ಮೂರು ವರ್ಷದ ಕೂಸು ನಾನಾಗಿದ್ದಾಗ ಅಮ್ಮ ಇನ್ನಿಲ್ಲವಾದರು.. ಈಗ ನನ್ನೂರೇ ನನ್ನ ತಾಯಿ..
ಈ ಹಿಂದೆ ಬರೆದ ಕವನದ ಸಾಲುಗಳು ಇಂದು ಮತ್ತೆ ನೆನಪಾದವು…..ಕಣ್ಣುಗಳು ಒದ್ದೆಯಾದವು…
-ಮಹಿಮ, ಬಳ್ಳಾರಿ —–
ನನ್ನೂರೇ ನನ್ನ ತಾಯಿ
ಇಲ್ಲಿಗೇ ಬಂದುಬಿಡು
ಇಲ್ಲಿಯೇ ನೀನು ಹುಟ್ಟಿದ್ದು
ಇಲ್ಲಿಗೇ ಬಂದುಬಿಡು
ಅಲ್ಲಿಯೂ ಇದೇ ನೆಲ
ಇಲ್ಲಿಯೂ ಅದೇ ನೆಲ
ಅಲ್ಲಿ ಅಧುನಿಕತೆ ಇರಬಹುದು
ಇಲ್ಲಿ ಭಾವುಕತೆ ಇದೆ
ವೃತ್ತಿಯಿಂದ ನೀನಲ್ಲಿ ಪರಿಚಯ
ಹುಟ್ಟಿನಿಂದಲೇ ನೀ ನಮಗೆ ಪರಿಚಯ
ಒಡಲ ಹಸಿವೆಗೆ ನಾಡಿಗೆಲ್ಲ
ಅನ್ನವಿಕ್ಕುವವರು ನಾವು
ಅದೇ ಮಣ್ಣಿನ ಮನೆ
ಅದೇ ಗುಡಿಸಲು
ನಮ್ಮವು ಇನ್ನೂ
ಡಿಳ್ಳಿ ಗೊತ್ತಿಲ್ಲದಿರುವವರು
ನಾವು
ವಿಮಾನ ಹಾರಿದರೆ ನಮ್ಮೂರ ಮೇಲೆ
ನೀನದರೊಳು ಇಹೆ ಎಂದು
ಓಡೋಡಿ ಬಂದು ನೋಡುವವರು ನಾವು
ಹಿಗ್ಗುವವರು ನಾವು
ಬಾರದಾದೆ ನೀನು ಏಕೋ ನಮ್ಮೂರಿಗೆ
ನೀ ಜನಿಸಿದ ಮನೆ ಪಾಳಾಗಿದೆ ಇಲ್ಲಿ
ಬಂದು ಕಟ್ಟಿಸಿ ನೀನಿಲ್ಲಿಯೇ
ಇದ್ದುಬಿಡು ನಮ್ಮ ಜೊತೆಯಲ್ಲಿ..
ಡಿಳ್ಳಿಯ ಸುದ್ದಿಯನೆಲ್ಲಾ ನಮಗೆ
ನೀ ಹೇಳು
ನಮ್ಮೂರ ಮಣ್ಣಿನಿಂದಲೇ ಆದದ್ದು
ನಿನ್ನ ದೇಹ
ನಮ್ಮದರಂತೆ
ಖಂಡಿತ ಬರುವೆಯಲ್ಲವೇ?
ಉಸಿರಿದ್ದಾಗಲೇ
ಬಂದುಬಿಡು ನಿನ್ನೂರಿಗೆ
ನಾವೆಲ್ಲ ಒಟ್ಟಿಗೆ ನಲಿಯೋಣ
ಮತ್ತೆ
ಹೆಣವಾಗಿ ಬರಬೇಡ
ಉಸಿರಿರುವಾಗಲೇ
ಬಂದುಬಿಡು
-ಮಹಿಮ, ಬಳ್ಳಾರಿ
—–