ಹಿರಿಯ ಪತ್ರಕರ್ತ ಕೆ.ಎಸ್. ಸಚ್ಚಿದಾನಂದ ನಿಧನ: ಮುಖ್ಯಮಂತ್ರಿ ಸಿದ್ಧರಾಮಯ್ಯ ಕಂಬನಿ

ಬೆಂಗಳೂರು, ಅ.13: ದಿ ವೀಕ್ ಆಂಗ್ಲಪತ್ರಿಕೆ ಸಂಪಾದಕರಾಗಿದ್ದ ಹಿರಿಯ ಪತ್ರಕರ್ತ ಕೆ.ಎಸ್. ಸಚ್ಚಿದಾನಂದ ಮೂರ್ತಿ (ಸಚ್ಚಿ) ಶುಕ್ರವಾರ ನಗರದಲ್ಲಿ ನಿಧನರಾದರು. ಅವರಿಗೆ 66 ವರ್ಷವಾಗಿತ್ತು.ಮೃತರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ನಗರದ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅಸುನೀಗಿದರು.
ಆರಂಭದಲ್ಲಿ ಯುಎನ್ಐ,  ಇಂಡಿಯನ್ ಎಕ್ಸ್ಪ್ರೆಸ್ ನಂತರ ದಿ ವೀಕ್ ಆಂಗ್ಲ ಮಾಧ್ಯಮ ಸಂಪಾದಕರಾಗಿ ದೆಹಲಿ ಸೇರಿದ್ದ ಸಚ್ಚಿದಾನಂದ ಅವರು ಅಪಾರ ಸ್ನೇಹ ಬಳಗವನ್ನು ಹೊಂದಿದ್ದಾರೆ.
ಮುಖ್ಯಮಂತ್ರಿ ಸಂತಾಪ: ಹಿರಿಯ ಪತ್ರಕರ್ತ, ‘ಮಲಯಾಳ ಮನೋರಮಾ’ ಮತ್ತು ‘ದಿ ವೀಕ್’ ಪತ್ರಿಕೆಗಳ ಮಾಜಿ ಸ್ಥಾನೀಯ ಸಂಪಾದಕರಾಗಿದ್ದ ಕೆ.ಎಸ್.ಸಚ್ಚಿದಾನಂದಮೂರ್ತಿ ಅವರ ಸಾವಿನಿಂದ ಆಘಾತಕ್ಕೀಡಾಗಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕಂಬನಿ‌ ಮಿಡಿದಿದ್ದಾರೆ.
ತಮಗೆ ಆತ್ಮೀಯರು ಮತ್ತು ಹಿತೈಷಿಗಳಾಗಿದ್ದ ಸಚ್ಚಿದಾನಂದಮೂರ್ತಿ ಅವರು ದೆಹಲಿಯ ಮಾಧ್ಯಮರಂಗದಲ್ಲಿ ಸಕ್ರಿಯರಾಗಿದ್ದ ಕೆಲವೇ ಕೆಲವು ಹಿರಿಯ ಕನ್ನಡಿಗ ಪತ್ರಕರ್ತರಲ್ಲಿ ಒಬ್ಬರಾಗಿದ್ದರು.
ರಾಜ್ಯ-ರಾಷ್ಟ್ರಗಳ ವಿದ್ಯಮಾನಗಳ ಜ್ಞಾನಕೋಶದಂತಿದ್ದ ಸಚ್ಚಿದಾನಂದ ಮೂರ್ತಿಯವರ‌ ಸಾವು ಮಾಧ್ಯಮರಂಗಕ್ಕೆ ತುಂಬಲಾರದ ನಷ್ಟ.
ಅವರ ಕುಟುಂಬ ಮತ್ತು ಸ್ನೇಹಿತರ ದು:ಖದಲ್ಲಿ ನಾನು ಭಾಗಿಯಾಗಿದ್ದೇನೆ ಎಂದು ಸಂತಾಪ‌ ಹೇಳಿಕೆಯಲ್ಲಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ.
ಆಸ್ಪತ್ರೆಯಲ್ಲಿ ದಾಖಲಾಗಿರುವ ವಿಷಯ ತಿಳಿದು ಸ್ನೇಹಪರ ವ್ಯಕ್ತಿತ್ವದ ಸಚ್ಚಿದಾನಂದ ಅವರನ್ನು  ನೋಡಲು ಬಂದಿದ್ದ ನಿವೃತ್ತ ಐಎಎಸ್ ಅಧಿಕಾರಿ ಜೈರಾಜ್,ಶಾಸಕ ಮೋಹನ್ ಕೊಂಡಜ್ಜಿ,ಪತ್ರಕರ್ತರಾದ ಹೆಚ್ ಆರ್ ರಂಗನಾಥ್, ರಾಮಕೃಷ್ಣ ಉಪಾಧ್ಯ, ಮೋಹನ್ ರಾಮ್, ಸಿದ್ದರಾಜು, ವಾಸುಕಿ, ಶ್ರೀಕಾಂತ, ಹೆಚ್ ಬಿ ದಿನೇಶ್, ವೈ ಜಿ ಅಶೋಕ್ ಕುಮಾರ್ ಮುಂತಾದವರು ತಮ್ಮ ಒಡನಾಟ, ನೆನಪುಗಳನ್ನು ಹಂಚಿಕೊಂಡರು. ಮಾಜಿ ಪ್ರಧಾನಿ  ಹೆಚ್ ಡಿ ದೇವೇಗೌಡರು ದೂರವಾಣಿ ಮೂಲಕ ಮಾಹಿತಿ ಪಡೆದು ಕೊಂಡಿದ್ದರು.
—–