ಅನುದಿನ ಕವನ-೧೦೧೩, ಕವಿ: ನಾಗೇಂದ್ರ ಬಂಜಗೆರೆ, ಮಿಂಚೇರಿ, ಬಳ್ಳಾರಿ ತಾ., ಕವನದ ಶೀರ್ಷಿಕೆ:ಚಿಗುರೀತೇ ಒಲವಿನ ಹೂ ಬಳ್ಳಿ..??

ಚಿಗುರೀತೇ ಒಲವಿನ ಹೂ ಬಳ್ಳಿ..??

ನಾ ಆ ಹಾದಿಯಲಿ ಓಡಾಡುವಾಗ ಅದು ಸುಂದರ ಬಳ್ಳಿ.. ಮೊಗ್ಗಿಲ್ಲ ಹೂ ಇಲ್ಲ.. ಬಳ್ಳಿಯ ಸೊಬಗೇ ನೋಡಲು ಚಂದ..
ಅದು ಮಳೆ ಆದ ಮುಂಜಾನೆ ಲತೆಯ ಮುತ್ತಿನ ರಾಶಿಯಲಿ ಮೊಗ್ಗೊಂದು ತೆಲೆಯೆತ್ತಿತ್ತು ಮುದ್ದಿನ ನಗೆ ತೋರಿ..

ಹಸಿರಿಗೆ ಕಳೆಯಾಗಿ ಸೊಂಪಾಗಿ ಮೊಗ್ಗಾಗಿ ಮರುದಿನ ಅರಳಿದ ಹೂ ನಗುತ್ತಾ ಕೇಳಿದಂತಿತ್ತು ಹೇಗಿದ್ದೀನಂತಾ?
ಬ್ಯೂಟಿಪುಲ್ ಎನುತಾ ಚಿವುಟಲು ಕೈ ಹಾಕಿದ ಎನಗನಿಸಿದ್ದು ನೋಡಲಂದದ ಸುಮವ ಕಿತ್ತು ಮಾಡುವುದೆಂತೆಂದು ನೋಡಲಿರಲೆಂದು ಹಾಗೆ ಇರಲುಬಿಟ್ಟೆ..ಹೂ ನನ ನೋಡಿ ನಾ ಹೂ ನೋಡಿ ನಗುತ್ತಿದ್ದೆವು..ನೆನೆದು ನೆನೆದು ನಗುತಲೇ ಇದ್ದೆವು..

ನಗುತಿರಲಿಟ್ಟ ಸುಮವ ನಗುವ ಉಳಿದಿಹದೇ ಎಂದು ಅನುದಿನ ಕಾಣುವ ತವಕದಿ ಅರಳಿದ ಕುಸುಮವ ನೋಡುತಾ ನಲಿಯುತಾ ಹಾಡುತಾ ಯಾರೂ ಕದಿಯದೇ ಕಾಯುತಾ, ನಗುತಾ ಕಳೆದೆ ದಶಕವ..

ದಿನೇ ದಿನೇ ಹೂ ನೂರಾಗಿ ಇಂದ್ರಚಾಪನ ಸರ್ವ ಸುಮಗಳು ಒಂದೇ ಲತೆಯಲಿ ಕಂಡ ಆ ಅಚ್ಚರಿ ಏನೆಂದು ಬಣ್ಣಿಸಲಿ?? ಆ ಸುಮಗಳ ನೋಡುವುದೆಂದರೆ ಮಹಾದಾನಂದ ! ಹಬ್ಬ..! ರಸದೌತಣ..!!!

ಜೇನು ಚಿಟ್ಟೆಗಳಿಗೆ ಮಧುವಾಗಿ ಮಕರಂದವಾಗಿ ಜೇನಾಗಿಹ ಸುಮಗಳ ಅಂದು ಚಿವುಟಿದ್ದರೆ ಇವೆಲ್ಲಿ ಹೋಗಬೇಕಿತ್ತು?? ಹೂ ದುಂಬಿಗಳ ನಗೆ ಕಂಡು ನೆನದಾಗಲೆಲ್ಲೆನಗೆ ಖುಷಿಯೋ ಖುಷಿ..

ಅರಳಿದ ಸುಮವ ಮೊದಲು ನಾ ಕಾಣಬೇಕೆಂದು ಹೋದಾಗ ನನಗಿಂತ ಮೊದಲು ಬಂದ ದುಂಬಿ ಜೇನು ಹೂಗಳ ಮಾತುಕತೆಗಳ ಕಂಡು ಅತೀ ಅಸೋಯೆ .. ಆದರೆ ಅವು ಹೋದ ಮೇಲಾದರೂ ಹೂ ನನ ನೋಡಿ ನಗಬಹುದೊಂದೇ ಭರವಸೆ…

ಅಂದು ನಗುವ ಸುಮಗಳ ಕಾಣಲು ನಗುತಾ ಹೋದ ಎನಗೆ ಕಂಡಿದ್ದು ಹೂ ಬಳ್ಳಿಯ ಎಲೆ- ಬಳ್ಳಿಯೂ ಇಲ್ಲದ ಕೂಳೆಯ ಕಡ್ಡಿ…!
ಎಲ್ಲಿ ಹೋದವು ಸುಮಗಳು??
ಯಾರು ಕೊಯ್ದರು ಹೂಗಳ ಲತೆಯೂ ಸೇರಿ??

ನಾನೂ ಹೂಗಳಿಗೆ ತಡಕಾಡಿ ಹುಡುಕುತ್ತಿರುವೆ ಜೇನು ದುಂಬಿಗಳ ಜೊತೆಗೂಡಿ.. ಮೋಟು ಕೂಳೆಯಲಿ ಲತೆಯಾಗಿ ಅರಳುವುದಾ ಹೂವಾಗಿ?? ಸಿಗುವುದಾ ನನಗಾನಂದ ಸಿಹಿ ಜೇನು ದುಂಬಿಗೆ??

✍️-ನಾಗೇಂದ್ರ ಬಂಜಗೆರೆ, ಮಿಂಚೇರಿ, ಬಳ್ಳಾರಿ ತಾ.