ಸಮಕಾಲೀನ ಸಮಸ್ಯೆಗಳ ಕುರಿತು ‘ಸಮಾಜ ಮುಖಿ’ ಚರ್ಚೆ ಒಂದು ಅವಲೋಕನ: ಎ.ಎಂ.ಪಿ ವೀರೇಶಸ್ವಾಮಿ, ಹೊಳಗುಂದಿ.

ಅನ್ನದ ಭಾಷೆಯ ಚಿನ್ನದ  ಮಾಸಿಕ  ” ಸಮಾಜಮುಖಿ” ಪತ್ರಿಕಾ ಬಳಗ ಗುರುವಾರ ಸಂಜೆ ಬಳ್ಳಾರಿಯ ಮರ್ಚೇಡ್ ರೆಸಿಡೆನ್ಸಿಸಭಾಂಗಣದಲ್ಲಿ  ಚಿಂತನಶೀಲ ಮನಸುಗಳೊಂದಿಗೆ  ಮುಖಾ ಮುಖಿಯಾಗುವ ಹಾಗೂ ಬಳ್ಳಾರಿ ಭಾಗದ ಸಮಕಾಲೀನ ಸಮಸ್ಯೆಗಳನ್ನು ಕುರಿತಾಗಿ ಚರ್ಚಿಸಲು  ಅನೌಪಚಾರಿಕ ಸಭೆಯನ್ನು ಆಯೋಜಿಸಿತ್ತು.
ಈ ಸಭೆಯಲ್ಲಿ  ಬಹುಮುಖ್ಯವಾಗಿ ಗಣಿ -ಶಿಕ್ಷಣ -ಪರಿಸರ  -ಕಾರ್ಮಿಕರ ಅತಂತ್ರ ಬದುಕು – ಇವುಗಳ ಜೊತೆಗೆ  ಸಮಾಜಮುಖಿ ಪತ್ರಿಕೆಯ ಜನಪರ ಕೆಲಸಗಳ ಬಗ್ಗೆ  ಪ್ರಶಂಸೆ,  ಸಲಹೆ, ಕರ್ನಾಟಕ ನಡೆದು ನೋಡು ಈ ವಿಷಯಗಳು ಚರ್ಚಿತಗೊಂಡವು.  ಚರ್ಚೆಗೂ ಮುನ್ನ ಸಮಕಾಲೀನ ಕೃತಿಯನ್ನು ಸಮಾಜಮುಖಿ ಬಳಗವು ಮತ್ತೊಮ್ಮೆ ಪ್ರೀತಿಯಿಂದ ಬಿಡುಗಡೆಗೊಳಿಸಿತು.  ಕೃತಿಯ ಕುರಿತಾಗಿ ಕವಿ ಅಜಯ್ ಬಣಕಾರ್ ಅವರು ಮಾತನಾಡಿ,   ಇಂದಿನ ರಾಜಕಾರಣಿಗಳಲ್ಲಿ ಸೇವಾ ಮನೋಭಾವದ ಕೊರೆತೆ ಇದೆ .ಬಾಚಿಗೊಂಡನಹಳ್ಳಿ ಚೆನ್ನಬಸವಗೌಡರು,  ಎಂ.ಪಿ ಪ್ರಕಾಶ್ ಅವರು ಸೇವಾ ಬದ್ಧತೆ ಹಾಗೂ ಮೌಲ್ಯಯುತ ರಾಜಕಾರಣವನ್ನು ಮೈಗೂಡಿಸಿಕೊಂಡಿದ್ದರು .ಇವರ   ನಿಸ್ವಾರ್ಥ ಸೇವೆ ಇಂದಿನ ರಾಜಕಾರಣಕ್ಕೆ ಮಾದರಿಯಾಗಲಿ ಎಂದರು. ಸಾಹಿತಿ ಡಾ. ಸಂಪಿಗೆ ನಾಗರಾಜ ಮಾತನಾಡಿ,  ಅಂಕಣ ಬರಹಗಳಿಗೆ ಸಾಹಿತ್ಯದ ಬೆಲೆ ತಂದವರು ಹಾ.ಮಾ. ನಾಯಕ ಅವರ ಸಂಪ್ರತಿ ಕೃತಿ ಇಂದಿಗೂ ನಮಗೆಲ್ಲ ಮಾದರಿಯಾಗಿದೆ. ಲಂಕೇಶರ ಬರಹಗಳು ಅಂದಿನ ರಾಜಕಾರಣಿಗಳ ಎದೆ ನಡುಗಿಸುತ್ತಿದ್ದವು   ಟೀಕೆ ಟಿಪ್ಪಣಿಯಲ್ಲಿನ  ಭಾಷೆ ಅತ್ಯಂತ ಮೊನಚಿನಿಂದ ಕೂಡಿರುತ್ತಿತ್ತು.
