ಅನುದಿನ ಕವನ-೧೦೨೦, ಕವಿ:ನಾಗೇಶ್ ಜೆ ನಾಯಕ, ಸವದತ್ತಿ, ಕಾವ್ಯ ಪ್ರಕಾರ:ಗಜಲ್

ಗಜ಼ಲ್

ನೀನಿಲ್ಲದೆಯೂ ಬಾಳಬಹುದು ಎಂಬ ಭ್ರಮೆ ಈಗ ಕಳೆದು ಹೋಗಿದೆ
ನೀನಿಲ್ಲದೆಯೂ ಬದುಕಬಂಡಿ ಸಾಗುತ್ತದೆ ಎಂಬ ಅಹಂ ಈಗ ಇಳಿದು ಹೋಗಿದೆ

ನೀನು ಮುನಿಸಿಕೊಂಡು ಹೋದ ದಾರಿಗೆ ಹೋಗಿದೆ ಎಲ್ಲ ಸೊಗಸು
ನೀನಿಲ್ಲದೆಯೂ ಖುಷಿಯಿಂದ ಇರಬಲ್ಲೆನೆಂಬ ವಿಶ್ವಾಸ ಈಗ ಅಳಿದು ಹೋಗಿದೆ

ಹಗಲು ರಾತ್ರಿಯೆನ್ನದೆ ಕಾಡುವ ನಿನ್ನ ನೆನಪುಗಳಿಗೆ ಸಾವಿಲ್ಲ ಬಿಡು
ನಿನ್ನ ಸ್ಮರಣೆಯಿಲ್ಲದೆ ನೆಮ್ಮದಿ ನೆಲೆಸುವುದೆಂಬ ಒಣ ಧಿಮಾಕು ಈಗ ಸರಿದು ಹೋಗಿದೆ

ಅಳುತ್ತಿದೆ ಅಂಗಳದ ರಂಗೋಲಿ ಒಣಗಿದೆ ತಲಬಾಗಿಲ ತೋರಣ
ನಿನ್ನ ಜೊತೆಯಿಲ್ಲದೆಯೂ ಜೀವನ ಕಳೆಯುವುದೆಂಬ ಹಂಬಲ ಈಗ ಮುರಿದು ಹೋಗಿದೆ

ನಿನ್ನ ಬರುವಿಕೆಯ ನಿರೀಕ್ಷೆಯಲ್ಲಿಯೇ ಕಾದಿವೆ ‘ನಾಗೇಶಿ’ಯ ಕಂಗಳು
ನಿನ್ನ ಮೇಲಿನ ಕೋಪ ಹುಸಿಮುನಿಸು ಎಲ್ಲವೂ ಈಗ ಮುಗಿದು ಹೋಗಿದೆ

ನಾಗೇಶ್ ಜೆ ನಾಯಕ, ಸವದತ್ತಿ

-ನಾಗೇಶ್ ಜೆ ನಾಯಕ, ಸವದತ್ತಿ
—–