ಅನುದಿನ ಕವನ-೧೦೧೯, ಕವಿಯಿತ್ರಿ: ಮಾನಸ ಗಂಗೆ, ತಿಪಟೂರು, ಕವನದ ಶೀರ್ಷಿಕೆ: ಮಾನಸಗಂಗೆ ಹನಿಗವಿತೆಗಳು

ಮಾನಸ ಗಂಗೆ ಹನಿಗವಿತೆಗಳು

ಆಣತಿ, ವಿನಂತಿ, ಹರಕೆ, ಬೇಡಿಕೆ
ಯಾವುದೋ ಒಂದು;
ಎದುರು ಸಿಕ್ಕಾಗ ಚೂರು ಹೆಗಲಾಗು ಸಾಕು
***
ಸಾವು ಬದುಕಿನ ಕೊನೆಯ ಅತಿಥಿ
ಉಪಚರಿಸಲೇಬೇಕು!
***
ಬದುಕೆ ಉಸಿರುಗಟ್ಟಿಸುತ್ತಿರುವಾಗ
ಬಯಲ ಗಾಳಿಯನು ಆರೋಪಿ
ಎಂದೆನ್ನುವುದು ಅಪರಾಧ!
***
ಇಷ್ಟೊಂದು ಸನಿಹ ಬೇಡೆಂದು
ಇಬ್ಬರ ನಡುವೆ ಒಂದು ಗೆರೆ ಎಳೆದೆ;
ಅವನ ಮೇಲೆ ನಂಬಿಕೆಯಿಲ್ಲ ಎಂದಲ್ಲ
ನನ್ನ ಮೇಲೆಯೇ ನನಗನುಮಾನ
***
ಬಾಡದ ಬತ್ತದ ನಂಬಿಕೆಯ ಹೂ ಇದೆ ನನ್ನಲ್ಲಿ;
ಏರಿದರೆ ನಿನ್ನ ನಿನ್ನ ಶಿರ ಬಿದ್ದರೆ ನಿನ್ನ ಪಾದ
ಮುಕ್ತಿಗಿಷ್ಟು ಸಾಕು!
***
ಬಹುಶಃ ಈ ಹೃದಯಕೆ ಯಾರದ್ದೋ ಶಾಪ ತಟ್ಟಿರಬಹುದು
ಬೇಡ ಎಂದವರ ಹಿಂಬಾಲಿಸಿ ನೋವುಣ್ಣುತ್ತದೆ
***
ವೈರತ್ವಕ್ಕಿಂತ ಕೆಟ್ಟದ್ದು ನನ್ನ ನಿರ್ಲಕ್ಷ್ಯ;
ಪ್ರೀತಿಯ ನೆಂಟಸ್ತಿಕೆ ಇಟ್ಟುಕೊಳ್ಳಿ
ನಿಮ್ಮ ನಡಿಗೆಗೆ ಎದೆ ಹಾಸಿಕೊಡುವೆ
***
ನಿನ್ನ ನಂತರ ನಿದಿರೆಗಷ್ಟೇ ಮಗ್ಗಲು ಬದಲಿಸಿದೆ;
ಕಳಂಕ ಹೊರಿಸಲು ಜಗತ್ತಿಗೆ ಇಷ್ಟೆ ಸಾಕಿತ್ತು
***
ಕೊನೆಯದಾಗಿ ನಿನ್ನ ದನಿ ಕೇಳಿಸು,
ಏನಿಲ್ಲ ಮೆದುಳೆನೋ ಸಕ್ರಿಯವಾಗಿದೆ;
ಆದರೆ ಹೃದಯ?
***
ಕಿಡಿ ತಾಕಿಸು ಈ ರಾತ್ರಿಗೆ ಬೆಳಗಾನ ಬೆಳಗುವ
ಹಣತೆಯಾಗೋ, ಕವಿತೆಯಾಗೋ…
***
ಪ್ರೀತಿ ಇದ್ದರೆ ಶೃಂಗಾರಕ್ಕೇ ಅಣಿಯಾಗು;
ಸಿಂಗಾರಕ್ಕೇನು ಹೆಣಕ್ಕೂ ಮಾಡುತ್ತಾರೆ

– ಮಾನಸ ಗಂಗೆ, ತಿಪಟೂರು
*****