ಸಮಾಜಮುಖಿ ಪತ್ರಿಕೆ ಲಂಕೇಶ್ ರ ದಾರಿಯಲ್ಲಿ ಸಾಗುತ್ತಿರುವುದು ನಮಗೆಲ್ಲ ಸಂತಸ, ಇಲ್ಲಿಯ ಲೇಖನಗಳ ಸರಳ ಭಾಷೆ  ವಸ್ತು ವೈವಿದ್ಯತೆ ಓದುಗನನ್ನು ಸೆಳೆಯುತ್ತದೆ .ಕನ್ನಡ ಸಾಹಿತ್ಯ ಪರಿಷತ್ ನಿಂತ ನೀರಾಗಿದೆ.  ಲೇಖನ‌ , ಹಾಗೂ ಆಯಾ ಕಟ್ಟಿನ ಸ್ಥಳಗಳ ಕುರಿತು ಪ್ರಜಾವಾಣಿಯಲ್ಲಿ ಬಂದ ಲೇಖನಗಳನ್ನು ಸಹ ನೆನಪಿಸಿ ಕೊಂಡರು.


ಶ್ರೀಮತಿ ಸವಿತಾ ಸೊನಾಲಿ ಇವರು ಮಾತನಾಡುತ್ತಾ ಈ ಪತ್ರಿಕೆ ನನ್ನಲ್ಲಿ ಓದುವ ಹವ್ಯಾಸವನ್ನು ಇಮ್ಮಡಿಗೊಳಿಸಿದೆ. ಯುವಕರು ಈ ಪತ್ರಿಕೆಯನ್ನು ಓದುವಂತಾಗಬೇಕು, ಸಂಪಾದಕರಾದ ಚಂದ್ರಕಾಂತ ವಡ್ಡು ಅವರು ಪ್ರಜಾವಾಣಿಯಲ್ಲಿ ಬರೆಯುವ   ತಿಂಗಳೇಶ  ಕಾಲಂ ನನಗೆ ತುಂಬಾ ಇಷ್ಟ. ಈ ಪತ್ರಿಕೆಯಲ್ಲಿ ಭ್ರಷ್ಟಚಾರದ ಬಗ್ಗೆ ಹೆಚ್ಚು ಲೇಖನಗಳು ಮೂಡಿಬರಲಿ ಎಂದು  ಸಲಹೆ ನೀಡಿದರು. ನಡೆದುನೋಡು ಕರ್ನಾಟಕ ಉತ್ತಮವಾಗಿ ಮೂಡಿಬರುತ್ತಿದೆ. ಎಂದು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.


