೆರೆದು ಜಗವ ನೋಡಿ
ಅಚ್ಚರಿಯನು ಪಟ್ಟಿತು

ತೋಟ ಕಾಯೊ ಮಾಲಿಯನ್ನು
ಮೆಲ್ಲ ಮರುಳು ಮಾಡಿತು
ಕಾಟ ಕೊಟ್ಟು ಅಭಿನವನಲಿ
ಪದವನೊಂದು ಹಾಡಿತು


-ಶಂಕರಾನಂದ ಹೆಬ್ಬಾಳ, ಇಳಕಲ್ಲು