ಸಮಕಾಲೀನ ಸಮಸ್ಯೆ ಕುರಿತು ಹಿರಿಯ ನ್ಯಾಯವಾದಿ
ಚಾಗನೂರು ಮಲ್ಲಿಕಾರ್ಜುನ ರೆಡ್ಡಿ ಅವರು ಮಾತನಾಡುತ್ತಾ,   ಸಂಡೂರಿನ ಸುತ್ತ ಮುತ್ತ ನಡೆಯುವ ಗಣಿಗಾರಿಕೆಯಿಂದ ಪ್ರಕೃತಿ ಮೇಲೆ ಆಗುತ್ತಿರುವ ಬಗ್ಗೆ ಸಮಾಜ ಮುಖಿ ಪತ್ರಿಕೆ ಹಾಗು ಸ್ಥಳಿಯರು ದ್ವನಿ ಎತ್ತಬೇಕಾಗಿದೆ.  ಸರ್ಕಾರ ೨೫  ಸಾವಿರ ಕೋಟಿ ಹಣವನ್ನು  ಹಾಳಾದ ಪರಿಸರ ವನ್ನು ಪುನಶ್ಚೇತನ ಗೊಳಿಸಲು ನೀಡಿದ್ದರೂ ಅದು ಸದ್ಬಳಕೆ ಆಗದೆ ಮಧ್ಯವರ್ತಿ ಗಳ ಪಾಲಾಗಿರುವುದು ದುರದೃಷ್ಟಕರ. ಗಣಿಗಾರಿಕೆಯಿಂದ ಬಳ್ಳಾರಿ ಚಿತ್ರದುರ್ಗ ತುಮಕೂರು ಈ ಜಿಲ್ಲೆಗಳ  ಪರಿಸರ ಕಲುಷಿತಗೊಂಡಿದೆ. ಗಣಿಗಾರಿಕೆಯಿಂದ ಸಂಪ್ರದಾಯಿಕ ಉದ್ಯೋಗಗಳಾದ  ಹೈನುಗಾರಿಕೆ ಕುರಿ ಸಾಕಾಣಿಕೆ  ಗುಡಿ ಕೈಗಾರಿಕೆ ವ್ಯವಸಾಯ ಸಂಪೂರ್ಣ  ಹಾಳಾಗಿದೆ. ನಮ್ಮನ್ನು ಆಳುವ ಸರ್ಕಾರಕ್ಕೆ ಇಲ್ಲಿಯ ಜನರ ಬಗ್ಗೆ ಕಾಳಜಿ ಇಲ್ಲವಾಗಿದೆ ಎಂದರು.
ಹೆಸರಾಂತ ಹೋರಾಟಗಾರ  ಹಿರೇಮಠ್ ಅವರು ಅವೈಜ್ಞಾನಿಕ ಗಣಿಗಾರಿಕೆ ಭ್ರಷ್ಟಾಚಾರದ ಬಗ್ಗೆ  ಹೋರಾಟ ಮಾಡುತಿದ್ದರೂ  ಅವರ ಹೋರಾಟಕ್ಕೆ ಸೂಕ್ತ ಬೆಂಬಲ ಸಿಗುತ್ತಿಲ್ಲ. ಈ ಭಾಗದ ಪ್ರಾಥಮಿಕ  ಆರೋಗ್ಯ ಕೇಂದ್ರಗಳಲ್ಲಿ ಜನಸಾಮಾನ್ಯರಿಗೆ  ಸರಿಯಾದ ಚಿಕಿತ್ಸೆ ಸಿಗದೆ ಸಾಮಾನ್ಯ ಜನತೆ ಸಾವಿಗೀಡಾಗುತ್ತಿದ್ದಾರೆ .ಸುಪ್ರೀಂ ಕೋರ್ಟ್ ಸರ್ಕಾರಕ್ಕೆ ಛೀಮಾರಿ ಹಾಕಿದ್ದರೂ ಯಾವುದೇ ಸುಧಾರಣೆಯಾಗಿಲ್ಲ ಪೌಷ್ಠಿಕ ಆಹಾರ  ಗರ್ಭಿಣಿ ಮಹಿಳೆ ಮತ್ತು ಮಕ್ಕಳಿಗೆ ಸಿಗುವಂತಾಗಬೇಕು. ಪರಿಸರ ಪುನಶ್ಚೇತನವಾಗಬೇಕಾದರೆ ಸ್ಥಳೀಯರು ಹಾಗೂ ಸಂಬಂದಪಟ್ಟ ಅಧಿಕಾರಿಗಳು ಈ ಬಗ್ಗೆ ಹೆಚ್ಚು ಕಾಳಜಿವಹಿಸುವಂತಾಗಬೇಕು ಎಂದು ಅಭಿಪ್ರಾಯ ಟ್ಟರು.
ಸಂಶೋದನಾ ವಿದ್ಯಾರ್ಥಿ ಎರ್ರಿಸ್ವಾಮಿ,  ಸರ್ಕಾರದಿಂದ ಮಂಜೂರಾದ ೨೫  ಸಾವಿರ ಕೋಟಿ ಹಣ ಬಡವರಿಗೆ ಹಾಗೂ ಗಣಿಗಾರಿಕೆಯಿಂದ ಹಾನಿಗೊಳಗಾದ ಜನ ಸಮುದಾಯಕ್ಕೆ  ತಲುಪದೆ ಅನ್ಯರ ಪಾಲಾಗಿರುವುದು ನೋವಿನ ಸಂಗತಿ. ಸಂಡೂರು ಹಾಗೂ ಸುತ್ತ ಮುತ್ತಲಿನ ಪ್ರದೇಶದಲ್ಲಿ ಮೈನಿಂಗ್ ಕಂಪನಿಗಳೇ  ತುಂಬಿ ತುಳುಕುತ್ತಿವೆ.  ಕೆಲವು ಹಳ್ಳಿಗಳಲ್ಲಿ ಹಿರಿಯರೇ ಕಾಣುತ್ತಿಲ್ಲ ಅವರೆಲ್ಲಾ ಅಸ್ತಮ ಟಿ.ಬಿ ಕ್ಯಾನ್ಸರ್ ಮುಂತಾದ ಮರಣಾಂತಿಕ ಕಾಯಿಲೆಗೆ ತುತ್ತಾಗಿ ಸಾವನ್ಬಪ್ಪಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಡಾ.ಚಿತ್ರಿಕಿ ತೋಟಪ್ಪ ಅವರು ಮಾತನಾಡುತ್ತಾ ಒಂದು ಕಾಲಕ್ಕೆ ಯಶವಂತನಗರದ ಮಾವಿನ ಹಣ್ಣನ ರುಚಿ ದ್ರಾಕ್ಷಿ ಹಣ್ಣಿನ ಸಿಹಿ ತುಂಬಾ ಪ್ರಸಿದ್ದಿಯಾಗಿತ್ತು  ಆದರೆ ಇಂದು   ಮಾವಿನ ಮರಗಳು ದ್ರಾಕ್ಷಿಬಳ್ಳಿಗಳು ಕಾಣುತ್ತಿಲ್ಲ ಕೃಷಿಭೂಮಿ ಗಣಿ ಭೂಮಿಯಾಗಿ ಮಾರ್ಪಾಡಾಗಿದೆ. ಕರ್ನಾಟಕದ ಕಾಶ್ಮೀರ ಎನಿಸಿಕೊಂಡ ಈ ನಾಡು ಈಗ ಧೂಳು ಮಯವಾಗದೆ  ಬೀರ ತೀರ್ಥ ನವಿಲುತೀರ್ಥ ಈಗ ತಮ್ಮ ಸೌಂದರ್ಯ ಕಳೆದುಕೊಂಡಿವೆ.  ಪತ್ರಿಕೆ ತಮ್ಮ ಲೇಖನಗಳ ಮೂಲಕ ನಮ್ಮಪರಿಸರನ್ನು ಉಳಿಸಿಕೊಳ್ಳವ ಜಾಗೃತಿಯನ್ನು ಜನರಲ್ಲಿ ಬಿತ್ತಬೇಕಾದ ಅಗತ್ಯ ಹಾಗು ಅನಿವಾರ್ಯತೆ ಇದೆ ಎಂದರು.
ಸಭಿಕರ ಕಾಳಜಿಗೆ ಸ್ಪಂದಿಸಿದ ಸಂಪಾದಕ ಚಂದ್ರಕಾಂತ ವಡ್ಡು ಅವರು, ಆಂದೋಲನ, ಚಳುವಳಿ ಹುಟ್ಟುಹಾಕುವ ಅಂದಿನ  ನಾಯಕತ್ವ ಈಗ ಹುಟ್ಟುತ್ತಿಲ್ಲ. ಒಂದು ರೀತಿಯ ನಿರ್ವಾತ ಸೃಷ್ಟಿಆಗಿದೆ ಎಂದು ವಿಷಾಧ ವ್ಯಕ್ತಪಡಿಸಿದರು.
ದೊಡ್ದ ಹೋರಾಟಗಳ ಬದಲಾಗಿ  ಸಣ್ಣ ಸಣ್ಣ ಮಾತುಕತೆಗಳು, ಬಿಡಿ ಬಿಡಿಯಾದ ಲೇಖನಗಳ ಮೂಲಕ ಹೋರಾಟ ರೂಪಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.
ಯುವ- ವಿದ್ಯಾರ್ಥಿ ಸಮುದಾಯವನ್ನು ಹೋರಾಟಗಳಲ್ಲಿ ತೊಡಗಿಸಿಕೊಳ್ಳುವ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು .
ಸೋಮಶೇಖರ್ ಅವರು, ಮೈನಿಂಗ್ ಎಲ್ಲಿಯವರಗೂ ಮ್ಯಾನುವಲ್ ಆಗಿತ್ತೋ  ಅಲ್ಲಿಯವರೆಗೆ  ಸಂಡೂರಿನ ಪರಿಸರ ರಸ್ತೆ  ಜನರ ಆರೋಗ್ಯ ಎಲ್ಲವೂ ಸುರಕ್ಷಿತವಾಗಿದ್ದವು ಯಾವಾಗ ಮೈನಿಂಗ್ ಯಾಂತ್ರಿಕರಣಗೊಂಡಿತೋ ಅಂದಿನಿಂದ  ಪರಿಸರದ ಲೂಟಿ ಅತ್ಯಾಚಾರ ಆರಂಭವಾಗಿ ಪ್ರಸ್ತುತ ಸರ್ವನಾಶವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಂದಿನ ಶಿಕ್ಷಣ ವ್ಯವಸ್ಥೆ ವಿದ್ಯಾರ್ಥಿಗಳಲ್ಲಿ ನೈತಿಕ, ಸಾಮಾಜಿಕ ಹೊಣೆಗಾರಿಕೆ ತುಂಬುವ ಬದಲಾಗಿ  ಅಂಕಗಳ ಬೆನ್ನುಹತ್ತುವಂತೆ ಮಾಡಿದೆ  ಎಂದು ತಮ್ಮ ಅನುಭವವನ್ನು ಹಂಚಿಕೊಂಡರು. ಈ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಂಪಾದಕ ವಡ್ಡು, ವಿದ್ಯಾರ್ಥಿಗಳ ಆಲೋಚನೆ, ಸೃಜನ ಶೀಲತೆ ಹಾಗೂ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಪೋಷಕರು ಶಿಕ್ಷಕರು ಪ್ರಯತ್ನಿಸಬೇಕು.ಕೇವಲ ಅವರನ್ನು ದೂಷಿಸಿದರೆ ಎನೂ ಪ್ರಯೋಜನವಾಗಲಾರದು .ಪೋಷಕರು ಮಕ್ಕಳನ್ನು ಸನ್ಮಾರ್ಗದಲ್ಲಿ ಬೆಳೆಸುವ ಗುರುತರ ಜವಾಬ್ದಾರಿಯನ್ನು ಹೊತ್ತು ಕೊಳ್ಳಬೇಕು ಎಂದರು.
ಸಾಹಿತಿ ಡಾ. ದಸ್ತಗೀರ್ ಸಾಬ್ ದಿನ್ನಿ  ಅವರು, ಲಂಕೇಶ್ ಪ್ತತ್ರಿಕೆಯ ನಂತರ ಸಮಾಜಮುಖಿ ನಾಡಿನ ಜನರ ಗಮನ ಸೆಳೆಯುತ್ತಿದೆ  ಈ ಪತ್ರಿಕೆಯಲ್ಲಿ ವೈಚಾರಿಕ   ಹಾಗೂ ವೈಜ್ಞಾನಿಕ ಲೇಖನಗಳು  ಇನ್ನೂ ಹೆಚ್ಚಾಗಿ ಮೂಡಿ ಬರಲಿ. ಈ ಪತ್ರಿಕೆ ಹೆಚ್ಚಾಗಿ ಹೊಸ ತಲೆಮಾರಿಗೆ ತಲುಪವಂತಾಗಬೇಕು ಎಂದು ಆಶಿಸಿದರು.
ಹಿರಿಯ ಪತ್ರಕರ್ತ, ಹೋರಾಟಗಾರ ಮಲ್ಲಪ್ಪ ವಿ ಬಿ ಪ್ರತಿಕ್ರಿಯಿಸುತ್ತಾ, ಸಮಸ್ಯೆಗಳನ್ನು ಅರುಹಲು   ನಾವು ಕೂಗು ಮಾರಿಗಳಾಗದೆ ಪಿಸುಮಾತಿನ ದ್ವನಿಯಾಗಬೇಕು. ಅಂಗಡಿ ಚೆನ್ನ ಬಸಪ್ಪ, ಚೆನ್ನಬಸವನಗೌಡ ಇವರು ನಮ್ಮ ಜಿಲ್ಲೆಯ  ಪ್ರಬುದ್ದ ರಾಜಕಾರಣಿಗಳು.  ಇವರು  ಹಾಕಿ ಕೊಟ್ಡ ಮಾರ್ಗದಲ್ಲಿ ನಾವು ಸಾಗಬೇಕಾಗಿದೆ ಎಂದರು.
ನಮ್ಮ  ಜಿಲ್ಲೆಯ ಸಮಸ್ಯೆಗಳನ್ನು ಬಗೆಹರಿಸಲು ಬೇರೆ ಜಿಲ್ಲೆಯ ಜನ ಬರಬೇಕಾಗಿದೆ ಇದು ದುರಂತ ಎಂಬ ನೋವನ್ನು ವ್ಯಕ್ತಪಡಿಸಿದರು.


ಪತ್ರಕರ್ತ ಕೆ.ಎಂ ಮಂಜುನಾಥ ಅವರು ಮಾತನಾಡಿ ನಾನು ೧೮ ವರ್ಷದ ಹಿಂದೆ ಪತ್ರಿಕೆ ಸೇರಿದಾಗ ಯಾವ ಸಮಸ್ಯೆಗಳನ್ನು ಕುರಿತು ಬರೆಯುತ್ತಿದ್ದೆನೋ ಈಗಲೂ ಅವೇ ಸಮಸ್ಯೆಗಳನ್ನು ಕುರಿತು ಬರೆಯುತ್ತಿದ್ದೇನೆ. ಇಲ್ಲಿ ಸಮಸ್ಯೆಗಳು ಇನ್ನೂ ಸಮಸ್ಯೆಗಳಾಗಿ ಉಳಿದಿವೆ .ಇಂದು ಸಮಾನ ಮನಸ್ಕರು ಒಂದೆಡೆ ದೊಡ್ಡ ಸಂಖ್ಯೆಯಲ್ಲಿ ಸೇರಿರುವುದು ಸಂತೋಷದ ಸಂಗತಿ ಆದರೆ ಇಲ್ಲಿ ನಡೆಯುವ ಚರ್ಚೆಗಳು ಕೇವಲ ಮಾತಿಗಷ್ಟೇ ಸೀಮಿತವಾಗದೆ ಕಾರ್ಯರೂಪಕ್ಕೆ ಬರುವಂತಾಗಲಿ ಎಂದರು.
ಚಾಗನೂರು ರೈತ ಹೋರಾಟಕ್ಕೆ ಪತ್ರಿಕೆಗಳು ಸ್ಪಂದಿಸಿದ ರೀತಿಯನ್ನು ನಾವ್ಯಾರು ಮರೆಯುವಂತಿಲ್ಲ ಎಂದರು. ರಂಗವಕಲಾವಿದ, ಲೇಖಕ ಎ.ಎಂ.ಪಿ ವೀರೇಶಸ್ವಾಮಿ ಅವರು, ಕಲಾವಿದರ ಸಮಸ್ಯೆಗಳಿಗೆ ಪತ್ರಿಕೆ ಸ್ಪಂದಿಸಲಿ ಎಂದು ಮನವಿ ಮಾಡಿದರು.
ಅಧ್ಯಾಪಕ ಗಿರಿಜಾಪತಿ ಅವರು, ಗಡಿನಾಡಿನ ಸಮಸ್ಯೆಯನ್ನು ವಿವರಿಸಿದರು.
ಚರ್ಚೆಯಲ್ಲಿ ಹಿರಿಯ ಸಾಹಿತಿ ಡಾ.ವೆಂಕಟಯ್ಯ ಅಪ್ಪಗೆರೆ, ಪತ್ರಕರ್ತರಾದ ಎನ್. ವೀರಭದ್ರಗೌಡ, ಮಲ್ಲಯ್ಯ,  ತಿಮ್ಮಾರೆಡ್ಡಿ, ಪ್ರೊ. ಎಸ್ ಎಂ ಶಶಿಧರ್,   ಚಿತ್ರ ಕಲಾವಿದ ಎಂ ಡಿ ರಫಿ, ಸಾಹಿತಿ ಡಾ. ಶಿವಲಿಂಗಪ್ಪ ಹಂದ್ಯಾಳ್  ಮತ್ತಿತರರು ತಮ್ಮ ಅನುಭವಗಳನ್ನು ಹಂಚಿಕೊಂಡರು .
ಸಭೆಯಲ್ಲಿ  ಡಾ. ತಿಮ್ಮನಗೌಡ  ಚಾಂದ್ ಪಾಷ ಗುರುದೇವ ಶರ್ಮಾ, ಪತ್ರಕರ್ತ ಸಿ. ಮಂಜುನಾಥ, ರಂಗತೋರಣದ ಪ್ರಭುದೇವ್ ಕಪ್ಪಗಲ್,  ಮಾನವ ಬಂಧುತ್ವ ವೇದಿಕೆಯ ಸಂಗನಕಲ್ಲು ವಿಜಯಕುಮಾರ್, ಸತೀಶ್ ಹೊಳಗುಂದಿ  ಬಿ ಆರ್ ಎಸ್ ಗೌಡ, ಕವಿ  ವೀರೇಂದ್ರ ರಾವಿಹಾಳ್, ಎಸ್.ಇ ಆಂಜನೇಯ, ಮಹಾನಂದಿಕೊಟ್ಟಂ ಹನುಮಂತಪ್ಪ . ಮುಂತಾದವರು ಪಾಲ್ಗೊಂಡಿದ್ದರು.
ಸುಮಾರು ಎರಡು ಗಂಟೆಗಳ ಕಾಲ ನಿರಂತರ ಸಂವಾದ ಜರುಗಿತು ಕಾರ್ಯಕ್ರಮ ತುಂಬಾ ಅರ್ಥಪೂರ್ಣವೆನಿಸಿತು.


-ಎ.ಎಂ.ಪಿ ವೀರೇಶಸ್ವಾಮಿ, ಹೊಳಗುಂದಿ.
—–